ಲಾಬಿ ಕಂಪೆನಿ ಕೆಪಿಎಂಜಿಯಿಂದ ಕೇಂದ್ರದ ಹಿರಿಯ ಅಧಿಕಾರಿಗಳ ದುರ್ಬಳಕೆ?

Update: 2018-02-24 10:30 GMT

ಲಾಭ ಪಡೆದವರ ಪಟ್ಟಿಯಲ್ಲಿ ಕೇಂದ್ರದ 9 ಹಿರಿಯ ಅಧಿಕಾರಿಗಳು

ಹೊಸದಿಲ್ಲಿ,ಫೆ.24: ಐಎಎಸ್ ಅಧಿಕಾರಿಯೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ಅನಾಮಧೇಯ ಪತ್ರ ಬರೆದು, ಬಹುರಾಷ್ಟ್ರೀಯ ಸಲಹಾ ಸಂಸ್ಥೆ ಕೆಪಿಎಂಜಿ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೆಂದ್ರ ಸರ್ಕಾರದಲ್ಲಿ ನಿರ್ದೇಶಕ ಹುದ್ದೆಯಲ್ಲಿರುವ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡಿರುವ ಈ ಅಧಿಕಾರಿ, ಈ ಸಂಸ್ಥೆಯ ಒಂದು ಗುಂಪು ವಾಮಮಾರ್ಗದಿಂದ ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದೆ ಎಂದು ಆಪಾದಿಸಿದ್ದಾರೆ. ಅಧಿಕಾರಿಗಳ ಮಕ್ಕಳು ಹಾಗೂ ಸಂಬಂಧಿಕರನ್ನು ನೇಮಕ ಮಾಡಿಕೊಂಡು ಪ್ರಭಾವ ಬೀರಲು ಯತ್ನಿಸುತ್ತಿದೆ ಎಂದು ದೂರಿದ್ದಾರೆ. ಅಧಿಕಾರಿಗಳಿಗೆ ಲಂಚದ ಆಮಿಷ ಒಡ್ಡಿರುವುದು, ಅಂತಾರಾಷ್ಟ್ರೀಯ ಘಟಕಗಳಿಗೆ ಪ್ರಮುಖ ಸರ್ಕಾರಿ ಗುತ್ತಿಗೆಗಳನ್ನು ನೀಡಿರುವುದು ದೇಶೀಯ ಕೈಗಾರಿಕೆಗಳ ಪಾಲಿಗೆ ಮಾರಕ ಎಂದು ಪತ್ರದಲ್ಲಿ ವಿವರಿಸಲಾಗಿದೆ. ಈ ಕುರಿತು ‘THE CARAVAN' ಕಾರವಾನ್’ ನಲ್ಲಿ ಪರಂಜೋಯ್ ಗುಹಾ ಥಾಕುರ್ತ ಮತ್ತು ಆಬಿರ್ ದಾಸ್ ಗುಪ್ತಾ ಅವರು ವೀಶೇಷ ವರದಿ ಪ್ರಕಟ ಮಾಡಿದ್ದಾರೆ.

ಆದರೆ ಕೆಪಿಎಂಜಿ ವಕ್ತಾರರು ಈ ಆರೋಪವನ್ನು ಅಲ್ಲಗಳೆದಿದ್ದಾರೆ. "ಖಾಸಗಿ ಬಹುರಾಷ್ಟ್ರೀಯ ಕನ್ಸಲ್ಟಿಂಗ್ ಕಂಪನಿ ಜತೆ ಶಾಮೀಲಾಗಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ" ಎಂದು ಹೇಳಿರುವ ಅಧಿಕಾರಿ, ಸಹೋದ್ಯೋಗಿಗಳು ವಿಚಾರಣೆಯ ನೆಪದಲ್ಲಿ ಕಿರುಕುಳ ನೀಡುವ ಸಾಧ್ಯತೆ ಇರುವುದರಿಂದ ಗುರುತು ಬಹಿರಂಗಪಡಿಸುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಪತ್ರ ಸರ್ಕಾರಿ ವಲಯದಲ್ಲಿ ಇತ್ತೀಚಿನ ವಾರಗಳಲ್ಲಿ ಹರಿದಾಡುತ್ತಿರುವುದನ್ನು ಉನ್ನತ ಮೂಲಗಳು ದೃಢಪಡಿಸಿವೆ.

ನೆದರ್ಲೆಂಡ್ಸ್‍ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೆಪಿಎಂಜಿ, ನಾಲ್ಕು ದೊಡ್ಡ ಲೆಕ್ಕಪತ್ರ ಮತ್ತು ಹಣಕಾಸು ಸಲಹಾ ಜಾಲವಾಗಿದ್ದು, ಅರ್ನೆಸ್ಟ್ & ಯಂಗ್, ಪಿಡಬ್ಲ್ಯುಸಿ ಮತ್ತು ಡೆಲೋಯಿಟ್ ಜತೆ ಭಾರತದಲ್ಲಿ ದೊಡ್ಡ ಪ್ರಮಾಣದ ವಹಿವಾಟು ಹೊಂದಿದೆ. ಪತ್ರದಲ್ಲಿ ಹಿರಿಯ ಅಧಿಕಾರಿ ಗಂಭೀರ ಆರೋಪ ಮಾಡಿದ್ದು, "ಭಾರತ ಸರ್ಕಾರದ ಸಲಹಾ ಸಂಸ್ಥೆಯಾದ ಕೆಪಿಎಂಜಿಯ ಹಿರಿಯ ಅಧಿಕಾರಿಯೊಬ್ಬರು ಸರ್ಕಾರಿ ಅಧಿಕಾರಿಗೆ ಆಮಿಷವೊಡ್ಡಿ, ದೊಡ್ಡ ಪ್ರಮಾಣದ ಸಲಹಾ ಯೋಜನೆಯನ್ನು ತಮ್ಮ ಕಂಪನಿಗೆ ನೀಡಿದರೆ, ಕಂಪನಿಯಲ್ಲಿ ಜಂಟಿ ಕಾರ್ಯದರ್ಶಿ ಹುದ್ದೆ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಆದರೆ ಜಂಟಿ ನಿರ್ದೇಶಕರು ಈ ಲಂಚಕ್ಕೆ ಈಡಾಗಲಿಲ್ಲ. ಕೆಪಿಎಂಜಿ ಅಧಿಕಾರಿಗಳು ದೇಶದ ಹಿರಿಯ ಐಎಎಸ್ ಅಧಿಕಾರಿಗಳು, ಐಪಿಎಸ್ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರಿ ಅಧಿಕಾರಿಗಳ ಜತೆ ಉತ್ತಮ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ಜಂಟಿ ನಿರ್ದೇಶಕರು ಈ ಪ್ರಕರಣ ಬಹಿರಂಗಪಡಿಸಿಲ್ಲ ಎಂದು ಆಪಾದಿಸಿದ್ದಾರೆ.

ಕೆಪಿಎಂಜಿ ಅಧಿಕಾರಿಗಳನ್ನಾಗಿ ಹಿರಿಯ ಅಧಿಕಾರಿಗಳ ಸಂಬಂಧಿಗಳನ್ನು ನೇಮಕ ಮಾಡಿಕೊಂಡು ಸರ್ಕಾರಿ ಮಟ್ಟದಲ್ಲಿ ಪ್ರಭಾವ ಬೀರುವ ಪ್ರಯತ್ನ ನಡೆದಿದೆ. ಇಂಥ ಉದ್ಯೋಗಕ್ಕೆ ಒಳ್ಳೆಯ ಸಂಭಾವನೆಯನ್ನೂ ನಿಡಲಾಗುತ್ತಿದೆ ಎಂದು ವಿವರಿಸಿದ್ದಾರೆ. ಕೆಪಿಎಂಜಿಯಲ್ಲಿ ಅಧಿಕಾರದಲ್ಲಿರುವ ಉದ್ಯೋಗಿಗಳ ನಿಕಟ ಸಂಬಂಧಿಗಳಾಗಿರುವ ಒಂಬತ್ತು ಮಂದಿ ಹಿರಿಯ ಅಧಿಕಾರಿಗಳನ್ನು ಪಟ್ಟಿ ಮಾಡಲಾಗಿದೆ. ಫಲಾನುಭವಿಗಳಲ್ಲಿ ಕೇಂದ್ರದ ವಿವಿಧ ಸಚಿವಾಲಯಗಳ ಹಿರಿಯ ಅಧಿಕಾರಿಗಳ ಸಂಬಂಧಿಗಳು ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News