ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗರಣ: ಗೋಕುಲ್ ನಾಥ್ ಶೆಟ್ಟಿಯನ್ನು ಬಂಧಿಸಿದ ಸಿಬಿಐ

Update: 2018-02-17 08:38 GMT

ಹೊಸದಿಲ್ಲಿ, ಫೆ.17: ಪಂಜಾಬ್ ನ್ಯಾಶನಲ್ ಬ್ಯಾಂಕ್ ನ ಮಾಜಿ ಡಿಜಿಎಂ ಗೋಕುಲ್ ನಾಥ್ ಶೆಟ್ಟಿ ಹಾಗು ಇತರ ಇಬ್ಬರನ್ನು ಸಿಬಿಐ ಅಧಿಕಾರಿಗಳ ತಂಡ ಶನಿವಾರ ಬಂಧಿಸಿದೆ. ಬಂಧಿತರನ್ನು ಮುಂಬೈಯ ಸಿಬಿಐ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಲಾಗುವುದು ಎಂದು ತಿಳಿದುಬಂದಿದೆ.

ಗೋಕುಲ್ ನಾಥ್ ಶೆಟ್ಟಿ ಜೊತೆಗೆ ಪಂಜಾಬ್ ನ್ಯಾಶನಲ್ ಬ್ಯಾಂಕ್ ನ ಮನೋಜ್ ಕಾರಟ್ ಹಾಗು ನೀರವ್ ಮೋದಿ ಗ್ರೂಪ್ ಆಫ್ ಫರ್ಮ್ಸ್ ನ ಹೇಮಂತ್ ಭಟ್ ಎಂಬವರನ್ನೂ ಬಂಧಿಸಲಾಗಿದೆ.

ಗೋಕುಲ್ ನಾಥ್ ಶೆಟ್ಟಿಯ ಮಲಾಡ್ ನಲ್ಲಿರುವ ಮನೆಗೆ ಶುಕ್ರವಾರ ಸಿಬಿಐ ಅಧಿಕಾರಿಗಳು ತೆರಳಿದ್ದರು. ಆದರೆ ಅವರು ಅಲ್ಲಿರಲಿಲ್ಲ. ಶುಕ್ರವಾರ ನೀರವ್ ಮೋದಿ ಹಾಗು ಮೆಹುಲ್ ಚೋಕ್ಸಿ ವಿರುದ್ಧ ಸಿಬಿಐ ಎಫ್ ಐಆರ್ ದಾಖಲಿಸಿದೆ. ದಾಳಿ ಸಂದರ್ಭ ಜಾರಿ ನಿರ್ದೇಶನಾಲಯವು 5,100 ಕೋಟಿ ರೂ. ಮೌಲ್ಯದ ಚಿನ್ನ ಹಾಗು ವಜ್ರಗಳನ್ನು ವಶಪಡಿಸಿಕೊಂಡಿತ್ತು.

ಸಿಬಿಐ ತಂಡ ಗುರುವಾರ ಹಾಗೂ ಶುಕ್ರವಾರ ಪಶ್ಚಿಮ ಮುಂಬೈನ ಮಲಾಡ್‌ನಲ್ಲಿರುವ ಶೆಟ್ಟಿಯ ಫ್ಲಾಟ್‌ಗೆ ತೆರಳಿ ಅವರ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರನ್ನು ವಿಚಾರಣೆ ನಡೆಸಿದೆ. ಫ್ಲಾಟ್‌ನ್ನು ಯಾವಾಗ ಖರೀದಿಸಲಾಗಿದೆ. ಹಣವನ್ನು ಹೇಗೆ ಪಾವತಿಸಲಾಗಿದೆ. ಯಾವ ಮೂಲದಿಂದ ಹಣ ಬಂದಿದೆ ಎಂದು ಶೆಟ್ಟಿ ಕುಟುಂಬದವರನ್ನು ಸಿಬಿಐ ತಂಡ ಪ್ರಶ್ನಿಸಿದೆ. ಶೆಟ್ಟಿಯ ಬ್ಯಾಂಕ್ ಖಾತೆಗಳು, ಲಾಕರ್‌ಗಳು ಹಾಗೂ ಇತರ ಆಸ್ತಿ-ಪಾಸ್ತಿಯ ಬಗ್ಗೆ ತಿಳಿದುಕೊಳ್ಳಲು ಬಯಸಿದೆ.

 ಪಿಎನ್‌ಬಿಗೆ 4,886.70 ಕೋಟಿ ರೂ. ವಂಚನೆ ಆದ ಪ್ರಕರಣದಲ್ಲಿ ನೀರವ್ ಮೋದಿ ಕಂಪೆನಿಯ ಬಗ್ಗೆ ವೌನ ಸಮ್ಮತಿ ನೀಡಿರುವ ಆರೋಪ ಎದುರಿಸುತ್ತಿರುವ ಬ್ಯಾಂಕ್ ಅಧಿಕಾರಿಗಳಾದ ಶೆಟ್ಟಿ ಹಾಗೂ ಖರಾಟ್ ಎಫ್‌ಐಆರ್‌ನಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆಂದು ಸಿಬಿಐ ತಿಳಿಸಿದೆ.

ಆರೋಪಿ ಅಧಿಕಾರಿಗಳು ವಿವಿಧ ಭಾರತೀಯ ಮೂಲದ ಬ್ಯಾಂಕ್‌ಗಳ ವಿದೇಶಿ ಶಾಖೆಗಳನ್ನು ಬೆಂಬಲಿಸಲು ಮೋಸದ, ಅನಧಿಕೃತ ಪತ್ರಗಳನ್ನು ಪ್ರಕಟಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News