ನನ್ನ ಕೊಲೆ ಸಂಚಿಗೆ ಸರಕಾರದ ಪರೋಕ್ಷ ಬೆಂಬಲ: ಅನ್ವರ್ ಮಾಣಿಪ್ಪಾಡಿ

Update: 2018-02-17 13:50 GMT

ಬೆಂಗಳೂರು, ಫೆ.17: ನನ್ನ ಜೀವನಕ್ಕೆ ಅಪಾಯ ಇರುವ ಬಗ್ಗೆ ರಕ್ಷಣೆ ಕೋರಿದರೂ ಸ್ಪಂದಿಸದೆ, ಸರಕಾರವೇ ನನ್ನ ಹತ್ಯೆಗೆ ಪರೋಕ್ಷ ಬೆಂಬಲ ನೀಡುತ್ತಿದೆ ಎಂದು ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ ಆರೋಪಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಕ್ಫ್ ಆಸ್ತಿ ಕಬಳಿಕೆ ಕುರಿತು ನಾನು ವರದಿ ಕೊಟ್ಟ ದಿನದಿಂದ ನನ್ನ ಜೀವಕ್ಕೆ ಅಪಾಯವಿದೆ. ಇದೇ ಕಾರಣಕ್ಕೆ ಹುತಾತ್ಮನಾದರೂ ಆಶ್ಚರ್ಯವಿಲ್ಲ. ಸರಕಾರಕ್ಕೆ ರಕ್ಷಣೆ ಕೋರಿದರೂ ಸರಕಾರ ಸ್ಪಂದಿಸಿಲ್ಲ. ಉದ್ದೇಶ ಪೂರ್ವಕವಾಗಿಯೇ ರಕ್ಷಣೆ ನೀಡುತ್ತಿಲ್ಲ. ನನ್ನ ಹತ್ಯೆ ಸಂಚಿಗೆ ಸರಕಾರವೇ ಪರೋಕ್ಷ ಬೆಂಬಲ ನೀಡುತ್ತಿದೆ ಎಂದು ಹೇಳಿದರು.

ವಕ್ಫ್ ಆಸ್ತಿ ಕಬಳಿಕೆ ಕುರಿತು ನಾವು ಕೊಟ್ಟಿರುವ ವರದಿ ಜಾರಿ ಮಾಡಲು ಸರಕಾರ ನಿರ್ಲಕ್ಷ್ಯ ವಹಿಸಿದ್ದು, ಆಸ್ತಿ ಕಬಳಿಕೆ ಮಾಡಿರುವವರ ರಕ್ಷಣೆಗೆ ಪ್ರಯತ್ನ ಮಾಡುತ್ತಿದೆ. ಇತ್ತೀಚೆಗೆ ಸುಪ್ರಿಂಕೋರ್ಟ್ ನೀಡಿರುವ ಆದೇಶದ ಪ್ರಕಾರ, ಒತ್ತುವರಿಯಾಗಿರುವ ವಕ್ಫ್ ಆಸ್ತಿ ಮರುವಶಕ್ಕೆ ಅವಕಾಶ ಕೊಟ್ಟಿದೆ ಎಂದರು.

ಆಡಳಿತಾಧಿಕಾರಿ ನೇಮಿಸಿ:  ವಕ್ಫ್ ಬೋರ್ಡ್ ಭ್ರಷ್ಟವಾಗಿದೆ. ಹಾಗಾಗಿ ವಕ್ಫ್ ಮಂಡಳಿಯನ್ನೇ ವಿಸರ್ಜಿಸಿ, ನಿವೃತ್ತ ನ್ಯಾಯಾಧೀಶರೊಬ್ಬರನ್ನು ಆಡಳಿತಾಧಿಕಾರಿಯಾಗಿ ನೇಮಿಸಬೇಕು. ಹೈಕೋರ್ಟ್‌ನಲ್ಲೂ ನಮ್ಮ ಪರವಾಗಿ ತೀರ್ಪು ಬಂದಿದೆ. ನಮ್ಮ ವರದಿ ಜಾರಿ ಮಾಡಲು ಹೈಕೋರ್ಟ್ ಆದೇಶ ಮಾಡಿದೆ. ಆದರೂ, ಸರಕಾರ ಗಮನ ಹರಿಸದೆ ನ್ಯಾಯಾಂಗ ನಿಂದನೆ ಮಾಡಿದೆ. ಹಾಗಾಗಿ ವಕ್ಫ್ ಆಸ್ತಿ ವಾಪಸ್ ಪಡೆಯದ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆಯ ಅರ್ಜಿ ಸಲ್ಲಿಸಿದ್ದೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News