ಕನ್ನಡ ಭಾಷೆ ಆಯ್ಕೆ ಮಾಡಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದೇನೆ !

Update: 2018-02-27 11:42 GMT

ನನ್ನ ಮಗನೀಗ 9ನೇ ತರಗತಿಯ ಕೊನೆಯ ಪರೀಕ್ಷೆ ಬರೆಯುತ್ತಿದ್ದಾನೆ. ಅವನು ಕಲಿಯುತ್ತಿರುವುದು ಸಿ.ಬಿ.ಎಸ್.ಇ. (CBSE) ಸಿಲೆಬಸ್ಸಲ್ಲಿ. 8ನೇ ತರಗತಿಯವರೆಗೆ ಅವನಿಗೆ ಇಂಗ್ಲಿಷ್ ಪ್ರಥಮ ಭಾಷೆಯಾಗಿದ್ದರೆ, ಹಿಂದಿ ದ್ವಿತೀಯ ಭಾಷೆ ಮತ್ತು ಕನ್ನಡ ತೃತೀಯ ಭಾಷೆಯಾಗಿತ್ತು. ತೃತೀಯ ಭಾಷೆಯೆಂದರೆ ಆಟಕ್ಕುಂಟು ಲೆಖ್ಖಕ್ಕಿಲ್ಲ ಎಂಬಂತಹ ಧೋರಣೆ. ಕಾಟಾಚಾರಕ್ಕೆಂಬಂತೆ 10 ಅಂಕಗಳ ಒಂದು ಪ್ರಶ್ನೆ ಪತ್ರಿಕೆ. ಅದರಲ್ಲಿ ಏನು ಉತ್ತರ ಬರೆದರೂ ನಡೆಯುತ್ತದೆ. ಉದಾಹರಣೆಗೆ, ಪ್ರ: ಹುಲಿಯನ್ನು ಕಂಡ ರಾಮನು ಏನೆಂದು ಹೇಳಿ ಓಡಿದನು? ಉತ್ತರ: ಹುಲಿಯನ್ನು ಕಂಡ ರಾಮನು ಅಯ್ಯೋ ಎಂದು ಹೇಳಿ ಓಡಿದನು. ಉತ್ತರದಲ್ಲಿ ಕಲಿಯಬೇಕಿರುವುದು ಕೇವಲ 'ಅಯ್ಯೋ' ಎಂಬ ಶಬ್ದ ಮಾತ್ರ. 

ಆದರೆ, 9ನೇ ತರಗತಿಗೆ ಬರುವಾಗ, ಇಲ್ಲಿರುವುದು ಎರಡು ಭಾಷೆಗಳು ಮಾತ್ರ. ಇಲ್ಲೂ ಕಡ್ಡಾಯವಾಗಿ ಇಂಗ್ಲಿಷ್ ಪ್ರಥಮ ಭಾಷೆಯಾದರೆ, ದ್ವಿತೀಯ ಭಾಷೆಯಾಗಿ ಹಿಂದಿ, ಕನ್ನಡ ಅಥವಾ ಫ್ರೆಂಚ್ ನಡುವೆ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಸಹಜವಾಗಿ ಮಕ್ಕಳು ಆಯ್ದುಕೊಳ್ಳುವುದು ಹಿಂದಿ ಅಥವಾ ಫ್ರೆಂಚ್ ಭಾಷೆಯಲ್ಲೊಂದರನ್ನು. ಏಕೆಂದರೆ, ಇದರಲ್ಲಿ ಅಂಕ ಹೊಡೆಯುವುದು ಸುಲಭ. ಹಿಂದಿ ಹೇಗೂ ಎಂಟನೆಯ ತರಗತಿಯ ವರೆಗೆ ದ್ವಿತೀಯ ಭಾಷೆಯಾಗಿಯೇ ಕಲಿತಿರುತ್ತಾರೆ, ಫ್ರೆಂಚಾದರೋ ಕಲಿಯಬೇಕಾಗಿರುವುದು ಕೇವಲ ಬುನಾದಿ (Basics) ಮಾತ್ರ. ಆದರೆ, ಕನ್ನಡದ ಕಟ್ಟಾ ಭಾಷಾಭಿಮಾನಿಯಾದ ನಾನು, ನನ್ನ ಮಗನಿಗೆ ದ್ವಿತೀಯ ಭಾಷೆಯಾಗಿ ಕನ್ನಡ ಭಾಷೆಯನ್ನು ಆಯ್ದು ಕೊಳ್ಳುವಂತೆ ಸೂಚಿಸಿದ್ದೆ. ಅದಕ್ಕಾಗಿ ನಾನೀಗ ಪಶ್ಚಾತ್ತಾಪ ಪಡುತ್ತಿದ್ದೇನೆ.

8ನೇ ತರಗತಿಯ ಬೇಸಿಗೆ ರಜೆಯಲ್ಲಿ ನಾನು ಅವನಿಗೆ ಕನ್ನಡ ಪಾಠ ಆರಂಭಿಸಬೇಕೆಂದು ಯೋಚಿಸಿದ್ದೆ. ಆದರೆ ಕನ್ನಡ ಪಠ್ಯ ಪುಸ್ತಕ ಬಂದದ್ದೇ 9ನೇ ತರಗತಿ ಆರಂಭವಾಗಿ ವಾರಗಳ ನಂತರ. ಪಠ್ಯ ಪುಸ್ತಕ ಬಂದಾಗ ಅದನ್ನು ನೋಡಿದ ನಾನು ಬೆಚ್ಚಿ ಬಿದ್ದಿದ್ದೆ. ನಾನೆಸಿದ್ದು, ಕನ್ನಡವೆಂದರೆ ಸರಳ ಕನ್ನಡವಿರಬಹುದೆಂದು. ಆದರೆ ಇದರಲ್ಲಿದ್ದದ್ದು, ಊಹಿಸಲೂ ಸಾಧ್ಯವಾಗದಂತಹ ಕ್ಲಿಷ್ಟಕರವಾದ ಗದ್ಯ, ಹಳೆಗನ್ನಡದ ಕೆಲವು ಪದ್ಯಗಳು ಮತ್ತು ಪಾಠಗಳು. 8ನೇ ತರಗತಿಯವರೆಗೆ ಕನ್ನಡವನ್ನು ತೃತೀಯ ಭಾಷೆಯಾಗಿ ಕಲಿತ ವಿದ್ಯಾರ್ಥಿ 9ನೇ ತರಗತಿಯಲ್ಲಿದ್ದರೂ ಅವನ ಕನ್ನಡ ಜ್ಞಾನವಿರುವುದು ಕೇವಲ 3ನೇ ತರಗತಿಯಷ್ಟು ಅಥವಾ ಅದಕ್ಕಿಂತಲೂ ಕಡಿಮೆ. ಇಂತಹ ಮಕ್ಕಳಿಗೆ 9ನೇ ತರಗತಿಯ ಕನ್ನಡ ಮಾಧ್ಯಮದ ಪಠ್ಯ ಪುಸ್ತಕದ, ಹಳೆಗನ್ನಡ ಪದ್ಯ ಮತ್ತು ಗದ್ಯಗಳನ್ನು ಒಮ್ಮಿಂದೊಮ್ಮೆಲೇ ತುರುಕುವುದಾದರೂ ಹೇಗೆ ಮತ್ತು ತುರುಕುವುದಾದರೂ ಏಕೆ? ತರಗತಿಯಲ್ಲಿರುವ 40 ವಿದ್ಯಾರ್ಥಿಗಳಲ್ಲಿ ಈ ವರ್ಷ ಕನ್ನಡ ಆಯ್ದುಕೊಂಡವರು ಕೇವಲ 6 ವಿದ್ಯಾರ್ಥಿಗಳು. ಮುಂದಿನ ವರ್ಷ ಈ 6 ಮಕ್ಕಳು ಸಿಗುವುದೂ ಕಷ್ಟ.

ಹೀಗೆ ಮುಂದಾಲೋಚನೆ ಇಲ್ಲದೆ ಪಠ್ಯ ಪುಸ್ತಕ ರಚಿಸುವ ನಮ್ಮ ಭಾಷಾ ಗಣ್ಯರು, ಶಿಕ್ಷಣ ತಜ್ಞರು ಇದೇ ರೀತಿ ಮುಂದುವರಿದರೆ ಕನ್ನಡ ಭಾಷೆಯ ಅಭಿವೃದ್ಧಿಯ ಮಾತು ಬಿಡಿ, ಭಾಷೆ ಉಳಿಸಿ ಕೊಳ್ಳುವುದೂ ಕನಸಿನ ಮಾತೇ. ಅಳಿವಿನಂಚಿನಲ್ಲಿರುವ ಕನ್ನಡವನ್ನು ಉಳಿಸಬೇಕಾದರೆ ಇರುವ ದಾರಿ ಒಂದೇ. ಅದು, ಹೆಚ್ಚೆಚ್ಚು ಮಕ್ಕಳು ಕನ್ನಡ ಆಯ್ಕೆ ಮಾಡುವಂತೆ ಪ್ರೋತ್ಸಾಹಿಸುವುದು. ಅದಕ್ಕಾಗಿ, ಸರಳವಾದ ಪಠ್ಯ ಪುಸ್ತಕ ಮತ್ತು ಸರಳವಾದ ಪ್ರಶ್ನೆ ಪತ್ರಿಕೆಗಳನ್ನು ರಚಿಸುವುದು. ಅದನ್ನು ಬಿಟ್ಟು ಮಕ್ಕಳು ಕನಸಿನಲ್ಲೂ ಬೆಚ್ಚಿಬೀಳುವಂತಹ ಪಠ್ಯವನ್ನು ರಚಿಸುವುದು ಯಾರ ಉದ್ಧಾರಕ್ಕಾಗಿ ಮತ್ತು ಯಾವ ಪುರುಷಾರ್ಥಕ್ಕಾಗಿ? ನಮ್ಮ ಶಿಕ್ಷಣ ಇಲಾಖೆ ಭಾಷೆಯ ಹಿತ ದೃಷ್ಠಿಯಿಂದ ಇನ್ನಾದರೂ ಎಚ್ಚರವಾಗುವುದು ಒಳಿತು. ಇಲ್ಲವಾದರೆ, ಕನ್ನಡವನ್ನು ಸಂಪೂರ್ಣ ಮರೆತು ಬಿಡುವುದು ಒಳ್ಳೆಯದು. ಮಕ್ಕಳಿಗಾದರೋ ಕನ್ನಡದ ಹೊರತಾಗಿಯೂ ಬೇರೆ ಆಯ್ಕೆಗಳಿವೆ.

        (ಅಬ್ದುಲ್ ರಹೀಮ್ ಟೀಕೆ)

Writer - ಅಬ್ದುಲ್ ರಹೀಮ್ ಟೀಕೆ

contributor

Editor - ಅಬ್ದುಲ್ ರಹೀಮ್ ಟೀಕೆ

contributor

Similar News