ಇಶ್ರತ್ ಜಹಾನ್ ಪ್ರಕರಣ: ನಿವೃತ್ತ ಡಿಜಿಪಿ ಪಾಂಡೆಗೆ ಕ್ಲೀನ್ ಚಿಟ್

Update: 2018-02-21 11:03 GMT

ಅಹ್ಮದಾಬಾದ್, ಫೆ.21: ಇಶ್ರತ್ ಜಹಾನ್ ಎನ್‍ಕೌಂಟರ್ ಪ್ರಕರಣದಲ್ಲಿ ಆರೋಪಿಯೆಂದು ಗುರುತಿಸಲ್ಪಟ್ಟಿದ್ದ ಗುಜರಾತ್ ರಾಜ್ಯದ ಮಾಜಿ ಡಿಜಿಪಿ ಪಿ.ಪಿ. ಪಾಂಡೆಯನ್ನು  ವಿಶೇಷ ಸಿಬಿಐ ನ್ಯಾಯಾಲಯವೊಂದು ಬುಧವಾರ ವಿಚಾರಣೆಯಿಂದ ಕೈಬಿಟ್ಟಿದೆ. ಪ್ರಸಕ್ತ ಜಾಮೀನಿನ ಮೇಲಿದ್ದ ಪಾಂಡೆ 2013ರಲ್ಲಿ ಸಿಬಿಐನಿಂದ ಬಂಧನಕ್ಕೊಳಗಾದಾಗ ಈ ಪ್ರಕರಣದಲ್ಲಿ  ಬಂಧಿತ ಅತ್ಯಂತ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದರು. ಇಂದು ವಿಶೇಷ ಸಿಬಿಐ ನ್ಯಾಯಾಧೀಶ ಜೆ ಕೆ ಪಾಂಡ್ಯ ಅವರು ತೀರ್ಪು ನೀಡಿದ್ದು ಇಶ್ರತ್ ಜಹಾನ್ ಪ್ರಕರಣದ ವಿಚಾರಣೆ ಹಂತದಲ್ಲಿಯೇ ಆರೋಪಿಯೊಬ್ಬರ ಹೆಸರನ್ನು ಕೈಬಿಟ್ಟಿರುವುದು ಇದೇ ಮೊದಲು.

ಜುಲೈ 19, 2013ರಲ್ಲಿ ಸಿಬಿಐನಿಂದ ಬಂಧಿತರಾಗಿದ್ದ 1980 ಬ್ಯಾಚಿನ ಐಪಿಎಸ್ ಅಧಿಕಾರಿ ಪಾಂಡೆ ಸುಮಾರು 19 ತಿಂಗಳು ಜೈಲಿನಲ್ಲಿ ಕಳೆದು ಫೆಬ್ರವರಿ 2015ರಲ್ಲಿ ಬಿಡುಗಡೆಗೊಂಡಿದ್ದರು. ನಂತರ ಅವರನ್ನು ಸೇವೆಗೆ ಮತ್ತೆ ಸೇರ್ಪಡೆಗೊಳಿಸಲಾಗಿತ್ತು. ಅವರು ಕಳೆದ ವರ್ಷ ನಿವೃತ್ತರಾಗಿದ್ದರು.

ಮುಂಬೈ ಮೂಲದ 19 ವರ್ಷದ ಇಶ್ರತ್ ಜಹಾನ್, ಜಾವೇದ್ ಶೇಖ್ ಅಲಿಯಾಸ್ ಪ್ರಾಣೇಶ್ ಪಿಳ್ಳೈ ಹಾಗೂ ಇಬ್ಬರು ಶಂಕಿತ ಪಾಕಿಸ್ತಾನಿಯರನ್ನು 2004ರಲ್ಲಿ ಅಪಹರಿಸಿ ಕೊಲ್ಲುವ ಸಂಚು ಹೂಡಿದ ಆರೋಪದ ಮೇಲೆ ಪಾಂಡೆ ಹೊರತಾಗಿ ನಿವೃತ್ತ ಐಪಿಎಸ್ ಅಧಿಕಾರಿ ಡಿ ಜಿ ವಂಝಾರ,  ಐಪಿಎಸ್ ಅಧಿಕಾರಿ ಜಿ.ಎಲ್. ಸಿಂಘಾಲ್, ಡಿಎಸ್ಪಿ ಎನ್. ಕೆ. ಅಮೀನ್, ಡಿವೈಎಸ್ಪಿ ತರುಣ್ ಬರೊಟ್ ಮತ್ತಿತರರ ವಿರುದ್ಧ ಸಿಬಿಐ ಆರೋಪ ಪಟ್ಟಿ ಸಲ್ಲಿಸಿತ್ತು.

ನಕಲಿ ಎನ್‍ಕೌಂಟರ್ ಒಂದರಲ್ಲಿ ಅವರನ್ನು ಸಾಯಿಸಲಾಗಿತ್ತು ಎಂದು ಸಿಬಿಐ ಹೇಳಿಕೊಂಡಿತ್ತಲ್ಲದೆ ಪಾಂಡೆ ಅವರನ್ನು ಪ್ರಕರಣದಿಂದ ಕೈಬಿಡುವುದನ್ನು ವಿರೋಧಿಸಿತ್ತು. ಇಶ್ರತ್ ಜಹಾನ್ ಹಾಗೂ ಜಾವೇದ್ ಶೇಖ್ ನನ್ನು ಪಾಂಡೆ ಭೇಟಿಯಾಗಿದ್ದರು, ಅವರ ಹತ್ಯೆಯ ಹಿಂದೆ ಅವರ ಶಾಮೀಲಾತಿ ದೃಢಪಡಿಸಲು ಸಾಕ್ಷ್ಯಗಳಿವೆ  ಹಾಗೂ ಎನ್‍ಕೌಂಟರ್ ಗೂ ಮುನ್ನ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು ಎಂದು ಸಿಬಿಐ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News