ಪಿಎನ್ ಬಿಯಿಂದ ಸಾಲ ಪಡೆದ ನಂತರ ನಿಧನರಾದ ಲಾಲ್ ಬಹದ್ದೂರ್‌ ಶಾಸ್ತ್ರಿ

Update: 2018-02-21 06:47 GMT

 ಹೊಸದಿಲ್ಲಿ, ಫೆ. 21: ಚಿನ್ನದ ಆಭರಣಗಳ ಉದ್ಯಮಿ ನೀರವ್‌ ಮೋದಿಗೆ 11,400 ಕೋಟಿ ರೂ.ಸಾಲ ನೀಡಿದ್ದ ಪಂಜಾಬ್ ನ್ಯಾಶನಲ್ ಬ್ಯಾಂಕ್ ನಿಂದ  ಮಾಜಿ ಪ್ರಧಾನಿ ದಿವಂಗತ ಲಾಲ್ ಬಹದ್ದೂರ್‌ ಶಾಸ್ತ್ರಿ ಅವರು 1964ರಲ್ಲಿ ಕಾರು ಖರೀದಿಸುವ ಉದ್ದೇಶಕ್ಕಾಗಿ 5,000 ರೂ ಸಾಲ ಪಡೆದಿದ್ದರು. ಆದರೆ ಶಾಸ್ತ್ರಿ ನಿಧನರಾಗುವ ಹೊತ್ತಿಗೆ ಸಾಲದ ಮರು ಪಾವತಿ ಸಾಧ್ಯವಾಗಲಿಲ್ಲ.  ಬಳಿಕ ಅವರ ಪತ್ನಿ ಸಾಲವನ್ನು ಮರುಪಾವತಿ ಮಾಡಿದ್ದರು.

ಶಾಸ್ತ್ರಿ ಅವರು ತಮ್ಮ ವೈಯಕ್ತಿಕ ಕೆಲಸಗಳಿಗಾಗಿ ಅಧಿಕೃತ ಸರಕಾರಿ ಕಾರು ಬಳಕೆ ಮಾಡುತ್ತಿರಲಿಲ್ಲ. ಕುಟುಂಬದ ಸದಸ್ಯರಿಗೂ ಸರಕಾರಿ ಕಾರು ಬಳಸದಂತೆ ತಾಕೀತು ಮಾಡಿದ್ದರು. ಒಂದು ಬಾರಿ ಶಾಸ್ತ್ರಿ ಪುತ್ರ ಅನಿಲ್ ಶಾಸ್ತ್ರಿ ಅವರು ಶಾಲೆಗೆ ತೆರಳಲು ಸರಕಾರಿ ಕಾರು ಬಳಸಿದಕ್ಕಾಗಿ ಶಾಸ್ತ್ರಿ ಅವರು ಕೋಪಗೊಂಡಿದ್ದರು. ಇನ್ನೂ ಸರಕಾರಿ ಕಾರು ಬಳಸದಂತೆ ಕುಟುಂಬದ ಸದಸ್ಯರಿಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. 

ಅಷ್ಟರ ತನಕ ಅವರ ಬಳಿ ಸ್ವಂತ ಕಾರು ಇರಲಿಲ್ಲ. ಈ ಪ್ರಕರಣದ ಹಿನ್ನೆಲೆಯಲ್ಲಿ ಶಾಸ್ತ್ರಿ ಅವರು ಕುಟುಂಬದ ಬಳಕೆಗೆ ಕಾರು ಖರೀದಿಸಲು ಚಿಂತನೆ ನಡೆಸಿದರು. ಆದರೆ ಕಾರು ಖರೀದಿಸಲು ಅವರ ಬಳಿ ಅಷ್ಟೊಂದು ಹಣವಿರಲಿಲ್ಲ. ಕಾರು ಖರೀದಿಗೆ 12 ಸಾವಿರ ರೂ.ಗಳ ಅವಶ್ಯಕತೆ ಇತ್ತು. ಆದರೆ ಶಾಸ್ತ್ರಿ ಅವರ ಬ್ಯಾಂಕ್ ಖಾತೆಯಲ್ಲಿ ಕೇವಲ 7 ಸಾವಿರ ರೂ. ಇತ್ತು. ಈ ಕಾರಣದಿಂದಾಗಿ ಶಾಸ್ತ್ರಿ ಅವರು 5 ಸಾವಿರ ರೂ. ಸಾಲ ಪಡೆಯಲು ಪಂಜಾಬ್ ಬ್ಯಾಂಕ್ ಗೆ ಅರ್ಜಿ ಸಲ್ಲಿಸಿದರು. ಅವರಿಗೆ ಅರ್ಜಿ ಸಲ್ಲಿಸಿದ ದಿನವೇ ಬ್ಯಾಂಕ್ ನಿಂದ ಸಾಲ ಮಂಜೂರಾಗಿತ್ತು. ಶಾಸ್ತ್ರಿ 1964 ಮಾಡೆಲ್ ನ ಫಿಯೆಟ್ ಕಾರ್ ಖರೀದಿಸಿದ್ದರು.

ಶಾಸ್ತ್ರಿ ಕುಟುಂಬದ ಸದಸ್ಯರು ತಮ್ಮ ಸ್ವಂತದ ಕೆಲಸಗಳಿಗೆ ಇದೇ ಕಾರನ್ನು ಬಳಕೆ ಮಾಡುತ್ತಿದ್ದರು. 1966ರ ಜನವರಿ 10ರಂದು ತಾಷ್ಕೆಂಟ್ ಒಪ್ಪಂದಕ್ಕೆ ಶಾಸ್ತ್ರಿ ಮತ್ತು ಅಯೂಬ್ ಖಾನ್ ಸಹಿ ಹಾಕಿದರು. ಆದರೆ ಅದೇ ದಿನದಂದು  ಲಾಲ್ ಬಹದ್ದೂರ್‌ ಶಾಸ್ತ್ರಿ ಅಲ್ಲಿ ಕೊನೆಯುಸಿರೆಳೆದರು.

ಶಾಸ್ತ್ರಿ ಅವರಿಗೆ ನಿಧನರಾಗುವ ಮುನ್ನ ಬ್ಯಾಂಕ್ ನಿಂದ ಪಡೆದ 5 ಸಾವಿರ ರೂ. ಸಾಲ ಪಾವತಿಸಲು ಸಾಧ್ಯವಾಗಿರಲಿಲ್ಲ. ಅವರ ಪತ್ನಿ ಲಲಿತ್ ಶಾಸ್ತ್ರಿ ತಮಗೆ ದೊರೆಯುತ್ತಿದ್ದ ಪಿಂಚಣಿ ಹಣದಿಂದ ಪತಿ ಲಾಲ್ ಬಹದ್ದೂರ್‌ ಶಾಸ್ತ್ರಿ ಅವರು ಬ್ಯಾಂಕ್ ನಿಂದ ಪಡೆದಿದ್ದ ಸಾಲವನ್ನು ಮರುಪಾವತಿ ಮಾಡಿದ್ದರು.  ಶಾಸ್ತ್ರಿ ಅವರು ಬಳಕೆ ಮಾಡುತ್ತಿದ್ದ ಕ್ರೀಮ್ ಬಣ್ಣದ ಫಿಯೆಟ್ ಕಾರನ್ನು(ನಂ. ಡಿಎಲ್ ಇ 6)  ದಿಲ್ಲಿಯ ನಂ.1 ಮೋತಿಲಾಲ್ ನೆಹರೂ ರಸ್ತೆಯಲ್ಲಿರುವ ಶಾಸ್ತ್ರಿ ಸ್ಮಾರಕ ಭವನದಲ್ಲಿ ನೋಡಬಹುದಾಗಿದೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News