ಬೆಂಗಳೂರು: ಪ್ರತ್ಯೇಕ ಪ್ರಕರಣ; 49 ಮಂದಿ ಆರೋಪಿಗಳ ಬಂಧನ

Update: 2018-02-24 13:24 GMT

ಬೆಂಗಳೂರು, ಫೆ.24: ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ 49 ಜನರನ್ನು ಬಂಧಿಸಿರುವ ನಗರದ ಆಗ್ನೇಯ ವಿಭಾಗದ ಪೊಲೀಸರು, ಆರೋಪಿಗಳಿಂದ 3.37 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ಒಟ್ಟು 158 ಪ್ರಕರಣಗಳು ಪತ್ತೆಯಾಗಿದ್ದು, 3 ಕೆಜಿ 100 ಗ್ರಾಂ ತೂಕದ ಚಿನ್ನಾಭರಣ, ಬೆಳ್ಳಿ ವಸ್ತುಗಳು, 16 ಕಾರು, 5 ಆಟೋರಿಕ್ಷಾ, 103 ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮನೆ ಕಳವು: ಮನೆಗಳ್ಳತನ ಆರೋಪ ಪ್ರಕರಣ ಸಂಬಂಧ ಬೊಮ್ಮನಹಳ್ಳಿ ಠಾಣೆ ಪೊಲೀಸರು ಪ್ರಕಾಶ್, ರಾಮು ಎಂಬವರನ್ನು ಬಂಧಿಸಿ, ಸುಮಾರು 60 ಲಕ್ಷ ರೂ. ಚಿನ್ನಾಭರಣಗಳನ್ನು ವಶಕ್ಕೆ ಪಡೆದು, 22 ಕಳವು ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.

ಬಂಧನ: ಎಟಿಎಂ, ಹಣದ ವಹಿವಾಟು ನಡೆಯುವ ಸ್ಥಳಗಳ ಬಳಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಮೂಲತಃ ಆಂಧ್ರ ಪ್ರದೇಶದ ಚಿತ್ತೂರು ಗ್ರಾಮದ ಒಜಿ ಕುಪ್ಪಂ ಗ್ರಾಮದ ಶ್ರೀನಿವಾಸಲು ಮತ್ತು ಬಾಬು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

32 ಲಕ್ಷ ರೂ.ವಶ: ಪ್ರತಾಪ್‌ಕುಮಾರ್, ಸೋಹನ್‌ದಾಸ್ ಎಂಬವರನ್ನು ಬಂಧಿಸಿ ಸುಮಾರು 32 ಲಕ್ಷ ರೂ. ಬೆಲೆಬಾಳುವ 1 ಕೆಜಿ 100 ಗ್ರಾಂ. ತೂಕದ ಚಿನ್ನದ ಆಭರಣಗಳು ಮತ್ತು 600 ಗ್ರಾಂ. ಬೆಳ್ಳಿ ಪರಿಕರಗಳನ್ನು ಇಲ್ಲಿನ ಕೋರಮಂಗಲ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಬಂಧನದಿಂದ ಒಟ್ಟು 12 ಪ್ರಕರಣಗಳು ಪತ್ತೆಯಾಗಿವೆ. ಮನೆ ಕಳವು ಮಾಡುತ್ತಿದ್ದ ಆರೋಪಿಯ ಬಂಧನದಿಂದ ಸುಮಾರು 3 ಲಕ್ಷ ರೂ. ಬೆಲೆ ಬಾಳುವ 60 ಗ್ರಾಂ. ತೂಕದ ಚಿನ್ನ-ವಜ್ರದ ಆಭರಣಗಳು, ಎರಡು ಮೊಬೈಲ್ ಫೋನ್‌ಗಳುಮತ್ತು 32 ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ.

ಎಲೆಕ್ಟ್ರಾನಿಕ್ ಸಿಟಿ: ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಾಗರಾಜ, ಇಮ್ರಾನ್ ಖಾನ್ ಮತ್ತು ಕಾರ್ತಿಕ್ ಕುಮಾರ್ ಎಂಬುವರನ್ನು ಬಂಧಿಸಿ, 12 ಲಕ್ಷ ರೂ. ಮೌಲ್ಯದ 460 ಗ್ರಾಂ. ತೂಕದ ಚಿನ್ನಾಭರಣಗಳನ್ನು ಎಲೆಕ್ಟ್ರಾನಿಕ್‌ಸಿಟಿ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಾಹನ ಕಳವು: ನಗರದಲ್ಲಿ ನಡೆದಿದ್ದ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಹುಳಿಮಾವು ಪೊಲೀಸರು, ತಮಿಳುನಾಡು ಮೂಲದ ಹುಸೇನ್ (25), ಶರವಣ (22) ಮಣಿಕಂಠನ್, ಅರ್ಜುನ್ , ಸಲ್ಮಾನ್, ಅಂಜನ್ ಎಂಬುವರನ್ನು ಬಂಧಿಸಿ 95 ಲಕ್ಷ ರೂ. ಬೆಲೆ ಬಾಳುವ 15 ಐಶಾರಾಮಿ ಕಾರುಗಳು ಮತ್ತು 18 ಬೈಕ್ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಬಂಧಿತರಿಂದ 3 ಪ್ರಕರಣಗಳು ಪತ್ತೆಯಾಗಿರುತ್ತವೆ ಎಂದು ಪೊಲೀಸರು ಹೇಳಿದ್ದಾರೆ.

ಪರಪ್ಪನ ಅಗ್ರಹಾರ: ವಾಹನ ಕಳ್ಳತನ ನಡೆಸುತ್ತಿದ್ದ ಆರೋಪಿ ಕಾರ್ತಿಕ್ ಎಂಬಾತನನ್ನು ಬಂಧಿಸಿ 15 ಲಕ್ಷ ರೂ.ಮೌಲ್ಯದ 28 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬೇಗೂರು: ಪವನ್ಕುಮಾರ್ ಮತ್ತು ಹರೀಶ್ ಎಂಬುವವರನ್ನು ಬಂಧಿಸಿರುವ ಪೊಲೀಸರು ಸುಮಾರು 6.50 ಲಕ್ಷ ರೂ. ಮೌಲ್ಯದ 5 ಆಟೊ ರಿಕ್ಷಾಗಳು, 15 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಮಡಿವಾಳ: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಕಾರ್ತಿಕ್ ಮತ್ತು ಮಣಿಕಂಠ, ಲೋಕೇಶ ಎಂಬುವರನ್ನು ಬಂಧಿಸಿ 1.90 ಲಕ್ಷ ರೂ. ಬೆಲೆಬಾಳುವ ಒಟ್ಟು 6 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೋರಮಂಗಲ: ಶ್ರೀನಿವಾಸ್ ಎಂಬಾತನನ್ನು ಬಂಧಿಸಿ 2 ಲಕ್ಷ ರೂ. ಬೆಲೆ ಬಾಳುವ 2 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಅದೇ ರೀತಿ, ಎಚ್‌ಎಆರ್ ಲೇಔಟ್ ಠಾಣಾ ಪೊಲೀಸರು ನಾಗೇಂದ್ರ ಎಂಬಾತನನ್ನು ಬಂಧಿಸಿ, ಸುಮಾರು 2.50 ಲಕ್ಷ ರೂ. ಬೆಲೆಬಾಳುವ 6 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಆಡುಗೋಡಿ: ಮಂಜುನಾಥ್ ಎಂಬಾತನನ್ನು ಬಂಧಿಸಿ ಸುಮಾರು 2 ಲಕ್ಷ ರೂ. ಬೆಲೆ ಬಾಳುವ 2 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇಮ್ರಾನ್ ಸೇರಿ ನಾಲ್ವರನ್ನು ಬಂಧಿಸಿ ಸುಮಾರು 5.26 ಲಕ್ಷ ರೂ. ಮೌಲ್ಯದ ಬೈಕ್‌ಗಳನ್ನು ವಶಕ್ಕೆ ಪಡೆಯುವಲ್ಲಿ ಬಂಡೇಪಾಳ್ಯ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News