ಬೆಂಗಳೂರು: ವಿದ್ಯುತ್‌ ಚಾಲಿತ ವಾಹನಗಳಿಗೆ ಮುಖ್ಯಮಂತ್ರಿ ಚಾಲನೆ

Update: 2018-02-17 17:51 GMT

ಬೆಂಗಳೂರು, ಫೆ.17: ಸದಾ ರಾಜಕೀಯ ಆಸಕ್ತರಿಂದ ತುಂಬಿರುವ ವಿಧಾನಸೌಧದ ಮುಂಭಾಗದಲ್ಲಿ ಶನಿವಾರ ಬೇರೆಯದೇ ವಾತಾವರಣ. ಅಲ್ಲಿ ಸಾಲಾಗಿ ನಿಂತಿದ್ದ ನೀಲಿ ಬಣ್ಣದ ಕಾರುಗಳು, ದ್ವಿಚಕ್ರ ವಾಹನಗಳು, ಮತ್ತು ಆಟೋರಿಕ್ಷಾಗಳ ಸುತ್ತ ಆಸಕ್ತರ ದಂಡು. ಈ ವಾಹನಗಳ ಬಿಡಿಭಾಗಗಳು, ಬ್ಯಾಟರಿ, ಅದರ ಚಾರ್ಜಿಂಗ್ ವಿಧಾನ, ಅದು ಕೊಡುವ ಮೈಲೇಜ್, ಅದರ ಬೆಲೆ... ಇತ್ಯಾದಿಗಳ ಬಗ್ಗೆ ಇವರೆಲ್ಲರ ಪ್ರಶ್ನೆಗಳು. ಅದಕ್ಕೆಲ್ಲ ಉತ್ತರಿಸುತ್ತಿದ್ದ ಇನ್ನೊಂದು ದಂಡು.
ಇದನ್ನೆಲ್ಲ ಕೇಳಿ ಆಶ್ಚರ್ಯವೇ? ನಿಜ, ಬೆಂಗಳೂರಿನ ಮತ್ತು ರಾಜ್ಯದ ವಾಹನೋದ್ಯಮದಲ್ಲಿ ಶನಿವಾರ ಚಾರಿತ್ರಿಕ ದಿನ. ಏಕೆಂದರೆ, ಭವಿಷ್ಯದ ವಾಹನಗಳಾದ ವಿದ್ಯುತ್‌ಚಾಲಿತ ವಾಹನಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅಧಿಕೃತವಾಗಿ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಇ-ವೆಹಿಕಲ್ಸ್‌ಗೆ ಸಂಬಂಧಪಟ್ಟ ಹೊಸ ಲಾಂಛನವನ್ನೂ ಬಿಡುಗಡೆ ಮಾಡಲಾಯಿತು. ಈ ಗಣ್ಯರಿಂದ ಹಸಿರು ನಿಶಾನೆ ಪಡೆದ ವಿದ್ಯುತ್‌ಚಾಲಿತ ಸ್ಕೂಟರುಗಳು, ಆಟೊರಿಕ್ಷಾಗಳು ಮತ್ತು ಕಾರುಗಳು ಗಾಂಭೀರ್ಯದಿಂದ ವಿಧಾನಸೌಧದ ಆವರಣದಲ್ಲಿ ಒಂದೆರಡು ಸುತ್ತು ಹಾಕಿದವು. ಬಳಿಕ, ನೆರೆದಿದ್ದ ಕುತೂಹಲಿಗರೂ ಅವುಗಳನ್ನು ಚಲಾಯಿಸಿ ಒಂದು ವಿಶಿಷ್ಟ ಅನುಭವವನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಆರ್.ವಿ.ದೇಶಪಾಂಡೆ, ಇದು ಕರ್ನಾಟಕ ಮತ್ತು ಬೆಂಗಳೂರಿನ ಪಾಲಿಗೆ ಚಾರಿತ್ರಿಕ ದಿನ. ಮಿತಿಮೀರಿದ ವಾಹನಗಳಿಂದಾಗಿ ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯದಿಂದ ತತ್ತರಿಸುತ್ತಿರುವ ಆಧುನಿಕ ಜೀವನಶೈಲಿಗೆ ವಿದ್ಯುತ್‌ಚಾಲಿತ ವಾಹನಗಳು ಭವಿಷ್ಯದ ಹೊಂಗಿರಣಗಳಾಗಿವೆ ಎಂದರು. ನಾವು ಹಂತಹಂತವಾಗಿ ವಿದ್ಯುತ್‌ಚಾಲಿತ ವಾಹನಗಳ ಬಳಕೆಯನ್ನು ಹೆಚ್ಚುಗೊಳಿಸುತ್ತಾ ಹೋಗುತ್ತೇವೆ. 2020ರ ಹೊತ್ತಿಗೆ ಎಲ್ಲೆಡೆ ಈ ವಾಹನಗಳು ಬರಬೇಕು ಎನ್ನುವುದು ನಮ್ಮ ಗುರಿಯಾಗಿದೆ ಎಂದು ದೇಶಪಾಂಡೆ ಹೇಳಿದರು.

ಸದ್ಯಕ್ಕೆ ವಿದ್ಯುತ್‌ಚಾಲಿತ ವಾಹನಗಳಲ್ಲಿ ಬ್ಯಾಟರಿಯ ಬೆಲೆ ದುಬಾರಿಯಾಗಿದೆ. ಇದು ಜನರ ಕೈಗೆಟುಕುವಂತಾದರೆ ಉಪಯೋಗವಾಗುತ್ತದೆ ಎನ್ನುವ ದೃಷ್ಟಿಯಿಂದ ರಾಜ್ಯ ಸರಕಾರದ ನೀತಿಯಲ್ಲಿ ಹಲವು ಉತ್ತೇಜನಾ ಕ್ರಮಗಳನ್ನು ಅಳವಡಿಸಲಾಗಿದೆ. ಉದ್ಯಮಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಉದ್ಯಮ ಕ್ಷೇತ್ರ ಮತ್ತು ಸಾರ್ವಜನಿಕರಿಬ್ಬರಿಗೂ ಲಾಭವಾಗಬೇಕೆಂಬ ದೃಷ್ಟಿಯಿಂದ ರಾಜ್ಯವು ‘ವಿದ್ಯುತ್‌ಚಾಲಿತ ವಾಹನಗಳು ಮತ್ತು ಇಂಧನ ಸಂಗ್ರಹಣೆ ನೀತಿ-2017’ ಅನ್ನು ಜಾರಿಗೆ ತಂದಿದೆ. ಇಂಥದೊಂದು ನೀತಿ ಕೇಂದ್ರ ಸರಕಾರದಲ್ಲಾಗಲಿ, ಉಳಿದ ರಾಜ್ಯಗಳಲ್ಲಾಗಲಿ ಇಲ್ಲ. ಈ ಮೂಲಕ ನಾವು ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದೇವೆ ಎಂದು ದೇಶಪಾಂಡೆ ವಿವರಿಸಿದರು.

ಅಗಾಧವಾಗಿ ಬೆಳೆಯುತ್ತಿರುವ ಬೆಂಗಳೂರಿನಂಥ ನಗರಗಳಲ್ಲಿ ನೆಮ್ಮದಿ ಮತ್ತು ಶಾಂತಿಯಿಂದ ಕೂಡಿದ ಪ್ರಯಾಣ ಅನಿವಾರ್ಯವಾಗಿದೆ. ಕರ್ಕಶ ಶಬ್ದವಿಲ್ಲದೆ, ಹೊಗೆ ಉಗುಳದೆ ಸಾಗುವ ಇ-ವಾಹನಗಳು ಈಗ ಅತ್ಯಗತ್ಯವಾಗಿವೆ. ಉದ್ಯಮಲೋಕ ಕೂಡ ಇದಕ್ಕೆ ಸಂಬಂಧಿಸಿದ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬೇಕು ಎಂದು ಅವರು ಕರೆ ನೀಡಿದರು.

ಸಮಾರಂಭದಲ್ಲಿ ಸರಕಾರದ ಹೆಚ್ಚುವರಿ ಕಾರ್ಯದರ್ಶಿ ಡಿ.ವಿ.ಪ್ರಸಾದ್, ಕೈಗಾರಿಕಾ ಆಯುಕ್ತ ದರ್ಪಣ್ ಜೈನ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News