ಗೋರಖ್‌ಪುರ ಉಪ ಚುನಾವಣೆ: 3 ದಶಕಗಳ ಸಂಪ್ರದಾಯ ಮುರಿದ ಬಿಜೆಪಿ

Update: 2018-02-19 09:44 GMT

 ಹೊಸದಿಲ್ಲಿ, ಫೆ.19: ಉತ್ತರಪ್ರದೇಶದ ಗೋರಖ್‌ಪುರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಉಪೇಂದ್ರ ಶುಕ್ಲಾರನ್ನು ಅಭ್ಯರ್ಥಿಯನ್ನಾಗಿ ಸೋಮವಾರ ಘೋಷಣೆ ಮಾಡಿದೆ. 30 ವರ್ಷಗಳ ಬಳಿಕ ಗೋರಖ್‌ಪುರ ದೇವಸ್ಥಾನದ ಹೊರಗಿನವರಿಗೆ ಲೋಕಸಭಾ ಟಿಕೆಟ್ ನೀಡಿರುವ ಬಿಜೆಪಿ ಹಳೆಯ ಸಂಪ್ರದಾಯಕ್ಕೆ ಅಂತ್ಯ ಹಾಡಿದೆ.

ಗೋರಖ್‌ಪುರ ಕ್ಷೇತ್ರಕ್ಕೆ ದೇವಾಲಯದ ಅರ್ಚಕರೇ ಲೋಕಸಭಾ ಅಭ್ಯರ್ಥಿಯಾಗಿರುತ್ತಿದ್ದರು. ಮಾ.11 ರಂದು ನಡೆಯಲಿರುವ ಉಪ ಚುನಾವಣೆಗೆ ಗೋರಖ್‌ಪುರ ಪ್ರಾದೇಶಿಕ ಘಟಕದ ಅಧ್ಯಕ್ಷ ಶುಕ್ಲಾಗೆ ಟಿಕೆಟ್ ಖಚಿತಪಡಿಸಲಾಗಿದೆ.

ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಕ್ರಮವಾಗಿ ಗೋರಖ್‌ಪುರ ಹಾಗೂ ಫುಲ್ಪುರ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾರಣ ಈ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುವ ಅಗತ್ಯ ಉಂಟಾಗಿದೆ.

  ಗೋರಖ್‌ಪುರ ಕ್ಷೇತ್ರವನ್ನು ಗೋರಖ್‌ನಾಥ್ ದೇವಾಲಯದ ಪ್ರಮುಖ ಅರ್ಚಕರು ಪ್ರತಿನಿಧಿಸುತ್ತಾ ಬಂದಿದ್ದಾರೆ. ಆದಿತ್ಯನಾಥ್‌ರ ಗುರು ಮಹಂತ ಅವೈದ್ಯನಾಥ್ 1989ರಲ್ಲಿ ಹಿಂದೂ ಮಹಾಸಭಾದ ಅಭ್ಯರ್ಥಿಯಾಗಿ ಗೋರಖ್‌ಪುರ ಲೋಕಸಭೆಗೆ ಆಯ್ಕೆಯಾಗಿದ್ದರು. ಆ ನಂತರ 1991 ಹಾಗೂ 1996ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸತತವಾಗಿ ಚುನಾಯಿತರಾಗಿದ್ದರು. ಅವೈದ್ಯನಾಥರ ಉತ್ತರಾಧಿಕಾರಿ, ದೇವಾಲಯದ ಪ್ರಮುಖ ಅರ್ಚಕ ಆದಿತ್ಯನಾಥ್ ಬಿಜೆಪಿ ಅಭ್ಯರ್ಥಿಯಾಗಿ 1998,1999,2004, 2009 ಹಾಗೂ 2014ರಲ್ಲಿ ಸತತ 5 ಬಾರಿ ಆಯ್ಕೆಯಾಗಿದ್ದರು. 4 ಬಾರಿ ಎಸ್ಪಿ ಹಾಗೂ ಒಂದು ಬಾರಿ ಎಸ್ಪಿ ಅಭ್ಯರ್ಥಿಯನ್ನು ಸೋಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News