ಭಾರತ ತಂಡಕ್ಕೆ ವಾಪಸಾದ ಸರ್ದಾರ್ ಸಿಂಗ್ ಗೆ ಸಾರಥ್ಯ

Update: 2018-02-20 19:01 GMT

ಹೊಸದಿಲ್ಲಿ, ಫೆ.20: ಭಾರತದ ಹಿರಿಯ ಆಟಗಾರ ಸರ್ದಾರ್ ಸಿಂಗ್ ಅಂತಾರಾಷ್ಟ್ರೀಯ ಹಾಕಿ ತಂಡಕ್ಕೆ ವಾಪಸಾಗಿದ್ದಾರೆ. ಮಾತ್ರವಲ್ಲ 27ನೇ ಆವೃತ್ತಿಯ ಸುಲ್ತಾನ್ ಅಝ್ಲಾನ್ ಶಾ ಹಾಕಿ ಕಪ್‌ನಲ್ಲಿ ತಂಡದ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ.

ಸುಲ್ತಾನ್ ಅಝ್ಲಾನ್ ಶಾ ಹಾಕಿ ಕಪ್ ಟೂರ್ನಿಯು ಮಾ.3 ರಿಂದ ಮಲೇಷ್ಯಾದ ಇಪೋದಲ್ಲಿ ಆರಂಭವಾಗಲಿದ್ದು, ಮಾ.10 ರಂದು ಫೈನಲ್ ಪಂದ್ಯ ನಡೆಯಲಿದೆ. ಟೂರ್ನಿಯಲ್ಲಿ 6ನೇ ರ್ಯಾಂಕಿನ ಭಾರತವಲ್ಲದೆ, ವಿಶ್ವದ ನಂ.1 ಆಸ್ಟ್ರೇಲಿಯ, ವಿಶ್ವದ ನಂ.2 ಅರ್ಜೆಂಟೀನ, ಇಂಗ್ಲೆಂಡ್, ಐಸ್‌ಲ್ಯಾಂಡ್ ಹಾಗೂ ಆತಿಥೇಯ ಮಲೇಷ್ಯಾ ತಂಡಗಳು ಭಾಗವಹಿಸಲಿವೆ. 2018ರ ಬಿಡುವಿಲ್ಲದ ವೇಳಾಪಟ್ಟಿಯ ಹಿನ್ನೆಲೆಯಲ್ಲಿ ಬಲಿಷ್ಠ ತಂಡವನ್ನು ಸಜ್ಜುಗೊಳಿಸುವ ಉದ್ದೇಶದಿಂದ ಟೀಮ್ ಮ್ಯಾನೇಜ್‌ಮೆಂಟ್ ಯುವ ಆಟಗಾರರಿಗೆ ಹೆಚ್ಚಿನ ಮಣೆ ಹಾಕಿತ್ತು. ಈ ಹಿನ್ನೆಲೆಯಲ್ಲಿ ಸರ್ದಾರ್ ಭಾರತೀಯ ಹಾಕಿ ತಂಡದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ವಿಫಲರಾಗಿದ್ದರು.

2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಡುವ ಬಯಕೆ ಹೊಂದಿರುವುದಾಗಿ ಸರ್ದಾರ್ ಹೇಳಿಕೆ ನೀಡಿದ ಎರಡು ವಾರಗಳ ಬಳಿಕ ತಂಡಕ್ಕೆ ವಾಪಸಾಗಿದ್ದಾರೆ.

‘‘ಕೋರ್ ಗ್ರೂಪ್‌ನಲ್ಲಿ ಸರ್ದಾರ್ ಓರ್ವ ನಾಯಕರಾಗಿದ್ದು, ಮನ್‌ಪ್ರೀತ್ ಸಿಂಗ್ ಅನುಪಸ್ಥಿತಿಯಲ್ಲಿ ಸರ್ದಾರ್ ಮೊದಲ ಆಯ್ಕೆಯಾಗಿದ್ದಾರೆ. ಸರ್ದಾರ್ ಅನುಭವಿ ಆಟಗಾರನಾಗಿದ್ದು, ಕಳೆದ ಎರಡು ಟೂರ್ನಿಗಳಿಂದ ವಂಚಿತರಾಗಿದ್ದರು. ಇದೀಗ ಅವರಿಗೆ ತಮ್ಮ ಕೌಶಲ್ಯವನ್ನು ತೋರಿಸಲು ಮತ್ತೊಂದು ಅವಕಾಶ ನೀಡಲಾಗಿದೆ’’ ಎಂದು ಕೋಚ್ ಜೋರ್ಡ್ ಮಾರ್ಜಿನ್ ಹೇಳಿದ್ದಾರೆ.

ರಮಣ್‌ದೀಪ್ ಸಿಂಗ್ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ. ಮೂವರು ಹೊಸ ಮುಖಗಳಾದ ಮನ್‌ದೀಪ್ ಮೋರ್, ಸುಮಿತ್ ಕುಮಾರ್ ಹಾಗೂ ಶೀಲಾನಂದ ಲಾಕ್ರಾಗೆ ಅವಕಾಶ ನೀಡಲಾಗಿದೆ.

►ಭಾರತದ ಹಾಕಿ ತಂಡ : ಗೋಲ್‌ಕೀಪರ್‌ಗಳು: ಸೂರಜ್ ಕರ್ಕೇರ, ಕೃಷ್ಣ ಬಿ.ಪಾಠಕ್

ಡಿಫೆಂಡರ್‌ಗಳು: ಅಮಿತ್ ರೋಹಿದಾಸ್, ಡಿಪ್ಸನ್ ಟಿರ್ಕಿ, ವರುಣ್ ಕುಮಾರ್, ಸುರೇಂದರ್ ಕುಮಾರ್, ನೀಲಂ ಸಂಜೀಬ್, ಮನ್‌ದೀಪ್ ಮೋರ್.

ಮಿಡ್‌ಫೀಲ್ಡರ್‌ಗಳು: ಎಸ್.ಕೆ. ಉತ್ತಪ್ಪ, ಸರ್ದಾರ್ ಸಿಂಗ್(ನಾಯಕ), ಸುಮಿತ್, ನೀಲಕಂಠ ಶರ್ಮಾ, ಸಿಮ್ರಾನ್‌ಜೀತ್ ಸಿಂಗ್.

ಫಾರ್ವರ್ಡ್‌ಗಳು: ಗುರ್ಜಂತ್ ಸಿಂಗ್, ರಮಣ್‌ದೀಪ್ ಸಿಂಗ್(ಉಪ ನಾಯಕ), ತಲ್ವಿಂದರ್ ಸಿಂಗ್, ಸುಮಿತ್ ಕುಮಾರ್(ಜೂನಿಯರ್), ಶೀಲಾನಂದ ಲಾಕ್ರಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News