×
Ad

6ನೆ ವೇತನ ಆಯೋಗ ಶೀಘ್ರವೆ ಜಾರಿಯಾಗಲಿ: ಮಂಜೇಗೌಡ

Update: 2018-02-24 18:27 IST

ಬೆಂಗಳೂರು, ಫೆ. 24: ರಾಜ್ಯ ಸರಕಾರಿ ನೌಕರರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ 6ನೆ ವೇತನ ಆಯೋಗದ ಆದೇಶವನ್ನು ಶೀಘ್ರವೆ ಜಾರಿ ಮಾಡಬೇಕೆಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಮಂಜೇಗೌಡ ಸರಕಾರವನ್ನು ಆಗ್ರಹಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 6ನೆ ವೇತನ ಆಯೋಗದ ಶಿಫಾರಸ್ಸಿನಂತೆ ಸರಕಾರಿ ನೌಕರರ ವೇತನವನ್ನು ಶೇ.30ರಷ್ಟು ಹೆಚ್ಚಳ ಮಾಡಿರುವ ರಾಜ್ಯ ಸರಕಾರದ ಕ್ರಮವನ್ನು ನೌಕರರ ಸಂಘ ಸ್ವಾಗತಿಸುತ್ತದೆ. ಆದರೆ, ಈ ಆದೇಶ ಶೀಘ್ರವೆ ಜಾರಿಯಾಗಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ನೌಕರರ ಸಮ್ಮೇಳನ: ರಾಜ್ಯ ಸರಕಾರಿ ನೌಕರರ ರಾಜ್ಯಮಟ್ಟದ ಮಹಾಸಮ್ಮೇಳನ ಮಾ.3 ರಂದು ನಗರದ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಸರಕಾರಿ ನೌಕರರು ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದಲ್ಲಿ ಭಾಗವಹಿಸುವ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ನೌಕರರಿಗೆ ಮಾ.3ರಂದು ರಾಜ್ಯದ ಇತರೆ ಜಿಲ್ಲೆಗಳಿಂದ ಆಗಮಿಸುವ ನೌಕರರಿಗೆ ಮಾ.2 ಹಾಗೂ 3ರಂದು ವಿಶೇಷ ಸಾಂದರ್ಭಿಕ ರಜೆಯನ್ನು ಸರಕಾರ ಮಂಜೂರು ಮಾಡಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಸಂಘದ ಗೌರವಾಧ್ಯಕ್ಷ ಕೆ.ರಾಮು, ಹಿರಿಯ ಉಪಾಧ್ಯಕ್ಷ ಬಸವರಾಜ ಗುರಿಕಾರ, ಖಜಾಂಚಿ ಯೋಗಾನಂದ, ಪ್ರಧಾನ ಕಾರ್ಯದರ್ಶಿ ಮಾಲತೇಶ ಅಣ್ಣಿಗೆರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News