ಪ್ರೀತಿ-ಪ್ರೇಮದ ಚಳವಳಿ ನಡೆಯಲಿ: ಕೆ.ವೈ.ನಾರಾಯಣಸ್ವಾಮಿ

Update: 2018-02-17 13:03 GMT

ಬೆಂಗಳೂರು, ಫೆ.17: ಭಾರತದಲ್ಲಿ ಅನ್ಯ ಜಾತಿ, ಧರ್ಮದ ಹುಡುಗ, ಹುಡುಗಿಯನ್ನು ಪ್ರೀತಿಸುವುದೇ ದೊಡ್ಡ ಸವಾಲಿನ ಸಂಗತಿ. ಹೀಗಾಗಿ ಯುವಕ-ಯುವತಿಯರು ಪ್ರೀತಿಸುವುದರ ಮೂಲಕವೆ ಚಳವಳಿಯನ್ನು ಪ್ರಾರಂಭಿಸಲಿ ಎಂದು ಹಿರಿಯ ನಾಟಕಕಾರ ಕೆ.ವೈ.ನಾರಾಯಣಸ್ವಾಮಿ ತಿಳಿಸಿದರು.

ಶನಿವಾರ ಬಯಲು ಬಳಗ, ಪರ್ಯಾಯ ಕಾನೂನು ವೇದಿಕೆ ಹಾಗೂ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ನಗರದ ಎಸ್‌ಸಿಎಂ ಸಭಾಂಗಣದಲ್ಲಿ ದ್ವೇಷ ರಾಜಕೀಯದ ವಿರುದ್ಧ ಆಯೋಜಿಸಿದ್ದ ಅಡೆತಡೆ ಮುಕ್ತ ಪ್ರೀತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

21ನೆ ಶತಮಾನದಲ್ಲೂ ಪ್ರೀತಿಸಿದ ಒಂದೇ ಕಾರಣಕ್ಕಾಗಿ ಕೊಲೆಗಳು ನಡೆಯುತ್ತಿವೆ. ಒಂದು ಹುಡುಗಿ ಮತ್ತೊಂದು ಜಾತಿಯ ಹುಡುಗನ ಜೊತೆ ತಿರುಗಾಡುತ್ತಿದ್ದಾಳೆ ಎಂಬ ಸುದ್ದಿಯಿಂದಲೇ ಕೋಮು ಗಲಭೆಗಳು ನಡೆಯುತ್ತಿವೆ. ಹೀಗಾಗಿ ಪ್ರೀತಿ, ಪ್ರೇಮ ಎನ್ನುವುದು ಅಷ್ಟು ಸುಲಭದ ವಿಷಯವಲ್ಲ. ಹೀಗಾಗಿ ಪ್ರೀತಿ, ಪ್ರೇಮವೇ ದೊಡ್ಡ ಚಳವಳಿಯ ರೂಪ ಪಡೆಯಲಿ ಎಂದು ಅವರು ಆಶಿಸಿದರು.

ಜಗತ್ತಿನಲ್ಲಿ ಪ್ರೀತಿಯೊಂದೇ ಸಹಜವಾದ ಪ್ರಕ್ರಿಯೆಯಾಗಿದೆ. ಆದರೆ, ಹೆಣ್ಣಿನಲ್ಲಿ ಮೂಡುವಂತಹ ಸಹಜವಾದ ಪ್ರೇಮವನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಧಾರ್ಮಿಕತೆಯ ಹೆಸರಿನಲ್ಲಿ ಕಟ್ಟಳೆಗಳನ್ನು ಹಾಕಲಾಗುತ್ತಿದೆ. ಅದನ್ನು ಮೀರುವ ಪ್ರಕ್ರಿಯೆ ಯುವ ಜನತೆಗಿರುವ ದೊಡ್ಡ ಸವಾಲಾಗಿದೆ ಎಂದು ಅವರು ಹೇಳಿದರು.

ನಮ್ಮ ಜನಪದರ ಜೀವನ ಶೈಲಿನಲ್ಲಿ ನೈಜವಾದ ಜೀವನ ಪ್ರೀತಿಯಿತ್ತು. ತಮ್ಮ ಮನಸಿನಲ್ಲಿ ಹುಟ್ಟುತ್ತಿದ್ದ ಪ್ರೀತಿಯನ್ನು ಅಷ್ಟೆ ಸಹಜವಾಗಿ ವ್ಯಕ್ತ ಪಡಿಸುವಂತಹ ಮುಕ್ತ ಅವಕಾಶವಿತ್ತು. ಇಂತಹ ಜೀವನ ಪ್ರೀತಿಯ ಮಾದರಿಗಳು ಇಂದಿನ ಯುವ ತಲೆಮಾರಿಗೆ ಅಗತ್ಯವಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಲಾವಿದೆ ದು.ಸರಸ್ವತಿಯಿಂದ ‘ಸಣ್ತಿಮ್ಮಿ ಪಿರೂತಿ’ ನಾಟಕ ಪ್ರದರ್ಶನ ಹಾಗೂ ಕವಿಗಳಾದ ಚಾಂದ್‌ಪಾಷಾ, ಮುರಳಿ ಮೋಹನ ಕಾಟಿ, ರೂಮಿ ಹರೀಶ್, ಉಮೇಶ್ ಪ್ರೇಮ ಕವಿತೆಗಳನ್ನು ವಾಚನ ಮಾಡಿದರು. ಈ ವೇಳೆ ವಕೀಲ ಚಿಕ್ಕಹಾಗಡೆ ಪುರುಷೋತ್ತಮ್, ಹುಲಿಕುಂಟೆ ಮೂರ್ತಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News