ಸೌದಿಯಲ್ಲಿ ಕರಾವಳಿ ಕನ್ನಡಿಗರಿಗೆ ಕಂಟಕವಾದ ಆರ್ಥಿಕ ಸಂಕಷ್ಟ, ಹೊಸ ನಿಯಮಗಳು

Update: 2018-02-17 11:24 GMT

ಇತ್ತೀಚಿನ ವರ್ಷಗಳಲ್ಲಿ ತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಳಿಕೆ ಹಾದಿಯಲ್ಲಿದ್ದು, ತೈಲ ಬೆಲೆಯ ವ್ಯತ್ಯಯದಿಂದಾಗಿ ಸೌದಿಯಲ್ಲಿ ಆರ್ಥಿಕ ಬಿಕ್ಕಟ್ಟು ಉಲ್ಬಣಗೊಂಡಿದೆ. ಇದರಿಂದಾಗಿ ಭಾರತೀಯ ಮೂಲದ ಸಾವಿರಾರು ಕಾರ್ಮಿಕರು ಉದ್ಯೋಗವನ್ನು ಕಳೆದುಕೊಂಡಿದ್ದು, ಆರ್ಥಿಕ ಬಿಕ್ಕಟ್ಟು, ರಾಜಮನೆತನದ ಒಡಕು ಹಾಗೂ ಹೊಸ ರಾಜ ಮುಹಮ್ಮದ್ ಬಿನ್ ಸಲ್ಮಾನ್ ರ ನೂತನ ನಿಯಮಾವಳಿಗಳು ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರನ್ನು ತೀವ್ರ ಆತಂಕಕ್ಕೀಡು ಮಾಡಿವೆ.

ಸೌದಿ ಅರೇಬಿಯಾದಲ್ಲಿ ಕಳೆದ ಕೆಲ ಸಮಯದಿಂದ 50 ಸಾವಿರದಷ್ಟು ಮಂದಿ ಭಾರತೀಯರ ಪರಿಸ್ಥಿತಿ ಶೋಚನೀಯವಾಗಿದೆ. ಅವರು ಕೆಲಸ ಮಾಡುತ್ತಿದ್ದ ಕಂಪೆನಿಗಳು ಕೆಲಸದಿಂದ ಕೆಲವರನ್ನು ತೆಗೆದು ಹಾಕಿದ್ದರೆ, ಮತ್ತೆ ಕೆಲವು ಕಂಪೆನಿಗಳು ಸೌದಿಯಲ್ಲಿ ಬಾಗಿಲು ಮುಚ್ಚಿವೆ. ಪರಿಣಾಮ ಸಂಬಳವಿಲ್ಲದೇ ಭಾರತೀಯರು ಪರಿತಪಿಸುವಂತಾಗಿದ್ದು, ಮರಳಿ ಭಾರತಕ್ಕೆ ಬರೋಣ ಎಂದರೆ ವೀಸಾ ಕುರಿತ ಕಾನೂನು ತೊಡಕು ಅವರನ್ನು ಕಾಡಿದೆ. ಒಟ್ಟಾರೆಯಾಗಿ ಜೀವನಕ್ಕಾಗಿ ಉದ್ಯೋಗ ಅರಸಿ ತನ್ನ ಕುಟುಂಬವನ್ನು ಬಿಟ್ಟು ಸೌದಿಗೆ ತೆರಳಿದ್ದ, ಹಗಲಿರುಳು ದುಡಿದು ಒಂದಿಷ್ಟು ಹಣವನ್ನು ಸಂಪಾದಿಸುವ ಸಲುವಾಗಿ ಸೌದಿ ಅರೇಬಿಯಾವನ್ನು ನೆಚ್ಚಿಕೊಂಡಿದ್ದ ಭಾರತೀಯ ಅನಿವಾಸಿಗಳಿಗೆ ಅಲ್ಲಿನ ಆರ್ಥಿಕ ಬಿಕ್ಕಟ್ಟು ಹೊಸ ನಿಯಮಾವಳಿಗಳು ಭಾರೀ ಕಂಟಕವಾಗಿ ಪರಿಣಮಿಸಿದೆ .

ಸೌದಿ ಅರೇಬಿಯಾದಲ್ಲಿ ಅಲ್ಲಿನ ದೊರೆ ಅನೇಕ ಕ್ರಾಂತಿಕಾರಕ ಬದಲಾವಣೆ ತರುತ್ತಿದ್ದಾರೆ. ಸ್ವದೇಶೀಯರಿಗೆ ನೌಕರಿ, ಪ್ರತಿವೊಂದು ವಸ್ತುಗಳ ಮೇಲೆ ವ್ಯಾಟ್, ಅವಲಂಬಿತರ ಮೇಲೆ ತಲೆ ಕಂದಾಯ, ಕಾರ್ಮಿಕ ಪರವಾನಿಗೆ ದರದಲ್ಲಿ ಹೆಚ್ಚಳ ಮೊದಲಾದ ನಿಯಮಾವಳಿಗಳನ್ನು ಜಾರಿಗೊಳಿಸಲಾಗಿದೆ. 3 ವರ್ಷಗಳ ಹಿಂದೆ 'ನಿತಾಕತ್' ಎಂಬ ಹೊಸ ನಿಯಮಾವಳಿಯನ್ನು ತಂದು ಕಂಪೆನಿಗಳು ಕಡ್ಡಾಯವಾಗಿ 50 ಶೇ. ಸೌದಿ ಪ್ರಜೆಗಳನ್ನು ಕೆಲಸದಲ್ಲಿ ಇಟ್ಟುಕೊಳ್ಳಬೇಕೆಂಬ ಸ್ವದೇಶಿಕರಣ ನೀತಿ ಜಾರಿಗೆ ತಂದಿತ್ತು. ಇದೀಗ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಸೌದಿ ಅರೇಬಿಯಾ ತನ್ನ ದೇಶದಲ್ಲಿನ ಆರ್ಥಿಕ ಬಿಕ್ಕಟ್ಟು ನಿವಾರಿಸಿಕೊಳ್ಳಲು ತನ್ನ ದೇಶದಲ್ಲಿರುವ ಹೊರ ದೇಶಗಳ ಪ್ರಜೆಗಳ ಮೇಲೆ 'ಲೆವಿ' ಎಂಬ ಹೊಸ ನಿಯಮಾವಳಿಯನ್ನು ಜಾರಿಗೊಳಿಸಿದ್ದು ಈ ನಿಯಮ ಅನಿವಾಸಿ ಭಾರತೀಯರಿಗೆ ಬಾರಿ ಹೊಡೆತವನ್ನು ನೀಡಲಿವೆ ಎನ್ನಲಾಗಿದೆ.

ಲೆವಿಯನ್ನು ಎರಡು ಭಾಗವಾಗಿ ವಿಭಜಿಸಲಾಗಿದ್ದು, ಲೆವಿ1 ಸೌದಿಯಲ್ಲಿ ನೆಲೆಸಿರುವ ಪ್ರತಿ ಪ್ರಜೆಯ ಡಿಪೆಂಡರ್ ಅಂದರೆ ಉದ್ಯೋಗದಲ್ಲಿರುವ ಒಬ್ಬ ವ್ಯಕ್ತಿಯ ಕುಟುಂಬದ ಪ್ರತಿ ತಲೆಗೆ ಪ್ರತಿ ತಿಂಗಳು 100 ರಿಯಾಲ್ (1700 ರೂಪಾಯಿ) ತಲೆ ಕಂದಾಯ ಕಟ್ಟ ಬೇಕಾಗಿದೆ. ಕಳೆದ ಜುಲೈ 2017ರಿಂದ 2018ರ ಜುಲೈ ತಿಂಗಳ ತನಕ ತಲೆ ಕಂದಾಯ ತಲಾ 100 ರಿಯಾಲ್ ಇದ್ದರೆ, 2018ರ ನಂತರ 2019ರ ಜುಲೈ ಗೆ ಇದು 200 ರಿಯಲ್ (3400 ರೂಪಾಯಿ)ಆಗಲಿದೆ. 2018 ಎಪ್ರಿಲ್ ನಂತರ ಸೌದಿ ತೊರೆದು ತಾಯ್ನಾಡಿಗೆ ಬರುವವರ ಸಂಖ್ಯೆ ಕೂಡ ಹೆಚ್ಚಳವಾಗಲಿದೆ. ಕೇವಲ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಾರ್ಚ್ ತನಕ ನಿಲ್ಲಲೇಬೇಕಾದ ಅನಿವಾರ್ಯ ಹಲವರಿಗಿದೆ. ಎಪ್ರಿಲ್ ನಲ್ಲಿ ಮಕ್ಕಳ ಪರೀಕ್ಷೆಗಳು ಮುಕ್ತಾಯವಾಗಲಿದ್ದು, ಅಲ್ಲಿ ತನಕ ಹೇಗಾದರು ಸುಧಾರಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಹಲವರಿದ್ದಾರೆ. ಒಬ್ಬಾತ ತನ್ನ ಹೆಂಡತಿ ಇಬ್ಬರು ಮಕ್ಕಳ ಜೊತೆಗಿದ್ದರೆ 300 ರಿಯಾಲ್ (5,100 ರೂಪಾಯಿ) ತಲೆ ಕಂದಾಯ ಕಟ್ಟಬೇಕಾಗಿದೆ. ಇದು ಪ್ರತಿ ವರ್ಷ ದ್ವಿಗುಣವಾಗುತ್ತಾ ಹೋಗುತ್ತವೆ. 2020 ರಲ್ಲಿ ಪ್ರತಿ ತಲೆಗೆ 400 ರಿಯಲ್‌ಗೆ (6,800 ರೂಪಾಯಿ) ಏರಿಕೆಯಾಗಲಿವೆ.

ಇದು ಲೆವಿ1ನ ಕಥೆಯಾದರೆ ಲೆವಿ2 ತನ್ನ ಇಖಾಮದ ಮೇಲೆ ಲೇಬರ್ ಕಚೇರಿಗೆ (maqthable haamel )ಕಟ್ಟಬೇಕಾದ ಹಣ. ಗ್ರೀನ್ ಲೈನ್ ನಲ್ಲಿರುವ ಕಂಪೆನಿ 50% ಸೌದಿ ಪ್ರಜೆಗಳು ಇರುವ ಕಂಪೆನಿಯಲ್ಲಿ ಕೆಲಸದಲ್ಲಿರುವ ವ್ಯಕ್ತಿ ಪ್ರತಿ ತಿಂಗಳು 300 ರಿಯಾಲ್‌ (5100 ರೂಪಾಯಿ)ಕಾರ್ಮಿಕ ಪರವಾನಿಗೆ ಕಂದಾಯ ಕಟ್ಟಬೇಕಾದರೆ. ಹಳದಿ ಹಾಗೂ ಕೆಂಪು ಲೈನ್ ನಲ್ಲಿರುವ ಕಂಪನಿ ಹೊರ ದೇಶಗಳ ಪ್ರಜೆಗಳು ಜಾಸ್ತಿ ಇರುವ ಕಾರಣ ಕಂಪನಿಯಲ್ಲಿರುವ ವ್ಯಕ್ತಿ ತಲಾ 400 ರಿಯಲ್ (6,800 ರೂಪಾಯಿ)ಲೇಬರ್ ಫೀ ಕಟ್ಟಬೇಕಾಗಿದೆ. ಇದು ಕೂಡ ಪ್ರತಿ ವರ್ಷ ದ್ವಿಗುಣವಾಗುತ್ತಾ ಹೋಗಲಿದೆ. ಅಂದರೆ ಒಟ್ಟಾರೆಯಾಗಿ 'ಕೆರೆಯ ನೀರನ್ನು ಕೆರೆಗೆ ಚೆಲ್ಲಿ'ಎಂಬಂತೆ ಅಲ್ಲಿ ದುಡಿದ ಹಣವನ್ನು ಅಲ್ಲಿಯೇ ವ್ಯಯಿಸಬೇಕೆಂಬುದು ಸೌದಿ ರಾಜರ ಲೆಕ್ಕಾಚಾರ.

ಅತ್ತ ಸೌದಿ ಅರೇಬಿಯಾದಲ್ಲಿ ಆರ್ಥಿಕ ಬಿಕ್ಕಟ್ಟು, ಹೊಸ ನಿಯಮಾವಳಿಯಿಂದ ಕರಾವಳಿಯ ಕನ್ನಡಿಗರು ಕಂಗೆಟ್ಟಿದ್ದರೆ, ಇತ್ತ ಕರಾವಳಿಯಲ್ಲಿಯೂ ಅದರ ನೇರ ಪರಿಣಾಮ ಬೀರಿದೆ. ಕರಾವಳಿಯ ಅಭಿವೃದ್ಧಿಯಲ್ಲಿ ಅನಿವಾಸಿ ಕನ್ನಡಿಗರ ಕೊಡುಗೆ ಬಹಳಷ್ಟಿವೆ ಎಂಬುದನ್ನು ನಾವು ಮರೆಯುವಂತಿಲ್ಲ. ಸೌದಿ ಅರೇಬಿಯಾದಲ್ಲಿ ಅದೆಷ್ಟೋ ಅನಿವಾಸಿ ಕನ್ನಡಿಗರು ಉನ್ನತ ಹುದ್ದೆಯಲ್ಲಿದ್ದು, ಅದೂ ಅಲ್ಲದೆ ವ್ಯಾಪಾರ ವಹಿವಾಟು ನಡೆಸಿ ಕರಾವಳಿಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅದೂ ಅಲ್ಲದೆ ಕರಾವಳಿಯ ವ್ಯಾಪಾರ ವಹಿವಾಟು ಸೌದಿ ಅರೇಬಿಯಾದ ದುಡಿಮೆಯನ್ನು ಅವಲಂಬಿಸಿದೆ ಎಂದರೆ ತಪ್ಪಾಗಲಾರದು. ಸೌದಿಯಲ್ಲಿ ದುಡಿದು ಕಳುಹಿಸಿದ ಹಣದಿಂದಲೇ ಜೀವನ ಸಾಗಿಸುವ ಅದೆಷ್ಟೋ ಕುಟುಂಬಗಳು ಇಂದು ಮುಂದೇನು ಗತಿ ಎಂಬುದನ್ನು ದೇವರ ಮೊರೆ ಹೋಗುವಂತಾಗಿದೆ. ಒಟ್ಟಾರೆಯಾಗಿ ಸೌದಿಯಲ್ಲಿನ ಆರ್ಥಿಕ ಬಿಕ್ಕಟ್ಟು ಕರಾವಳಿಯಲ್ಲಿ ಆತಂಕದ ಕರಿ ಛಾಯೆ ಮೂಡಿಸಿದೆ ಎಂಬುದಂತೂ ನಿಜ.

ಸದ್ಯ ಆರ್ಥಿಕ ಸಂಕಷ್ಟದಲ್ಲಿರುವ ಸೌದಿ ಅರೇಬಿಯಾದಲ್ಲಿರುವ ನನ್ನ ಆತ್ಮೀಯ ಮಿತ್ರರಲ್ಲಿ ಈ ಬಗ್ಗೆ ವಿಚಾರಿಸಿದಾಗ ಸೌದಿ ಅರೇಬಿಯಾದ ಬ್ಯಾಂಕ್ ವೊಂದರಲ್ಲಿ ಉನ್ನತ ಹುದ್ದೆಯಲ್ಲಿರುವ ಕರಾವಳಿಯ ಕನ್ಯಾನದ ಫಾರೂಕ್ “ಸದ್ಯ ಆರ್ಥಿಕ ಸಂಕಷ್ಟ, ದಿನಕ್ಕೊಂದು ನಿಯಮಾವಳಿಗಳಿಂದ ವಿದೇಶಿಗಳಾದ ನಾವು ತೀವ್ರ ಆತಂಕಕ್ಕೊಳಗಾಗಿದ್ದು ನಿಜವಾದರೂ ಭಾರತದ ಮಾಧ್ಯಮಗಳಲ್ಲಿ ಬಿಂಬಿಸಿದಂತೆ ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲ ಎಂಬುದು ಸತ್ಯಕ್ಕೆ ದೂರವಾದದ್ದು. ಸದ್ಯ ಯಾವ ಕಾರ್ಮಿಕನಿಗೂ ಒಪ್ಪೊತ್ತಿನ ಊಟಕ್ಕೆ ತೊಂದರೆಯಾಗಿಲ್ಲ" ಎನ್ನುತ್ತಾರೆ.

ಸೌದಿ ಅರೇಬಿಯಾದ ರಾಜಕುಟುಂಬದ ಪ್ರತಿಷ್ಠಿತ ಯೂಸುಫ್ ಅಲ್ ನಾಗಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ಕರಾವಳಿಯ ಪಾಣೆಮಂಗಳೂರಿನ ಹಾರಿಸ್, “ಲೆವಿ ಎಂಬ ಹೊಸ ರೀತಿಯ ತಲೆ ಕಂದಾಯ ನಮಗೆ ಭಾರೀ ಹೊಡೆತ ನೀಡಿದೆ. ಇದರಿಂದಾಗಿ ನನ್ನ ಕುಟುಂಬವನ್ನು ಈಗಾಗಲೇ ತವರಿಗೆ ಕಳಿಸಿದ್ದು, ಸದ್ಯ ಯಾವಾಗ ನಮ್ಮನ್ನು ಕೆಲಸದಿಂದ ತೆಗೆಯುತ್ತಾರೋ ಎಂಬುದು ಗೊತ್ತಾಗುತ್ತಿಲ್ಲ. ಸದ್ಯ ನಮ್ಮ ಸೌದಿಯಲ್ಲಿನ ಜೀವನ ನೀರಿನ ಮೇಲಿನ ಗುಳ್ಳೆಯಂತೆ" ಎನ್ನುತ್ತಾರೆ.

"ನಿತಾಕತ್ ಹಾಗೂ 'ಲೆವಿ' ಎಂಬ ಹೊಸ ರೀತಿಯ ಕಾನೂನು ಜಾರಿಗೊಳಿಸಿ ಸೌದಿ ಸರಕಾರ ವಿದೇಶಿಗರಿಂದ ಭಾರಿ ಹಣ ವಸೂಲಿಗೆ ತೊಡಗಿವೆ. ಇದು ಸೌದಿಯಲ್ಲಿನ ಕಥೆಯಾದರೆ ತವರಿಗೆ ಬಂದು ಏನಾದರೂ ಮಾಡೋಣ ಅಂದರೆ ಸದ್ಯ ನೋಟ್ ಬ್ಯಾನ್ ಮತ್ತು ಜಿಎಸ್ ಟಿಯಿಂದ ಕಂಗೆಟ್ಟಿರುವ ಭಾರತದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಭಾರತದಲ್ಲಿನ ನಿರುದ್ಯೋಗಸ್ತರಿಗೆ ಪಕೋಡ ಮಾಡಿ ಜೀವನ ನಡೆಸಿ ಎಂದು ಹೇಳುತ್ತಿರುವ ನಮ್ಮ ಪ್ರಧಾನಮಂತ್ರಿಯವರಲ್ಲಿ ನಾವು ಕೂಡ ಬಂದು ಪಕೋಡ ಮಾಡಿದರೆ ಪಕೋಡ ತಿನ್ನುವವರು ಯಾರು ಎಂದು ಕೇಳಬೇಕಾಗಿದೆ. ಸದ್ಯ ಇಲ್ಲಿನ ದುಡಿಮೆಯನ್ನು ತಾಯ್ನಾಡಿನಲ್ಲೂ ಮುಂದುವರಿಸಿದರೂ ಒಪ್ಪೊತ್ತಿನ ಊಟಕ್ಕೇನು ಅಡ್ಡಿಯಾಗದು" ಎಂದು ಸೌದಿ ಅರೇಬಿಯಾದಲ್ಲಿ ಹಣ ಹೂಡಿಕೆ ಮಾಡಿ ಸ್ವತಃ ಬಿನ್ ಫಹಾದ್ ಎಂಜಿಯರಿಂಗ್ ಕಂಪೆನಿಯನ್ನು ಹೊಂದಿರುವ ಕರಾವಳಿಯ ಪಡುಬಿದ್ರಿಯ ಮುತ್ತಲಿಬ್ ಹೇಳುತ್ತಾರೆ.

2017ರ ಹೊತ್ತಿಗೆ ಸೌದಿ ಅರೇಬಿಯಾದಲ್ಲಿರುವ ಭಾರತೀಯರ ಸಂಖ್ಯೆ ಸುಮಾರು 30 ಲಕ್ಷವನ್ನು ದಾಟಿದೆ. ಇವರಲ್ಲಿ ಅಧಿಕ ಮಂದಿ ಕೇರಳ ಮತ್ತು ಕರ್ನಾಟದವರೇ ಆಗಿದ್ದಾರೆ. ಇನ್ನುಳಿದ ಕೊಲ್ಲಿ ರಾಷ್ಟ್ರಗಳಲ್ಲಿ ಅಪಾರ ಸಂಖ್ಯೆಯ ಭಾರತೀಯರಲ್ಲಿ ವಿಶೇಷವಾಗಿ ಕನ್ನಡಿಗರಿದ್ದಾರೆ. ಕೊಲ್ಲಿ ರಾಷ್ಟ್ರದಲ್ಲಿ ಸುರಿಸಿದ ಬೆವರಿನ ಹನಿಯ ಪ್ರತಿಫಲವನ್ನು ತಾಯ್ನಾಡಿನ ಶ್ರೇಯೋಭಿವೃದ್ಧಿಗೆ ವಿನಿಯೋಗಿಸುವ, ಆರ್ಥಿಕ ಚಟುವಟಿಕೆಗಳಿಗೆ ವೇಗವರ್ಧಕಗಳಂತಿರುವ ಅನಿವಾಸಿ ಭಾರತೀಯರಿಗೆ ಭಾರತ ಸರಕಾರ ಆತ್ಮ ಸ್ಥೈರ್ಯ ತುಂಬಬೇಕು, ತವರಿಗೆ ಕರೆತರುವ ಜವಾಬ್ದಾರಿಯ ಜೊತೆಗೆ ಕೆಲಸ ಕಳೆದುಕೊಂಡಿರುವ ಕಾರ್ಮಿಕರಿಗೆ ಜೀವನ ಸಾಗಿಸಲು ಸರಿಯಾದ ಯೋಜನೆಯನ್ನು ರೂಪಿಸಬೇಕಾಗಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಂಕಷ್ಟದಲ್ಲಿರುವ ಭಾರತೀಯ ಕಾರ್ಮಿಕರ ಸಹಾಯಕ್ಕೆ ಧಾವಿಸಿ ಅವರನ್ನು ಸಂಕಷ್ಟದಿಂದ ಪಾರುಮಾಡುವ ಜವಾಬ್ದಾರಿ ಕೇಂದ್ರ ಸರಕಾರದ ಜೊತೆಗೆ ರಾಜ್ಯ ಸರಕಾರದ ಮೇಲಿದೆ.

Similar News