200 ಕೋಟಿ ಚರ್ಚ್ ದುರಸ್ತಿಗೆ ಸಾಲುವುದಿಲ್ಲ: ಕ್ರೈಸ್ತ ಸಂಘಟನೆಗಳ ಬೇಸರ

Update: 2018-02-17 14:48 GMT

ಬೆಂಗಳೂರು, ಫೆ.17: ರಾಜ್ಯ ಸರಕಾರದ ಬಜೆಟ್‌ನಲ್ಲಿ ರಾಜ್ಯದ ಕ್ರೈಸ್ತರ ಅಭಿವದ್ಧಿಗಾಗಿ ಕೇವಲ 200 ಕೋಟಿ ರೂ. ಬಿಡುಗಡೆ ಮಾಡಿದ್ದು, ಈ ಅನುದಾನ ಕೇವಲ ರಾಜ್ಯದಲ್ಲಿರುವ ಕ್ರೈಸ್ತರ ಚರ್ಚ್ ದುರಸ್ತಿಗೆ ಸಾಲುವುದಿಲ್ಲ ಎಂದು ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ಹಾಗೂ ವಿವಿಧ ಕ್ರೈಸ್ತ ಸಂಘಟನೆಗಳು ಬೇಸರ ವ್ಯಕ್ತಪಡಿಸಿವೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರಿಶ್ಚಿಯನ್ ಫೋರಂ ಫಾರ್ ಹ್ಯುಮನ್ ರೈಟ್ಸ್ ರಾಜ್ಯಾಧ್ಯಕ್ಷ ರೆವರೆಂಡ್ ಬಿ.ರಾಜಶೇಖರ್, ರಾಜ್ಯದಲ್ಲಿ ಶೇ.6 ರಷ್ಟು ಕ್ರೈಸ್ತ ಜನಾಂಗವಿದೆ. ಬಜೆಟ್‌ನಲ್ಲಿ ಬಿಡುಗಡೆ ಮಾಡಿದ 200 ಕೋಟಿ ರೂ. ಅನುದಾನ ಸಮುದಾಯ ಭವನ ನಿರ್ಮಾಣ, ಮಕ್ಕಳ ವಿದ್ಯಾಭ್ಯಾಸ, ಸಾಲ ಸೌಲಭ್ಯ ನೀಡಲು ಸಾಕಾಗುವುದಿಲ್ಲ. ಹೀಗಾಗಿ, ಈ ಸಾಲಿನ ಬಜೆಟ್ ಕ್ರೈಸ್ತ ಸಮುದಾಯಕ್ಕೆ ನಿರಾಶಾದಾಯಕವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕ್ರೈಸ್ತ ಸಮುದಾಯದಲ್ಲಿ ಬಡತನ ರೇಖೆಗಿಂತ ಕೆಳಗಿದ್ದಾರೆಂದು ರಂಗನಾಥ ಮಿಶ್ರ ವರದಿಯಲ್ಲಿ ದಾಖಲಾಗಿದೆ. ಶಿಕ್ಷಣ, ವೈದ್ಯಕೀಯ, ವೈಜ್ಞಾನಿಕ ಕ್ಷೇತ್ರದಲ್ಲಿ ಕ್ರೈಸ್ತರ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದ ಅವರು, ರಾಜ್ಯದ ಕ್ರೈಸ್ತ ಸಮುದಾಯದ ವಿವಿಧ ಸಂಘಟನೆಗಳು ಕ್ರೈಸ್ತರ ಅಭಿವದ್ಧಿ ನಿಗಮ ಸ್ಥಾಪಿಸಲು ಸರಕಾರಕ್ಕೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಸರಕಾರದ ಮೇಲೆ ನಂಬಿಕೆ ಇಲ್ಲದಂತಾಗಿದೆ ಎಂದು ದೂರಿದರು. ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸದಿದ್ದಲ್ಲಿ ಎಲ್ಲ ಕ್ರೈಸ್ತ ಸಂಘಟನೆಗಳು ಸೇರಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News