ಅಸ್ಟ್ರಿಯನ್ ಓಪನ್ ಜಯಿಸಿದ ಕಶ್ಯಪ್

Update: 2018-02-25 19:12 GMT

ವಿಯೆನ್ನಾ, ಫೆ.25: ಹಾಲಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪಿ.ಕಶ್ಯಪ್ ಅವರು ಅಸ್ಟ್ರೀಯನ್ ಓಪನ್ ಬ್ಯಾಡ್ಮಿಂಟನ್‌ನ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

 ಕಶ್ಯಪ್ ಅವರು ಮಲೇಷ್ಯಾದ ಜೂನೆ ವೈ ಚೀಮ್ ವಿರುದ್ಧ 23-21, 21-14, ಅಂತರದಿಂದ ಜಯ ಗಳಿಸುವುದರೊಂದಿಗೆ ಮೂರು ವರ್ಷಗಳ ಬಳಿಕ ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.ಶನಿವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಕಶ್ಯಪ್ ಸುಲಭವಾಗಿ ಎದುರಾಳಿಗೆ ಸೋಲುಣಿಸಿದರು. ಕೇವಲ 37 ನಿಮಿಷಗಳಲ್ಲಿ ಫೈನಲ್ ಪಂದ್ಯ ಕೊನೆಗೊಂಡಿತು. ಮಾಜಿ ರಾಷ್ಟ್ರೀಯ ಚಾಂಪಿಯನ್ ಕಶ್ಯಪ್ ಅವರು ಮೊದಲ ಗೇಮ್‌ನಲ್ಲಿ ಸವಾಲು ಎದುರಿಸಿದರೂ ಎರಡನೇ ಗೇಮ್‌ನಲ್ಲಿ ಸುಲಭವಾಗಿ ಎದುರಾಲಿ ಚೀಮ್‌ಗೆ ಸೋಲುಣಿಸಿದರು.

ಕಶ್ಯಪ್ ಟೂರ್ನಿಯಲ್ಲಿ ಒಂದೇ ಒಂದು ಗೇಮ್‌ನಲ್ಲೂ ಹಿನ್ನಡೆ ಅನುಭವಿಸಿಲ್ಲ ಅಜೇಯವಾಗಿ ಫೈನಲ್ ತಲುಪಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. 126ನೇ ಶ್ರೇಯಾಂಕದ ಚೀಮ್ ಅವರನ್ನು ಕಶ್ಯಪ್ ಇದೇ ಮೊದಲ ಬಾರಿ ಎದುರಿಸಿದ್ದರು.

ಗಾಯದ ಸಮಸ್ಯೆಯಿಂದಾಗಿ ಕೆಲವು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದ ನಂ.6 ಕಶ್ಯಪ್ 2018ರಲ್ಲಿ ಮೊದಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

►ಸಮೀರ್ ವರ್ಮಾ ಫೈನಲ್‌ಗೆ: ಸ್ವಿಸ್ ಓಪನ್ ಟೂರ್ನಮೆಂಟ್‌ನಲ್ಲಿ ಇದೇ ವೇಳೆ ಭಾರತದ ಯುವ ಬ್ಯಾಡ್ಮಿಂಟನ್ ಆಟಗಾರ ಸಮೀರ್ ವರ್ಮಾ ಅವರು ಪ್ರಶಸ್ತಿಯ ಸುತ್ತು ತಲುಪಿದರು. ವರ್ಮಾ ಅವರು ಥಾಯ್ಲೆಂಡ್‌ನ ಕಂಟಫನ್ ವಾಂಗ್‌ಚರಣ್ ವಿರುದ್ಧ 21-14, 11-21, 21-12 ಅಂತರದಲ್ಲಿ ಜಯ ಸಾಧಿಸಿ ಫೈನಲ್ ಪ್ರವೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News