ಥಾಣೆಯಲ್ಲಿನ್ನು ಚಾಲಕರಹಿತ ಕಾರುಗಳದ್ದೇ ಕಾರುಬಾರು!

Update: 2018-02-19 04:01 GMT

ಥಾಣ, ಫೆ.19: ಅತ್ಯಾಧುನಿಕ ಚಾಲಕರಹಿತ ಕಾರುಗಳ ಸೇವೆ ಸದ್ಯದಲ್ಲೇ ಇಲ್ಲಿನ ನಾಗರಿಕರಿಗೆ ಲಭ್ಯವಾಗಲಿದೆ. ಮೊಟ್ಟಮೊದಲ ಬಾರಿಗೆ ಪರ್ಸನಲ್ ರ್ಯಾಪಿಡ್ ಟ್ರಾನ್ಸಿಟ್ (ಪಿಆರ್‌ಟಿ) ವ್ಯವಸ್ಥೆ ಆರಂಭಿಸಲು ಉದ್ದೇಶಿಸಿದ್ದು, ಮೆಟ್ರೊ ಯೋಜನೆ ಅವಲೋಕನಾ ಸಭೆಯಲ್ಲಿ ಅಧಿಕಾರಿಗಳು ಇದನ್ನು ಪ್ರಾಯೋಗಿಕವಾಗಿ ಪ್ರಸ್ತುತಪಡಿಸಿದ್ದಾರೆ. ಥಾಣೆ ಮಹಾನಗರ ಪಾಲಿಕೆ ಮತ್ತು ಮುಂಬೈ ಮೆಟ್ರೊಪಾಲಿಟನ್ ರೀಜನಲ್ ಡೆವಲಪ್‌ಮೆಂಟ್ ಅಥಾರಿಟಿ ನಡುವೆ ಈ ವಿನೂತನ ಸಂಚಾರ ವ್ಯವಸ್ಥೆ ಪ್ರಾಯೋಗಿಕವಾಗಿ ಓಡಾಟ ನಡೆಸಿದೆ.

ಮೆಟ್ರಿನೊ ಎಂದು ಕರೆಯಲ್ಪಡುವ ಈ ಪಿಆರ್‌ಟಿ ವ್ಯವಸ್ಥೆ, ಭವಿಷ್ಯದ ಚಾಲಕ ರಹಿತ ವಾಹನವಾಗಿದ್ದು, ಪಾಡ್ ಆಕಾರದಲ್ಲಿರುತ್ತದೆ. ಇದು ಎರಡರಿಂದ ಆರು ಮಂದಿಯನ್ನು ಒಯ್ಯಬಲ್ಲದು ಹಾಗೂ ಇದನ್ನು ಹಳಿಗೆ ಅಳವಡಿಸಲಾಗಿರುತ್ತದೆ. ಈ ಯೋಜನೆಗೆ ಥಾಣೆ ಮಹಾನಗರ ಪಾಲಿಕೆ ಹಣಕಾಸು ನೆರವು ನೀಡಿದ್ದು, ಈ ಪಾಡ್ ಕಾರುಗಳು ನಗರದೊಳಕ್ಕೆ ಸಂಚರಿಸಲಿವೆ ಹಾಗೂ ನಿರ್ಮಾಣ ಹಂತದಲ್ಲಿರುವ ಮೆಟ್ರೊ ರೈಲು ನಿಲ್ದಾಣಕ್ಕೆ ಪ್ರಯಾಣಿಕರನ್ನು ಕರೆದೊಯ್ಯಲಿದೆ.

ಈ ವ್ಯವಸ್ಥೆಯನ್ನು ಇಡೀ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆರಂಭಿಸಲಾಗುತ್ತಿದೆ. ಎಂಎಂಆರ್‌ಡಿಎ ಕೂಡಾ ವದಾಲಾ ಮತ್ತು ಕಾಸರ್‌ವಾಡವ್ಲಿ ನಡುವೆ ಮೆಟ್ರೊ ಹಳಿ ಅಳಡಿಸಲು ಉದ್ದೇಶಿಸಿದೆ. ಥಾಣೆ ಮಹಾನಗರ ಪಾಲಿಕೆ ತನ್ನದೇ ಸ್ವಂತ ಆಂತರಿಕ ವರ್ತುಲ ರಸ್ತೆ ಮೆಟ್ರೊವನ್ನು ನಗರದೊಳಗೆ ಆರಂಭಿಸಲು ಕೂಡಾ ಯೋಜನೆ ರೂಪಿಸಿದೆ. ಪಿಆರ್‌ಟಿ ವ್ಯವಸ್ಥೆಯು ಮೆಟ್ರೊ ನಿಲ್ದಾಣಗಳಿಗೆ ಸುಲಭವಾಗಿ ಓಡಾಡಲು ಅನುಕೂಲ ಮಾಡಿಕೊಡಲಿದೆ. ಮುಂದಿನ 15 ದಿನಗಳ ಒಳಗಾಗಿ ಮಾರ್ಗವನ್ನು ಅಂತಿಮಪಡಿಸಲಾಗುವುದು ಎಂದು ಮೂಲಗಳು ಹೇಳಿವೆ.

"ಪಾಲಿಕೆ ಕಮಿಷನರ್ ಸಂಜೀವ್ ಜೈಸ್ವಾಲ್ ಈ ವಿನೂತನ ಯೋಜನೆಯನ್ನು ಥಾಣೆಯಲ್ಲಿ ಆರಂಭಿಸಲು ಉದ್ದೇಶಿಸಿದ್ದು, ಇದನ್ನು ಈಗಾಗಲೇ ಎಂಎಂಆರ್‌ಡಿಎ ಅಧಿಕಾರಿಗಳ ಮುಂದೆ ಪ್ರಸ್ತುತಪಡಿಸಲಾಗಿದೆ. ನಗರದಲ್ಲಿ ಸದ್ಯವೇ ಮೆಟ್ರೊ ಹಳಿ ಅಳವಡಿಸಲಾಗುವುದು. ಆದರೆ ಮೆಟ್ರೊ ನಿಲ್ದಾಣಗಳಿಗೆ ಸೂಕ್ತ ಸಂಪರ್ಕ ವ್ಯವಸ್ಥೆ ಕಲ್ಪಿಸುವುದು ಅಗತ್ಯ ಎಂಬ ಕಾರಣಕ್ಕೆ ಈ ಯೋಜನೆ ಜಾರಿಯಾಗುತ್ತಿದೆ" ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಸಂದೀಪ್ ಮಾಳ್ವಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News