ಕೃಷಿಕರ ಧ್ವನಿ ಪುಟ್ಟಣ್ಣಯ್ಯ ಹಠಾತ್ ನಿಧನದಿಂದ ದಿಗ್ಭ್ರಮೆಯಾಗಿದೆ: ಸಿದ್ದರಾಮಯ್ಯ

Update: 2018-02-19 13:24 GMT

ಬೆಂಗಳೂರು, ಫೆ. 19: ರೈತ ಮುಖಂಡ ಹಾಗೂ ಪಾಂಡವಪುರ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರ ಹಠಾತ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ರೈತ ಚಳುವಳಿಯ ನಾಯಕರಾಗಿ ಹೊರಹೊಮ್ಮಿ ವಿಧಾನಸಭೆಯನ್ನು ಪ್ರವೇಶಿಸಿದ ಪುಟ್ಟಣ್ಣಯ್ಯ, ರೈತರ ಕಷ್ಟ-ಸಂಕಷ್ಟಗಳನ್ನು ಸದನದಲ್ಲಿ ಅತ್ಯಂತ ಸಮರ್ಥವಾಗಿ ಬಿಂಬಿಸಿ ಕೃಷಿಕರ ಧ್ವನಿಯಾಗಿದ್ದರು. ರೈತರಿಗೆ ಸಕಾಲದಲ್ಲಿ ನೀರು, ಬೀಜ ಹಾಗೂ ಗೊಬ್ಬರವನ್ನು ಒದಗಿಸಬೇಕು. ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ದೊರಕಿಸಿಕೊಡಬೇಕೆಂಬ ವಿಷಯವು ಸದನದಲ್ಲಿ ಪ್ರಸ್ತಾಪವಾದಾಗಲೆಲ್ಲಾ ಕೃಷಿ ತಜ್ಞರಂತೆಯೆ ನಿಖರ ಅಂಕಿ-ಅಂಶಗಳ ಸಹಿತ  ಭಾಷಣ ಮಾಡುತ್ತಿದ್ದ ಪುಟ್ಟಣ್ಣಯ್ಯ, ಕೃಷಿ ವಿಷಯದಲ್ಲಿನ ತಮ್ಮ ಅಪಾರ ಅನುಭವ ಹಾಗೂ ಪಾಂಡಿತ್ಯವನ್ನು ಹೊರಹಾಕಿ ಇಡೀ ಸದನವನ್ನೇ ಮಂತ್ರಮುಗ್ಧರನ್ನಾಗಿಸುತ್ತಿದ್ದರು. ಸದಾ ರೈತಪರ ಕಳಕಳಿ ಹಾಗೂ ಕಾಳಜಿ ಹೊತ್ತ ಪುಟ್ಟಣ್ಣಯ್ಯ ಅವರ ಈ ಹೃದಯಸ್ಪರ್ಶಿ ಮಾತುಗಳನ್ನು ಕೇಳಿದವರ ಕಣ್ಣಂಚಿನಲ್ಲಿ ನೀರು ಬರುತ್ತಿತ್ತು. ಅಷ್ಟೇ ಅಲ್ಲ, ಅನ್ನದಾತನ ಶ್ರಮ ಮತ್ತು ಪರಿಶ್ರಮದ ಬಗ್ಗೆ ಅಭಿಮಾನ ಮೂಡುತ್ತಿತ್ತು ಎಂದು ಸಿದ್ದರಾಮಯ್ಯ ಅವರು ಬಣ್ಣಿಸಿದ್ದಾರೆ.

ಪುಟ್ಟಣ್ಣಯ್ಯ ಅವರ ಆತ್ಮಕ್ಕೆ ಶಾಂತಿ ಲಭಿಸಲಿ. ಅವರ ಅಗಲಿಕೆಯಿಂದ ಉಂಟಾದ ದುಃಖ ಮತ್ತು ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಹಾಗೂ ರೈತ ಸಮೂಹಕ್ಕೆ ಭಗವಂತನು ದಯಪಾಲಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News