ಶಾಸಕ ಹಾರಿಸ್ ಪುತ್ರ ಸಿಸಿಬಿ ಪೊಲೀಸರ ವಶಕ್ಕೆ

Update: 2018-02-19 15:05 GMT

ಬೆಂಗಳೂರು, ಫೆ.19: ನಗರದ ಯುಬಿ ಸಿಟಿಯ ಕೆಫೆಯೊಂದರಲ್ಲಿ ವಿದ್ವತ್ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ.ಹಾರಿಸ್ ಪುತ್ರ, ಮುಹಮ್ಮದ್ ನಲಪಾಡ್ ಹಾಗೂ ಇತರ ಆರು ಮಂದಿ ಆರೋಪಿಗಳನ್ನು ಫೆ.21ರವರೆಗೆ ಸಿಸಿಬಿ ಪೊಲೀಸರ ವಶಕ್ಕೆ ನೀಡಿ ಎಂಟನೆ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

ಸೋಮವಾರ ಬೆಳಗ್ಗೆ ಮುಹಮ್ಮದ್ ನಲಪಾಡ್, ವಕೀಲ ಉಸ್ಮಾನ್ ಎಂಬವರ ಜತೆ ಆಗಮಿಸಿ ಕಬ್ಬನ್‌ಪಾರ್ಕ್ ಠಾಣಾ ಪೊಲೀಸರಿಗೆ ಶರಣಾಗಿದ್ದ. ಈ ಸಂದರ್ಭದಲ್ಲಿ ನಲಪಾಡ್ ಪರವಾಗಿ ಉಸ್ಮಾನ್ ವಕಾಲತ್ತು ವಹಿಸಲು ಪ್ರಯತ್ನಿಸಿದರು. ಆದರೆ, ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್, ಡಿಸಿಪಿ ಚಂದ್ರಗುಪ್ತ ತನಿಖಾಧಿಕಾರಿಗಳೊಂದಿಗೆ ಆರೋಪಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ, ಮಾಹಿತಿ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ಎಂಟನೆ ಎಸಿಎಂಎಂ ನ್ಯಾಯಾಲಯವು ಕಬ್ಬನ್‌ಪಾರ್ಕ್ ಪೊಲೀಸರ ಕೋರಿಕೆಯಂತೆ ಎಲ್ಲ ಆರೋಪಿಗಳನ್ನು ಫೆ.21ರವರೆಗೆ ಪೊಲೀಸ್ ಕಸ್ಟಡಿಗೆ ವಹಿಸಿತು. ಆದರೆ, ನಗರ ಪೊಲೀಸ್ ಆಯುಕ್ತರು ಈ ಪ್ರಕರಣವನ್ನು ಸಿಸಿಬಿಗೆ ವಹಿಸಿರುವುದರಿಂದ ಆರೋಪಿಗಳನ್ನು ಕಬ್ಬನ್‌ಪಾರ್ಕ್ ಪೊಲೀಸರು, ಸಿಸಿಬಿ ಪೊಲೀಸರಿಗೆ ಹಸ್ತಾಂತರಿಸಿದರು.

ನ್ಯಾಯಾಲಯದಿಂದ ಆರೋಪಿಗಳನ್ನು ನೇರವಾಗಿ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ತಪಾಸಣೆ ನಡೆಸಲಾಯಿತು. ಆನಂತರ, ಅಲ್ಲಿಂದ ಸಿಸಿಬಿ ಕಚೇರಿಗೆ ಆರೋಪಿಗಳನ್ನು ರವಾನೆ ಮಾಡಲಾಯಿತು.

ಶಾಸಕರ ಪುತ್ರನನ್ನು ರಕ್ಷಿಸಲು ಪೊಲೀಸರು ದುರ್ಬಲವಾದ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಹಲ್ಲೆಗೊಳಗಾದ ಯುವಕನ ಆರೋಗ್ಯ ಸ್ಥಿತಿಯ ಮಾಹಿತಿ ಪಡೆದ ಗೃಹ ಸಚಿವ ರಾಮಲಿಂಗಾರೆಡ್ಡಿ ಸೂಚನೆ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ಆರೋಪಿಯ ವಿರುದ್ಧ ಕೊಲೆ ಯತ್ನ(307) ಜೀವಬೆದರಿಕೆಯ ಪ್ರಕರಣದಡಿಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದಾರೆ.

ಈ ಸಂಬಂಧ ಮುಹಮ್ಮದ್ ನಲಪಾಡ್ ಹಾಗೂ ಆತನ ಸ್ನೇಹಿತರ ವಿರುದ್ಧ ಗಂಭೀರ ಸ್ವರೂಪದ ಹಲ್ಲೆ (ಐಪಿಸಿ 326), ಅಕ್ರಮ ಬಂಧನ (ಐಪಿಸಿ 341), ಉದ್ದೇಶ ಪೂರ್ವಕವಾಗಿ ಶಾಂತಿ ಕದಡುವುದು (ಐಪಿಸಿ 504) ಹಾಗೂ ಜೀವ ಬೆದರಿಕೆ (ಐಪಿಸಿ 506) ಆರೋಪಗಳಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಶಾಸಕ ಹಾರಿಸ್ ಕ್ಷಮೆಯಾಚನೆ

ತಪ್ಪು ಯಾರು ಮಾಡಿದ್ದರೂ ತಪ್ಪೇ. ಆದರೆ, ಘಟನೆ ಈಗ ಆಗಿ ಹೋಗಿದೆ. ಅದರ ಬಗ್ಗೆ ಮಾತನಾಡುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ವಿದ್ವತ್‌ನ ತಂದೆ ನನ್ನ ಆಪ್ತ ಸ್ನೇಹಿತ. ಅವರಿಗೆ ದೂರವಾಣಿ ಕರೆ ಮಾಡಿ ಕ್ಷಮೆಯಾಚಿಸಿದ್ದೇನೆ. ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ತಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ ಎಂಬ ಅರಿವು ಅವನಿಗೆ ಇರಬೇಕಿತ್ತು. ಮಗ ಮಾಡಿದ ತಪ್ಪಿಗೆ ನಾನು ತಪ್ಪಿತಸ್ಥನ ಸ್ಥಾನದಲ್ಲಿ ನಿಂತಿದ್ದೇನೆ. ಯಾವ ಮಕ್ಕಳೂ ತಮ್ಮ ಪೋಷಕರಿಗೆ ಇಂತಹ ಸ್ಥಿತಿ ತರಬಾರದು.

-ಎನ್.ಎ.ಹಾರಿಸ್, ಕಾಂಗ್ರೆಸ್ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News