ಸರಕಾರಿ ನೌಕರರ ನಿವೃತ್ತಿ ವಯೋಮಿತಿ ಹೆಚ್ಚಿಸಲು ಒತ್ತಾಯ

Update: 2018-02-17 13:27 GMT

ಬೆಂಗಳೂರು, ಫೆ.17: ರಾಜ್ಯ ಸರಕಾರಿ ನೌಕರರ ವಯೋಮಿತಿಯನ್ನು 60ರಿಂದ 62 ವರ್ಷಕ್ಕೆ ಏರಿಸಬೇಕೆಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಹಿತ ರಕ್ಷಣಾ ಸಮಿತಿ ಒತ್ತಾಯಿಸಿದೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕೆಂಪರಾಜು ಮಾತನಾಡಿ, ರಾಜ್ಯ ಸರಕಾರಿ ನೌಕರರ ವೇತನ, ಭತ್ತೆ ಇತರೆ ಬೇಡಿಕೆಗಳ ಬಗ್ಗೆ ವರದಿ ನೀಡುವಂತೆ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ನೇತೃತ್ವದ ಆರನೆ ವೇತನ ಆಯೋಗದ ಸಮಿತಿ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ. ವರದಿಯಲ್ಲಿ ನಿವೃತ್ತಿ ವಯಸ್ಸನ್ನು ಹೆಚ್ಚಿಸದಂತೆ ಶಿಫಾರಸ್ಸು ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಈ ಹಿಂದೆ 3.5ಕೋಟಿ ಜನಸಂಖ್ಯೆ ಇದ್ದಾಗ 7,73,454 ಲಕ್ಷ ಹುದ್ದೆಗಳನ್ನು ಮಂಜೂರು ಮಾಡಲಾಗಿತ್ತು. ಆದರೆ, ಈಗ ಜನಸಂಖ್ಯೆ ದ್ವಿಗುಣಗೊಂಡು 6 ಕೋಟಿಗೂ ಅಧಿಕವಾಗಿದೆ. ಹೀಗಾಗಿ, ಸರಕಾರಿ ನೌಕರರ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

ಕಳೆದ ಸಾಲಿನ ಮಾರ್ಚ್ ವೇಳೆಗೆ 2.5ಲಕ್ಷ ಹುದ್ದೆಗಳು ಖಾಲಿ ಇದೆ ಎಂಬ ವರದಿ ಬಂದಿದೆ. ಇದರ ಜತೆಗೆ 2018-19ನೇ ಸಾಲಿನಲ್ಲಿ 40 ಸಾವಿರಕ್ಕೂ ಹೆಚ್ಚು ನೌಕರರು ನಿವೃತ್ತಿ ಹೊಂದಲಿದ್ದಾರೆ. ಹೀಗಾಗಿ, 3 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿಯಾಗುತ್ತವೆ. ಇದರಿಂದ ಸರಕಾರಿ ನೌಕರರ ವಯೋಮಿತಿ 62ವರ್ಷಕ್ಕೆ ಹೆಚ್ಚಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News