ಇಸ್ರೇಲ್ ಆಡಳಿತದ ತೆರಿಗೆ ನೀತಿಗೆ ಪ್ರತಿಭಟನೆ: ಯೇಸುಕ್ರಿಸ್ತ ಸಮಾಧಿ ಸ್ಥಳದ ಚರ್ಚ್ ಮುಚ್ಚುಗಡೆ

Update: 2018-02-25 17:57 GMT

ಜೆರುಸಲೇಂ,ಫೆ.25: ಇಸ್ರೇಲ್ ಆಡಳಿತದ ಕಠಿಣವಾದ ತೆರಿಗೆ ನಿಯಮಗಳು ಹಾಗೂ ಪ್ರಸ್ತಾಪಿತ ಆಸ್ತಿ ಕಾನೂನಿಗೆ ಪ್ರತಿಭಟನೆಯಾಗಿ, ಯೇಸುಕ್ರಿಸ್ತನ ಸಮಾಧಿ ಸ್ಥಳದ ಮೇಲೆ ನಿರ್ಮಿಸಲಾಗಿದೆಯೆಂದು ನಂಬಲಾಗಿರುವ ‘ಹೋಲಿ ಸೆಪುಲ್‌ಚೆರ್’ ಚರ್ಚ್‌ನ್ನು ಮುಚ್ಚುಗಡೆಗೊಳಿಸುವ ಅಪರೂಪದ ನಿರ್ಧಾರವನ್ನು ಸ್ಥಳೀಯ ಕ್ರೈಸ್ತ ನಾಯಕರು ರವಿವಾರ ಕೈಗೊಂಡಿದ್ದಾರೆ.

ಜೆರುಸಲೇಂನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆರುಸಲೇಂನ ಕ್ರೈಸ್ತ ನಾಯಕರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಆದರೆ ಎಷ್ಟು ಸಮಯದವರೆಗೆ ಚರ್ಚ್ ಮುಚ್ಚುಗಡೆಗೊಳ್ಳಲಿದೆಯೆಂಬ ಬಗ್ಗೆ ತಕ್ಷಣ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇಸ್ರೇಲ್ ಸರಕಾರದ ಕಠಿಣ ತೆರಿಗೆ ನೀತಿ ಹಾಗೂ ಅದು ಜಾರಿಗೆ ತರಹೊರಟಿರುವ ಆಸ್ತಿ ಕಾನೂನು, ಜೆರುಸಲೇಂನಲ್ಲಿ ಕ್ರೈಸ್ತ ಸಮುದಾಯದ ಉಪಸ್ಥಿತಿಯನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆಯೆಂದು ಅವರು ಹೇಳಿದ್ದಾರೆ.

  ‘ಹೋಲಿ ಸೆಪುಲ್‌ಚೆರ್’ ಚರ್ಚ್‌ನ್ನು ಜಗತ್ತಿನಾದ್ಯಂತದ ಕ್ರೈಸ್ತರು ಪವಿತ್ರ ಸ್ಥಳವೆಂದು ಪರಿಗಣಿಸಿದ್ದಾರೆ. ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ ಬಳಿಕ ಅವರನ್ನು ಸಮಾಧಿ ಮಾಡಲಾದ ಮತ್ತು ಆನಂತರ ಅವರು ಪುನರುತ್ಥಾನಗೊಂಡ ಸ್ಥಳದ ಮೇಲೆ ಈ ಚರ್ಚ್‌ನ್ನು ನಿರ್ಮಿಸಲಾಗಿದೆಯೆಂದು ಅವರು ನಂಬುತ್ತಾರೆ. ಈ ಚರ್ಚ್ ಪ್ರಸಿದ್ಧ ಯಾತ್ರಾಸ್ಥಳವಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಕ್ರೈಸ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ಚರ್ಚ್ ಆಸ್ತಿಯ ಮೇಲೆ ತೆರಿಗೆಯನ್ನು ಜಾರಿಗೊಳಿಸಲು ಇಸ್ರೇಲ್ ಆಡಳಿತವು ನಿರ್ಧರಿಸಿರುವುದು ಜೆರುಸಲೇಂನ ಕ್ರೈಸ್ತ ನಾಯಕರಿಗೆ ತೀವ್ರ ಆಕ್ರೋಶವನ್ನುಂಟು ಮಾಡಿದೆ. ಚರ್ಟ್ ಆಸ್ತಿಯನ್ನು ವಾಣಿಜ್ಯ ಆಸ್ತಿಗಳ ಶ್ರೇಣಿಗೆ ಇಸ್ರೇಲ್ ಆಡಳಿತ ಸೇರ್ಪಡೆಗೊಳಿಸಿದೆ. ಆರಾಧನ ಸ್ಥಳಗಳು ಹಾಗೂ ಧಾರ್ಮಿಕ ಬೋಧನಾ ಕೇಂದ್ರಗಳಿಗೆ ಮಾತ್ರವೇ ತೆರಿಗೆ ವಿನಾಯಿತಿ ಅನ್ವಯಿಸುವುದೆಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News