ರಾಜಕೀಯ ಪಕ್ಷಗಳ ಬಗ್ಗೆ ಬಿಪಿನ್ ರಾವತ್ ಹೇಳಿಕೆಗೆ ಉವೈಸಿ ಆಕ್ಷೇಪ

Update: 2018-02-22 08:17 GMT

ಹೊಸದಿಲ್ಲಿ, ಫೆ.22: ಮಂಗಳವಾರ ದಿಲ್ಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ್ದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅಸ್ಸಾಂನಲ್ಲಿ ಬದ್ರುದ್ದೀನ್ ಅಜ್ಮಲ್ ನೇತೃತ್ವದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ವೇಗವಾಗಿ ಬೆಳೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿರುವ ಎಐಎಂಐಎಂ ನಾಯಕ ಹಾಗೂ ಸಂಸದ ಅಸಾಸುದ್ದೀನ್ ಉವೈಸಿ, ರಾಜಕೀಯ ಪಕ್ಷಗಳ ಬಗ್ಗೆ ಪ್ರತಿಕ್ರಿಯಿಸುವುದು ಸೇನಾ ಮುಖ್ಯಸ್ಥರ ಕೆಲಸವಲ್ಲ ಎಂದಿದ್ದಾರೆ.

ಬಿಪಿನ್ ರಾವತ್ ತಮ್ಮ ಹೇಳಿಕೆಯಲ್ಲಿ ಅಸ್ಸಾಂ ಪ್ರವೇಶಿಸುತ್ತಿರುವ ಅಕ್ರಮ ಮುಸ್ಲಿಂ ವಲಸಿಗರಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿ ಎಐಯುಡಿಎಫ್ ಕ್ಷಿಪ್ರವಾಗಿ ಅಭಿವೃದ್ಧಿಯಾಗಿದೆ ಎಂದು ಹೇಳಿದ್ದರಲ್ಲದೆ, ಬಿಜೆಪಿ ಇಷ್ಟು ವರ್ಷಗಳಲ್ಲಿ ಸಾಧಿಸಿದ ಪ್ರಗತಿಗಿಂತಲೂ ಹೆಚ್ಚಿನ ವೇಗದಲ್ಲಿ ಎಐಯುಡಿಎಫ್ ಪ್ರಗತಿ ಸಾಧಿಸಿದೆ ಎಂದಿದ್ದರು.

ಸೇನಾ ಮುಖ್ಯಸ್ಥರು ಇಂತಹ ಹೇಳಿಕೆಯೇಕೆ ನೀಡಿದ್ದಾರೆಂದು ಉವೈಸಿ ಆಶ್ಚರ್ಯ ವ್ಯಕ್ತಪಡಿಸಿದ್ದಾರಲ್ಲದೆ ಪ್ರಜಾತಂತ್ರ ದೇಶವೊಂದರಲ್ಲಿ ರಾಜಕೀಯ ಪಕ್ಷಗಳನ್ನು ರಚಿಸಲಾಗುತ್ತದೆ ಹಾಗೂ ಅವುಗಳು ವಿಸ್ತರಿಸಲ್ಪಡುತ್ತವೆ ಎಂದಿದ್ದಾರೆ. ‘‘ಸೇನಾ ಮುಖ್ಯಸ್ಥರು ರಾಜಕೀಯ ವಿಚಾರಗಳಲ್ಲಿ ಹಸ್ತಕ್ಷೇಪ ನಡೆಸಬಾರದು ಹಾಗೂ ರಾಜಕೀಯ ಪಕ್ಷವೊಂದರ ಪ್ರಗತಿಯ ಬಗ್ಗೆ ಪ್ರತಿಕ್ರಿಯಿಸುವುದು ಅವರ ಕೆಲಸವಲ್ಲ’’ ಎಂದು ಉವೈಸಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News