ವಿಮಾನ ನಿಲ್ದಾಣಗಳಲ್ಲಿನ್ನು ಸ್ಯಾನಿಟರಿ ಪ್ಯಾಡ್ ಮಾರಾಟ ಯಂತ್ರ!

Update: 2018-02-18 04:50 GMT

ಹೊಸದಿಲ್ಲಿ, ಫೆ.18: ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಮಾರಾಟ ಯಂತ್ರಗಳನ್ನು ಅಳವಡಿಸುವ ಪ್ರಕ್ರಿಯೆಯನ್ನು ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರ ಆರಂಭಿಸಿದೆ. ಕಳೆದ ಅಕ್ಟೋಬರ್‌ನಲ್ಲಿ ಇಂಧೋರ್ ವಿಮಾನ ನಿಲ್ದಾಣದಲ್ಲಿ ಮೊಟ್ಟಮೊದಲ ಬಾರಿ ಇಂಥ ಯಂತ್ರ ಅಳವಡಿಸಲಾಗಿತ್ತು. ಬಳಿಕ ಕೊಲ್ಕತ್ತ, ಜೈಪುರ, ಭುವನೇಶ್ವರ, ಪೋರ್ಟ್‌ಬ್ಲೇರ್, ತಿರುವನಂತಪುರ, ವಿಶಾಖಪಟ್ಟಣಂ, ವಡೋದರ, ಪುಣೆ, ಗುವಾಹಟಿ, ವಾರಣಾಸಿ ಮತ್ತು ಸೂರತ್‌ಗಳಲ್ಲಿ ಈ ತಂತ್ರಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ.

ಮಹಿಳಾ ವಿಮಾನಯಾನಿಗಳ ಆರಾಮದಾಯಕ ಪ್ರಯಾಣದ ನಿಟ್ಟಿನಲ್ಲಿ ಇದು ಸಣ್ಣ ಹೆಜ್ಜೆ. ನೈರ್ಮಲ್ಯಕ್ಕೆ ಸಂಬಂಧಿಸಿದ ಮೂಲಭೂತ ಅಗತ್ಯವನ್ನು ಪೂರೈಸುವುದು ನಮ್ಮ ಹೊಣೆ ಎಂದು ಪ್ರಾಧಿಕಾರದ ಅಧ್ಯಕ್ಷ ಗುರುಪ್ರಸಾದ್ ಮಹೋಪಾತ್ರ ಹೇಳಿದ್ದಾರೆ.

ವಿಮಾನ ನಿಲ್ದಾಣಗಳ ಬಳಿ ಯಾವುದೇ ಔಷಧ ಮಳಿಗೆಗಳು ಇಲ್ಲದಿರುವುದರಿಂದ ಹಾಗೂ ಟರ್ಮಿನಲ್ ಕಟ್ಟಡದಿಂದ ಹೊರಗೆ ಹೋಗುವುದು ಅಸಾಧ್ಯವಾದ ಹಿನ್ನೆಲೆಯಲ್ಲಿ ಈ ಯೋಜನೆ ಆರಂಭಿಸಿದ್ದೇವೆ. ಪ್ರತಿ ಯಂತ್ರಗಳು 25 ಪ್ಯಾಡ್‌ಗಳ ಸಂಗ್ರಹ ಹೊಂದಿರುತ್ತವೆ. ಈ ಯಂತ್ರಗಳಿಂದ ಬಂದ ಹಣವನ್ನು ದಾಸ್ತಾನು ನಿರ್ವಹಿಸಲು ಬಳಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೈಗೆಟುಕುವ ದರದಲ್ಲಿ ವಿಮಾನ ನಿಲ್ದಾಣಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸುವುದರಿಂದ ನೈರ್ಮಲ್ಯ ಕ್ರಮವನ್ನು ಉತ್ತೇಜಿಸಿದಂತಾಗುತ್ತದೆ ಎಂದು ಎಎಐ ವಕ್ತಾರ ಹೇಳಿದ್ದಾರೆ. ಈ ಯಂತ್ರಗಳನ್ನು ಬಳಸುವುದು ಸರಳ ಹಾಗೂ 1 ರೂಪಾಯಿ, 5 ರೂಪಾಯಿ ಹಾಗೂ 10 ರೂಪಾಯಿಯ ನಾಣ್ಯಗಳನ್ನು ಬಳಸಿ ಮೂರು ನ್ಯಾಪ್ಕಿನ್ ಪ್ಯಾಕೆಟ್ ಪಡೆಯಬಹುದು ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News