ಸಿರಿಯದಲ್ಲಿ 30 ದಿನಗಳ ಕದನವಿರಾಮ:ವಿಶ್ವಸಂಸ್ಥೆ ನಿರ್ಣಯ

Update: 2018-02-25 17:39 GMT

ವಿಶ್ವಸಂಸ್ಥೆ,ಫೆ.25: ಅಂತರ್ ಯುದ್ಧದಿಂದ ಜರ್ಜರಿತವಾಗಿರುವ ಸಿರಿಯದಲ್ಲಿ 30 ದಿನಗಳ ಕದನವಿರಾಮವನ್ನು ಜಾರಿಗೊಳಿಸುವಂತೆ ಆಗ್ರಹಿಸುವ ನಿರ್ಣಯವನ್ನು ವಿಶ್ವಸಂಸ್ಥೆಯು ಶನಿವಾರ ಅವಿರೋಧವಾಗಿ ಅಂಗೀಕರಿಸಿದೆ. ಬಂಡುಕೋರರ ಭದ್ರಕೋಟೆಯಾದ ಪೂರ್ವ ಗೌಟಾ ಪ್ರಾಂತದಲ್ಲಿ ಸರಕಾರಿ ಪಡೆಗಳು ಏಳು ದಿನಗಳ ಕಾಲ ನಡೆಸಿದ ಬಾಂಬ್ ದಾಳಿಯಲ್ಲಿ 500ಕ್ಕೂ ಅಧಿಕ ಮಂದಿ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಕದನವಿರಾಮಕ್ಕಾಗಿ ಬಶರ್ ಅಲ್ ಅಸ್ಸಾದ್ ನೇತೃತ್ವದ ಸಿರಿಯ ಆಡಳಿತಕ್ಕೆ ಮನವಿ ಮಾಡಿದೆ.

ಯುದ್ಧಪೀಡಿತ ಸಿರಿಯದಲ್ಲಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ತೆರವುಗೊಳಿಸಲು ಹಾಗೂ ಸಂತ್ರಸ್ತರಿಗೆ ನೆರವಿನ ಸಾಮಾಗ್ರಿಗಳ ಪೂರೈಕೆಗೆ ಅವಕಾಶ ನೀಡುವುದಕ್ಕಾಗಿ ಕದನವಿರಾಮವನ್ನು ಜಾರಿಗೊಳಿಸಬೇಕೆಂದು ಆಗ್ರಹಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ರಶ್ಯದ ಬೆಂಬಲದೊಂದಿಗೆ ಅಂಗೀಕರಿಸಿದೆ. ಈ ಕದನವಿರಾಮವನ್ನು ಯಾವಾಗಿನಿಂದ ಜಾರಿಗೊಳಿಸಬೇಕೆಂದು ನಿರ್ಣಯದಲ್ಲಿ ಹೇಳಿಲ್ಲವಾದರೂ, ವಿಳಂಬ ಮಾಡದೆ ಅದನ್ನು ಕಾರ್ಯಗತಗೊಳಿಸಬೇಕೆಂದು ಸೂಚಿಸಲಾಗಿದೆ.

ಪೂರ್ವ ಗೌಟಾದಲ್ಲಿ ಸಿರಿಯ ಪಡೆಗಳಿಂದ ನಿಲ್ಲದ ದಾಳಿ

ಭದ್ರತಾ ಸಭೆಯಲ್ಲಿ ನಿರ್ಣಯಕ್ಕೆ ಸಂಬಂಧಿಸಿ ಮತದಾನ ನಡೆಯುತ್ತಿದ್ದಂತೆಯೇ, ಪೂರ್ವ ಗೌಟಾದಲ್ಲಿ ಪ್ರಾಂತದ ಪಟ್ಟಣವೊಂದರಲ್ಲಿ ರಶ್ಯದ ವಾಯುಪಡೆಯ ಬೆಂಬಲದೊಂದಿಗೆ ಸಿರಿಯದ ಯುದ್ಧವಿಮಾನಗಳು ಹೊಸತಾಗಿ ದಾಳಿಗಳನ್ನು ಆರಂಭಿಸಿವೆಯೆಂದು ಸಿರಿಯದ ಮಾನವಹಕ್ಕುಗಳ ವೀಕ್ಷಣಾ ಸಮಿತಿ ತಿಳಿಸಿದೆ.

 ಕಳೆದ ರವಿವಾರದಿಂದ ಸಿರಿಯ ಆಡಳಿತ ಪಡೆಗಳು ರಾಜಧಾನಿ ಡಮಾಸ್ಕಸ್‌ನ ಹೊರವಲಯದ ಸಮೀಪದ ಬಂಡುಕೋರರ ನೆಲೆಗಳ ಮೇಲೆ ನಡೆಸಿದ ನಿರಂತರ ಬಾಂಬ್ ದಾಳಿಯಲ್ಲಿ 127 ಮಕ್ಕಳು ಸೇರಿದಂತೆ 519 ಮಂದಿ ಮೃತಪಟ್ಟಿದ್ದರು.

ಶನಿವಾರ ಸಿರಿಯ ಪಡೆಗಳು ನಡೆಸಿದ ವಾಯುದಾಳಿಯಲ್ಲಿ 8 ಮಂದಿ ಮಕ್ಕಳು ಸೇರಿದಂತೆ 41 ನಾಗರಿಕರು ಹತರಾಗಿದ್ದರು. ಆದರೆ ಈ ದಾಳಿಯಲ್ಲಿ ತಾನು ಪಾಲ್ಗೊಂಡಿರುವುದನ್ನು ರಶ್ಯ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News