ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಮಹಿಳೆಯರ ಜಾಣ್ಮೆ, ಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಬೇಕು: ಲೀಲಾದೇವಿ ಆರ್.ಪ್ರಸಾದ್

Update: 2018-02-17 14:21 GMT

ಬೆಂಗಳೂರು, ಫೆ.17: ರಾಜ್ಯ ಸರ್ವತೋಮುಖವಾಗಿ ಅಭಿವೃದ್ಧಿಯಾಗಬೇಕಾದರೆ ಮಹಿಳೆಯರ ಜಾಣ್ಮೆ ಹಾಗೂ ಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ ಎಂದು ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ತಿಳಿಸಿದರು. 

ಅಖಿಲ ಭಾರತ ವೀರಶೈವ ಮಹಾಸಭಾ ನಗರದಲ್ಲಿ ಏರ್ಪಡಿಸಿದ್ದ ಮಹಿಳಾ ಜಾಗೃತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಸಕ್ತ ಮಹಿಳೆಯರನ್ನು ಉದ್ಯಮಿಗಳಾಗಿ ರೂಪಿಸುವ ನಿಟ್ಟಿನಲ್ಲಿ ಸರಕಾರ ಹಾಗೂ ಸಂಘ, ಸಂಸ್ಥೆಗಳ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

ಗದಗಿನ ಸೌಭಾಗ್ಯ ಎಂಬ ಮಹಿಳೆ ತಾನು ಚರ್ಮದ ಉದ್ಯಮ ಮಾಡುತ್ತೇನೆ ಎಂದು ಬ್ಯಾಂಕ್‌ವೊಂದರಲ್ಲಿ ಸಾಲ ಕೇಳಿದಾಗ, ಮಹಿಳೆಯರು ಚರ್ಮದ ಕೆಲಸ ಮಾಡಬಾರದು ಎಂದು ಆಕೆಗೆ ಸಾಲ ನೀಡಿರಲಿಲ್ಲ. ಆದರೆ ತಾವು ಆಕೆಗೆ ಬೇರೊಂದು ಬ್ಯಾಂಕ್‌ನಲ್ಲಿ ಸಾಲ ಕೊಡಿಸಿದ್ದು, ಚರ್ಮ ಉದ್ಯಮ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತನಾಡಿ, ಮಹಿಳೆಯರಿಗಾಗಿ ಸರಕಾರದ ವಲಯದಲ್ಲಿ ಅನೇಕ ಸೌಲಭ್ಯಗಳಿವೆ. ಆದರೆ, ಆ ಮಾಹಿತಿಗಳು ಮಹಿಳೆಯರಿಗೆ ತಲುಪುತ್ತಿಲ್ಲ. ಈ ನಿಟ್ಟಿನಲ್ಲಿ ಸಂಘ, ಸಂಸ್ಥೆಗಳು ಮಾಹಿತಿ ನೀಡುವಂತಹ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News