ಕಾಲಮಿತಿಯೊಳಗೆ ಯೋಜನೆಗಳ ಅನುಷ್ಠಾನವಾದರೆ ಉದ್ದೇಶ ಸಫಲ: ಈಶ್ವರ್ ಖಂಡ್ರೆ

Update: 2018-02-17 14:31 GMT

ಬೆಂಗಳೂರು, ಫೆ.17: ಯಾವುದೇ ನಾಗರಿಕ ಸೇವಾ ಯೋಜನೆಗಳನ್ನು ಕಾಲ ಮಿತಿಯೊಳಗೆ ಅನುಷ್ಠಾನ ಮಾಡದಿದ್ದರೆ, ಆ ಯೋಜನೆಗಳ ಉದ್ದೇಶ ಸಫಲವಾಗುವುದಿಲ್ಲ ಎಂದು ಪೌರಾಡಳಿತ ಸಚಿವ ಈಶ್ವರ್ ಬಿ.ಖಂಡ್ರೆ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದಲ್ಲಿ ಆಯೋಜಿಸಿದ್ದ ಸಿಮ್ಯಾಕ್ ಸಂಸ್ಥೆ ಉತ್ತಮ ಪದ್ಧತಿಗಳ ದಾಖಲೀಕರಣ ಬಿಡುಗಡೆ, ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಕೆಎಂಡಿಎಸ್ ನಾಗರಿಕ ಕೇಂದ್ರ ಸೇವೆಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 2011ರಲ್ಲಿ ಆರಂಭಿಸಿದ ಒಳಚರಂಡಿ ವ್ಯವಸ್ಥೆ ಸಕಾಲದಲ್ಲಿ ಪೂರ್ಣಗೊಳ್ಳದ ಕಾರಣ ಆ ಯೋಜನೆಯೇ ವಿಫಲವಾಯಿತು. ಹಾಗಾಗಿ ಸ್ಥಳೀಯ ಸಂಸ್ಥೆಗಳು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ವಿಳಂಬ ಮಾಡದೆ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸಲಹೆ ಮಾಡಿದರು.

ಒಳಚರಂಡಿ ವ್ಯವಸ್ಥೆ ಇರದ ನಗರಸಭೆಗಳು ಮಲತ್ಯಾಜ್ಯ ವಿಲೇವಾರಿಗೆ 2 ಕೋಟಿ ರೂ.ಗಳಲ್ಲಿ ಅನುಷ್ಠಾನಗೊಳಿಸಬಹುದಾದ ಯೋಜನೆಯನ್ನು ಜಾರಿಗೊಳಿಸಬೇಕು ಎಂದ ಅವರು, ಈಗಾಗಲೇ ದೇವನಹಳ್ಳಿಯಲ್ಲಿ ಈ ಯೋಜನೆ ಯಶಸ್ವಿಯಾಗಿ ನಡೆದಿದೆ. ಇದರಿಂದ ಅನಗತ್ಯ ಹಣ ವ್ಯಯವಾಗುವುದು ನಿಲ್ಲುತ್ತದೆ ಎಂದರು. ನಾಗರಿಕ ಸೇವೆಗಳನ್ನು ಜನರಿಗೆ ಉತ್ತಮವಾಗಿ ನೀಡಿದರೆ ಸಂಪನ್ಮೂಲ ಕ್ರೋಡೀಕರಣ ಕಷ್ಟವೇನಲ್ಲ. ವಿದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಸರಕಾರ ಯಾವುದೇ ನೆರವು ನೀಡುವುದಿಲ್ಲ. ಅವುಗಳೇ ಸಂಪನ್ಮೂಲವನ್ನು ಕ್ರೋಡೀಕರಿಸಿಕೊಂಡು ನಿರ್ವಹಣೆ ಮಾಡುತ್ತವೆ. ಅದೇ, ಮಾದರಿಯಲ್ಲಿ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಸಂಪನ್ಮೂಲ ಕ್ರೋಡೀಕರಣದಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂದು ನುಡಿದರು.

ಜನನ-ಮರಣ ಪತ್ರ ಸೇರಿದಂತೆ ಎಲ್ಲ ಸೇವೆಗಳು ಜನರ ಮನೆ ಬಾಗಿಲಿಗೆ ನೀಡುವಂತಹ ಜನಸ್ನೇಹಿ ಯೋಜನೆಗಳನ್ನು ಸ್ಥಳೀಯ ಸಂಸ್ಥೆಗಳು ಜಾರಿ ಮಾಡಬೇಕು. ಪ್ರಸ್ತುತ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮತ್ತಷ್ಟು ಬದಲಾವಣೆಯ ಅಗತ್ಯವಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ಸರಕಾರ ನಾಗರಿಕರಿಗೆ ಉತ್ತಮ ಸೌಲಭ್ಯ ನೀಡುವ ಕಡೆ ಹೆಚ್ಚಿನ ಗಮನ ನೀಡಿದೆ. ಹಲವು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದೆ. ಸ್ಥಳೀಯ ಸಂಸ್ಥೆಗಳು ಸಹ ನಾಗರಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವತ್ತ ಸಂಪೂರ್ಣ ಗಮನ ಕೇಂದ್ರೀಕರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಬಿಬಿಎಂಪಿ ಆಯುಕ್ತ ಎಂ.ಮಂಜುನಾಥ್ ಪ್ರಸಾದ್, ಕೆಎಸ್‌ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಉಮಾಶಂಕರ್, ಪೌರಾಡಳಿತ ಇಲಾಖೆ ನಿರ್ದೇಶಕ ಡಾ.ವಿಶಾಲ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News