ಟ್ವೆಂಟಿ-20 ಕ್ರಿಕೆಟ್: ಮತ್ತೊಂದು ದಾಖಲೆ ಮುರಿದ ಧೋನಿ

Update: 2018-02-19 09:11 GMT

ಜೋಹಾನ್ಸ್‌ಬರ್ಗ್, ಫೆ.19: ಒಂದೆಡೆ, ಭಾರತ ತಂಡ ದಕ್ಷಿಣ ಆಫ್ರಿಕ ವಿರುದ್ಧ ಗೆಲುವಿನ ನಾಗಾಲೋಟ ಮುಂದುವರಿಸಿದರೆ, ಮತ್ತೊಂದೆಡೆ, ದಾಖಲೆಗಳು ಪತನವಾಗುತ್ತಾ ಸಾಗುತ್ತಿದೆ. ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ ಹಲವು ಮೈಲುಗಲ್ಲು ದಾಖಲಿಸಿದ್ದು, ಇದರಲ್ಲಿ ಎಂ.ಎಸ್. ಧೋನಿಯ ದಾಖಲೆ ಗಮನಾರ್ಹವಾದುದು.

  ಧೋನಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ಕ್ಯಾಚ್‌ಗಳನ್ನು ಪಡೆದಿರುವ ಶ್ರೀಲಂಕಾದ ವಿಕೆಟ್‌ಕೀಪರ್ ಕುಮಾರ ಸಂಗಕ್ಕರರ ದಾಖಲೆಯನ್ನು ಮುರಿದರು. ಸಂಗಕ್ಕರ 254 ಪಂದ್ಯಗಳಲ್ಲಿ 133 ಕ್ಯಾಚ್ ಪಡೆದ ಸಾಧನೆ ಮಾಡಿದ್ದರು. ಭುವನೇಶ್ವರ ಕುಮಾರ್ ಬೌಲಿಂಗ್‌ನಲ್ಲಿ ಹೆಂಡ್ರಿಕ್ಸ್ ನೀಡಿದ ಕ್ಯಾಚ್ ಪಡೆಯುವ ಮೂಲಕ ಧೋನಿ ಈ ದಾಖಲೆಯನ್ನು ಮುರಿದರು. ಇದೀಗ ಧೋನಿ 275 ಟ್ವೆಂಟಿ-20 ಪಂದ್ಯಗಳಲ್ಲಿ 134 ಕ್ಯಾಚ್ ಪಡೆದಿದ್ದಾರೆ. ಇದರಲ್ಲಿ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ ಐಪಿಎಲ್‌ನಲ್ಲಿನ ಪ್ರದರ್ಶನ ಕೂಡ ಸೇರಿದೆ.

 ಗರಿಷ್ಠ ಕ್ಯಾಚ್ ಪಡೆದ ವಿಕೆಟ್‌ಕೀಪರ್‌ಗಳ ಪಟ್ಟಿಯಲ್ಲಿ ಭಾರತದ ಇನ್ನೋರ್ವ ಆಟಗಾರ ದಿನೇಶ್ ಕಾರ್ತಿಕ್ 3ನೇ ಸ್ಥಾನದಲ್ಲಿದ್ದಾರೆ. ಪಾಕ್‌ನ ಕಮ್ರಾನ್ ಅಕ್ಮಲ್ ಹಾಗೂ ವೆಸ್ಟ್‌ಇಂಡೀಸ್‌ನ ದಿನೇಶ್ ರಾಮ್‌ದಿನ್ ಆನಂತರದ ಸ್ಥಾನದಲ್ಲಿದ್ದಾರೆ.

 ಮೊದಲ ಟ್ವೆಂಟಿ-20ಯಲ್ಲಿ ಮೂಡಿಬಂದ ದಾಖಲೆಗಳು ಇಂತಿವೆ...

 *ಭುವನೇಶ್ವರ ಕುಮಾರ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 5 ವಿಕೆಟ್ ಗೊಂಚಲು ಪಡೆದ ಭಾರತದ ಮೊದಲ ವೇಗದ ಬೌಲರ್. ಯಜುವೇಂದ್ರ ಚಹಾಲ್ ಬಳಿಕ ಈ ಸಾಧನೆ ಮಾಡಿದ ಭಾರತದ 2ನೇ ಬೌಲರ್. ಚಹಾಲ್ ಕಳೆದ ವರ್ಷ ಫೆಬ್ರವರಿಯಲ್ಲಿ ನಡೆದ ಟ್ವೆಂಟಿ-20ಯಲ್ಲಿ 5 ವಿಕೆಟ್ ಗೊಂಚಲು ಪಡೆದ ಮೊದಲ ಭಾರತೀಯ ಎನಿಸಿಕೊಂಡಿದ್ದರು.

*ಭುವನೇಶ್ವರ್ ಎಲ್ಲ 3 ಮಾದರಿಯ ಕ್ರಿಕೆಟ್‌ನಲ್ಲಿ 5 ವಿಕೆಟ್ ಗೊಂಚಲು ಪಡೆದ ಭಾರತದ ಮೊದಲ ಬೌಲರ್.

*ಮೊದಲ ಟ್ವೆಂಟಿ-20ಯಲ್ಲಿ 203 ರನ್ ಗಳಿಸಿದ ಭಾರತ ಟಿ-20 ಕ್ರಿಕೆಟ್‌ನಲ್ಲಿ 200ಕ್ಕೂ ಅಧಿಕ ಸ್ಕೋರ್ ಗಳಿಸಿದ ತಂಡಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕ(11)ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯ(10) 2ನೇ ಸ್ಥಾನದಲ್ಲಿದೆ.

*ಭಾರತ ಮೊದಲ ಟ್ವೆಂಟಿ-20ಯ ಮೊದಲ 6 ಓವರ್‌ಗಳಲ್ಲಿ 73 ರನ್ ಗಳಿಸಿತು. ಇದು ಪವರ್‌ಪ್ಲೇಯಲ್ಲಿ ದಾಖಲಾದ ಗರಿಷ್ಠ ಸ್ಕೋರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News