ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹ: ಅಂಬರೀಶ್

Update: 2018-02-17 13:56 GMT

ಬೆಂಗಳೂರು, ಫೆ.17: ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಬಹಳ ವರ್ಷಗಳ ನಂತರ ಒಳ್ಳೆಯ ಆದೇಶ ಬಂದಿದೆ. ಹಲವು ವರ್ಷಗಳ ಕಾಲ ನಮ್ಮ ವಿರುದ್ಧವಾಗಿಯೆ ಆದೇಶಗಳು ಬರುತ್ತಿದ್ದವು. ಇದು ಒಳ್ಳೆಯ ಸುದ್ದಿ ಎಂದು ಮಾಜಿ ಸಚಿವ ಅಂಬರೀಶ್ ಹೇಳಿದರು.

ಶನಿವಾರ ನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೀರಾವರಿ ಪ್ರದೇಶವನ್ನು ಹೆಚ್ಚಿಸಲು ನ್ಯಾಯಾಲಯದ ಆದೇಶದಲ್ಲಿ ಅವಕಾಶ ಸಿಕ್ಕಿದೆ. ಆದರೆ, ಕೇವಲ ನೀರಾವರಿ ಪ್ರದೇಶವನ್ನು ಹೆಚ್ಚಳ ಮಾಡಿದರಷ್ಟೇ ಸಾಲದು, ಅದಕ್ಕೂ ನೀರು ಹೇಗೆ ಪೂರೈಸುವುದು ಎನ್ನುವುದು ಮುಖ್ಯ ಎಂದರು.

ಸುಪ್ರೀಂಕೋರ್ಟ್ ನೀಡಿರುವ ತೀರ್ಪು ರಾಜ್ಯಕ್ಕೆ ಸ್ವಲ್ಪ ಉಸಿರು ಕೊಟ್ಟಿದೆ. ನಮ್ಮ ಮಂಡ್ಯ ಭಾಗದ ರೈತರು ಸ್ವಲ್ಪ ಖುಷಿಯಾಗಿದ್ದಾರೆ. ಸೋಮವಾರ ನಾನು ಹಾಗೂ ನನ್ನ ಪತ್ನಿ ಕೆಆರ್‌ಎಸ್‌ಗೆ ಬಾಗಿನ ಅರ್ಪಿಸುತ್ತೇವೆ ಎಂದ ಅವರು, ಯಾರಿಗೂ ತೊಂದರೆಯಾಗದ ರೀತಿಯಲ್ಲಿ ನ್ಯಾಯಾಲಯ ತೀರ್ಪು ನೀಡಿದೆ. ಮೊದಲು ಮಳೆಯಾಗಬೇಕು, ಆನಂತರ ಕಾವೇರಿ ನಿಯಂತ್ರಣ ಮಂಡಳಿಯನ್ನು ಕೇಂದ್ರ ಸರಕಾರ ರಚಿಸಲಿ ಎಂದು ಅವರು ತಿಳಿಸಿದರು.

ನ್ಯಾಯಾಲಯದಲ್ಲಿ ನಮ್ಮ ವಕೀಲರು ಸಮರ್ಥವಾಗಿ ವಾದ ಮಾಡಿದ್ದಾರೆ. ರಾಜ್ಯದ ಪರವಾಗಿಯೆ ತೀರ್ಪು ಬರಲಿದೆ ಎಂಬ ವಿಶ್ವಾಸವಿತ್ತು. ಅದರಂತೆ, ತೀರ್ಪು ಬಂದಿರುವುದು ಸಂತಸದ ವಿಚಾರ ಎಂದು ಅಂಬರೀಶ್ ಹೇಳಿದರು.

ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನಟ ರಜನಿಕಾಂತ್ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಎಲ್ಲರಿಗೂ ಸ್ನೇಹಿತನೇ, ನದಿ ಜೋಡಣೆ ಯೋಜನೆ ಕೈಗೆತ್ತಿಕೊಂಡರೆ ಒಳ್ಳೆಯದು. ಅದನ್ನೆ ಅವರು ಹೇಳಿರುವುದು ಎಂದರು. ನಾನು ಹಿಂದೆ ಕಾವೇರಿಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ. ಆಗ ಒಬ್ಬರೂ ಒಳ್ಳೆಯ ಭಾವನೆ ವ್ಯಕ್ತಪಡಿಸಲಿಲ್ಲ. ನನ್ನ ತ್ಯಾಗದ ಬಗ್ಗೆ ಹೇಳಲೇ ಇಲ್ಲ. ಅದನ್ನು ಬಿಟ್ಟು ಅಂಬಿ ಅಲ್ಲಿ ಹೋದ, ಇಲ್ಲಿ ಹೋದ ಅಂತ ತೋರಿಸ್ತೀರಾ. ಡಾನ್ಸ್ ಮಾಡಿದ್ದನ್ನೇ ದೊಡ್ಡದಾಗಿ ತೋರಿಸ್ತೀರಾ ಎಂದು ಪರೋಕ್ಷವಾಗಿ ದೃಶ್ಯಮಾಧ್ಯಮಗಳ ವಿರುದ್ಧ ಅವರು ಅಸಮಾಧಾನ ಹೊರ ಹಾಕಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಮತ್ತೆ ಅಧಿಕಾರಕ್ಕೆ ಬರಬೇಕು. 224 ಸ್ಥಾನಗಳಲ್ಲೂ ಗೆಲ್ಲುವ ಬಯಕೆ ಇದೆ. ಜನ ಇದ್ದರೆ ಎಲ್ಲರೂ ನಾಯಕರೆ, ಜನ ಇಲ್ಲವಾದರೆ ಯಾರೂ ನಾಯಕರಲ್ಲ. ನನ್ನ ಬಗ್ಗೆ ಮಂಡ್ಯದ ಜನ ತೀರ್ಮಾನ ಮಾಡುತ್ತಾರೆ ಎಂದು ಅಂಬರೀಶ್ ಹೇಳಿದರು.
2013ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿನ ಜನ ನನಗೆ 42 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಮಂಡ್ಯ ಬಿಟ್ಟು ಬೇರೆ ಕಡೆ ಹೋಗೋಕೆ ಆಗುತ್ತೇನ್ರಿ. ಹಾಗೇನಾದರೂ ಮಾಡಿದರೆ ನನ್ನನ್ನು ಹೇಡಿ ಅಂತಾರೆ ಅಷ್ಟೇ ಎನ್ನುವ ಮೂಲಕ ಮಂಡ್ಯದಿಂದಲೇ ಮತ್ತೆ ಕಣಕ್ಕಿಳಿಯುವುದಾಗಿ ಅಂಬರೀಶ್ ಸ್ಪಷ್ಟಣೆ ನೀಡಿದರು.

ನಾನು ಸಿಎಂ ಅಭ್ಯರ್ಥಿ
ನಾನು ಕಳೆದ 15 ವರ್ಷಗಳಿಂದಲೂ ಮುಖ್ಯಮಂತ್ರಿ ಅಭ್ಯರ್ಥಿಯೇ ಕಣ್ರೀ. ಮುಖ್ಯಮಂತ್ರಿ ಸ್ಥಾನ ಕೊಟ್ಟರೆ ಬೇಡ ಎನ್ನುವುದಿಲ್ಲ. ಆಸೆ ಪಟ್ಟರೆ ನಿರಾಸೆ, ಅದಕ್ಕೆ ಆಸೆಯನ್ನೆ ಪಡದಿದ್ದರೆ ಒಳ್ಳೆಯದಲ್ವೇ.
-ಅಂಬರೀಶ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News