ಅಕ್ರಮ ಸಕ್ರಮ ಯೋಜನೆಯಿಂದ ಬಡವರಿಗೆ ಅನುಕೂಲ: ವಿನಯ್ ಕುಲಕರ್ಣಿ

Update: 2018-02-17 13:16 GMT

ಧಾರವಾಡ, ಫೆ.17: ಬಹು ವರ್ಷಗಳಿಂದ ಸರಕಾರಿ ಭೂಮಿಯಲ್ಲಿ ಅನಧಿಕೃತವಾಗಿ ಮನೆ ಕಟ್ಟಿಕೊಂಡು ವಾಸವಾಗಿರುವ ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಸರಕಾರದ ಅಕ್ರಮ ಸಕ್ರಮ ಯೋಜನೆಯಿಂದ ಹೆಚ್ಚು ಅನುಕೂಲವಾಗಿ, ಅವರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಹೇಳಿದರು.

ನಗರದ ಹೆಬ್ಬಳ್ಳಿ ಗ್ರಾಮದಲ್ಲಿ ಸರಕಾರಿ ಭೂಮಿಯಲ್ಲಿ ವಸತಿ ನಿರ್ಮಿಸಿರುವ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಅಕ್ರಮ ಸಕ್ರಮ ಯೋಜನೆ ಅನುಷ್ಠಾನಕ್ಕಾಗಿ ಸರಕಾರ ಕ್ರಮ ಕೈಗೊಂಡಿದ್ದು, ಸುಮಾರು ಇಪ್ಪತ್ತರಿಂದ ಇಪ್ಪತೈದು ವರ್ಷಗಳ ಕಾಲ ವಾಸಿಸಿರುವ ಫಲಾನುಭವಿಗಳಿಗೆ ಮನೆಯ ಮಾಲಕತ್ವದ ಹಕ್ಕುಪತ್ರವನ್ನು ನೀಡಲಾಗುತ್ತಿದೆ ಎಂದರು.

ಇದರಿಂದ ಅಲ್ಲಿನ ಬಡವರಿಗೆ ಮನೆ ತೆರವುಗೊಳಿಸುವ ಭಯ ದೂರವಾಗಿದೆ. ಧಾರವಾಡ ಮತಕ್ಷೇತ್ರದಲ್ಲಿ ಬಡವರಿಗೆ ವಸತಿ, ಗ್ರಾಮೀಣ ರಸ್ತೆ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಆದ್ಯತೆ ನೀಡಿ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ವಿನಯ್ ಕುಲಕರ್ಣಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಧಾರವಾಡ ತಹಶೀಲ್ದಾರ್ ಪ್ರಕಾಶ ಕುದರಿ ಮಾತನಾಡಿ, ಸರಕಾರದ ನಿಯಮಾವಳಿಗಳ ಅನ್ವಯ ಅಕ್ರಮ ಸಕ್ರಮ ಯೋಜನೆಯಡಿ ಹೆಬ್ಬಳ್ಳಿ ಗ್ರಾಮದ 251 ಫಲಾನುಭವಿಗಳಿಗೆ ವಾಸಿಸುವ ಮನೆಯ ಮಾಲಕತ್ವದ ಹಕ್ಕು ಪತ್ರವನ್ನು ನೀಡಲಾಗಿದೆ. ಉಳಿದ ಗ್ರಾಮಗಳಲ್ಲೂ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲಿ ಹಕ್ಕು ಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಪ್ಪಭಾವಿಕಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಚನ್ನಬಸಪ್ಪಮಟ್ಟಿ, ಧಾರವಾಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸಿದ್ದಪ್ಪಪ್ಯಾಟಿ, ತಾಲೂಕು ಪಂಚಾಯತ್ ಸಿಇಓ ಪ್ರಶಾಂತ್ ಕುಲಕರ್ಣಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News