ಪಾಕ್ ಸೆನೆಟ್ ಚುನಾವಣೆಗೆ ಸ್ಪರ್ಧಿಸಲಿರುವ ಪ್ರಥಮ ದಲಿತ ಮಹಿಳೆ - ಕೃಷ್ಣ ಲಾಲ್ ಕೊಹ್ಲಿ

Update: 2018-02-21 09:35 GMT

ಕರಾಚಿ, ಫೆ. 21: ಪಾಕಿಸ್ತಾನದ ಸೆನೆಟ್ ಚುನಾವಣೆಗೆ ಸ್ಪರ್ಧಿಸುತ್ತಿರುವ ಪ್ರಪ್ರಥಮ ದಲಿತ ಮಹಿಳೆ ಎಂಬ ಹೆಗ್ಗಳಿಕೆಗೆ ಕೃಷ್ಣ ಲಾಲ್ ಕೊಹ್ಲಿ ಪಾತ್ರರಾಗಿದ್ದಾರೆ.

ಕಿಶೂ ಭಾಯಿ ಎಂದೂ ಕರೆಯಲ್ಪಡುವ ಕೃಷ್ಣ ಲಾಲ್ ಕೊಹ್ಲಿ ಅವರಿಗೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಸ್ಪರ್ಧಿಸುವ ಅವಕಾಶ ನೀಡಿದ್ದು, ಅಂತಿಮಗೊಂಡಿರುವ 12 ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರು ಇದೆ.

ಚುನಾವಣೆಯಲ್ಲಿ ಕೃಷ್ಣ ಲಾಲ್ ಅವರು ಜಯ ಗಳಿಸಿದ್ದೇ ಆದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದಿಂದ ಗ್ರಾಮೀಣ ಸಿಂಧ್ ಪ್ರದೇಶದಿಂದ ಆಯ್ಕೆಯಾದ ಪ್ರಥಮ ಮಹಿಳಾ ಸೆನೆಟರ್ ಎಂದು ಅವರು ಗುರುತಿಸಲ್ಪಡಲಿದ್ದಾರೆ.

ಅವರ ಬಗ್ಗೆ ಇಲ್ಲಿವೆ ಕೆಲ ಮಾಹಿತಿಗಳು

► 1979ರಲ್ಲಿ ಹುಟ್ಟಿದ ಕೃಷ್ಣ ಲಾಲ್ ಕೊಹ್ಲಿ ಅವರು ಸಿಂಧ್ ಪ್ರಾಂತ್ಯದಲ್ಲಿರುವ ಧನಾ ಗಮ್ ಎಂದು ಕರೆಯಲ್ಪಡುವ ನಗರಪರ್ಕರ್ ಪ್ರದೇಶದವರಾಗಿದ್ದು, ಮಾನವ ಹಕ್ಕು ಕಾರ್ಯಕರ್ತೆಯಾಗಿದ್ದಾರೆ.

► ಅವರು ಪಾಕಿಸ್ತಾನದ ಹಿಂದೂ ಅಲ್ಪಸಂಖ್ಯಾತ ಕೊಹ್ಲಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

► ಅವರ ಕುಟುಂಬ ಸದಸ್ಯರು ಜೀತದಾಳುಗಳಾಗಿದ್ದರು. ಕೊಹ್ಲಿ ಅವರು ಮೂರನೇ ತರಗತಿಯಲ್ಲಿದ್ದಾಗಲೇ ಜೀತದಾಳಾಗಿ ಕೆಲಸ ಮಾಡಿದ್ದರು.

► ಅವರಿಗೆ 16 ವರ್ಷ ವಯಸ್ಸಿನಲ್ಲೇ ಲಾಲ್ ಚಂದ್ ಎಂಬ ಸಿಂಧ್ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಂದಿಗೆ ವಿವಾಹವಾಗಿತ್ತು. 

► ವಿವಾಹದ ನಂತರ ಕೃಷ್ಣ ಲಾಲ್ ಕೊಹ್ಲಿ ಸಿಂಧ್ ವಿವಿಯಿಂದ ಸಮಾಜಶಾಸ್ತ್ರದಲ್ಲಿ ಪದವಿ ಪಡೆದು ನಂತರ ಸ್ನಾತ್ತಕೋತ್ತರ ಪದವಿಯನ್ನೂ ಪತಿಯ ಪ್ರೋತ್ಸಾಹದಿಂದ ಪಡೆದರು. 

► 2005ರಿಂದಲೇ ಸಾಮಾಜಿಕ ಕಾರ್ಯಕರ್ತೆಯಾಗಿರುವ ಕೃಷ್ಣ ಲಾಲ್ ಕೊಹ್ಲಿ ಇಸ್ಲಾಮಾಬಾದ್ ನಗರದಲ್ಲಿ 2007ರಲ್ಲಿ ನಡೆದ ಮೆಹೆರ್‌ಘರ್ ಮಾನವ ಹಕ್ಕು ಯುವ ನಾಯಕತ್ವ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದರು.

► ಮಾನವ ಹಕ್ಕು ಉಲ್ಲಂಘನೆ, ಜೀತದಾಳು ಪದ್ಧತಿ ಹಾಗೂ ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗಾಗುತ್ತಿರುವ ಲೈಂಗಿಕ ಕಿರುಕುಳದ ವಿರುದ್ಧ ಕೃಷ್ಣ ಲಾಲ್ ಕೊಹ್ಲಿ ಹೋರಾಡಿದ್ದರು.

► ಪಾಕಿಸ್ತಾನದ ಯುತ್ ಸಿವಿಲ್ ಆ್ಯ ಕ್ಷನ್ ಕಾರ್ಯಕ್ರಮದಂಗವಾಗಿಯೂ ಅವರು ಕೆಲಸ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News