ಶ್ರೀದೇವಿ ಸಾವು ಪ್ರಕರಣದ ತನಿಖೆ ಅಂತ್ಯ : ದುಬೈ ಪೊಲೀಸ್

Update: 2018-02-27 12:55 GMT

ಮುಂಬೈ,ಫೆ.27: ಹಿರಿಯ ನಟಿ ಶ್ರೀದೇವಿ ಅವರು ದುಬೈಯ ಹೋಟೆಲ್ ಒಂದರಲ್ಲಿ ಸಾವಿಗೀಡಾಗಿರುವುದಕ್ಕೆ ಸಂಬಂಧಿಸಿದಂತೆ ಎದ್ದಿರುವ ಊಹಾಪೋಹಗಳಿಗೆ ತೆರೆ ಬಿದ್ದಿದೆ.  ಆಕೆಯ ಮೃತದೇಹವನ್ನು  ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಆಕೆಯ ಸಾವು ಪ್ರಕರಣದ ತನಿಖೆ ಅಂತ್ಯಗೊಂಡಿದೆ ಎಂದು ದುಬೈ ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀದೇವಿಯ ಮೃತದೇಹವನ್ನು ಸಂರಕ್ಷಿಸುವ ಪ್ರಕ್ರಿಯೆ (ಎಂಬಾಲ್ಮ್) ಪೂರ್ತಿಗೊಂಡಿದ್ದು  ಈಗ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಗುತ್ತಿದೆ ಎಂಬ ಮಾಹಿತಿಯಿದೆ. ಅಲ್ಲಿಂದ ಮುಂಬೈಗೆ ಕೊಂಡೊಯ್ದು ಅಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು.

ಆರಂಭದಲ್ಲಿ ಶ್ರೀದೇವಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ಹೇಳಲಾಗಿತ್ತಾದರೂ ಸೋಮವಾರ ಹೊರಬಿದ್ದ ಫೊರೆನ್ಸಿಕ್ ವರದಿ ಆಕೆ ಹೊಟೇಲ್ ಶೌಚಾಲಯದಲ್ಲಿ ಪ್ರಜ್ಞಾಹೀನರಾಗಿ ಆಕಸ್ಮಿಕವಾಗಿ ಸ್ನಾನದ ತೊಟ್ಟಿಯಲ್ಲಿ (ಬಾತ್ ಟಬ್)   ಬಿದ್ದು ಸಾವನ್ನಪ್ಪಿದ್ದರು ಎಂದು ಸ್ಪಷ್ಟವಾಗಿತ್ತು .

ಶ್ರೀದೇವಿ ಸಾವಿಗೆ ಸಂಬಂಧಿಸಿದಂತೆ ಎಲ್ಲಾ ತನಿಖೆಗಳನ್ನೂ ಪೂರ್ಣಗೊಳಿಸಿ ಕುಟುಂಬಕ್ಕೆ ಆಕೆಯ ಮೃತದೇಹವನ್ನು ಕೊಂಡೊಯ್ಯಲು ನಿರಾಕ್ಷೇಪಣಾ ಪತ್ರ ನೀಡಲಾಗಿದೆ.

ಶ್ರೀದೇವಿಯ ಪತಿ ಬೋನಿ ಕಪೂರ್ ಜತೆ ಅವರ ಮೊದಲ ವಿವಾಹದಿಂದ ಜನಿಸಿದ ಹಿರಿಯ ಪುತ್ರ ಅರ್ಜುನ್ ಕಪೂರ್ ಕೂಡ ದುಬೈಯಲ್ಲಿದ್ದಾರೆ. ಕಪೂರ್ ಅವರ ಸೋದರಳಿಯ ಸೌರಭ್ ಮಲ್ಹೋತ್ರ ಕೂಡ ಅಲ್ಲಿಯೇ ಇದ್ದಾರೆ.

ತರುವಾಯ ಶ್ರೀದೇವಿಯ ಪುತ್ರಿಯರಾದ ಜಾಹ್ನವಿ ಹಾಗೂ ಖುಷಿ ಇಬ್ಬರೂ ಮುಂಬೈಯಲ್ಲಿ ಬೋನಿ ಕಪೂರ್ ಅವರ ಸೋದರ ಅನಿಲ್ ಕಪೂರ್ ಅವರ ನಿವಾಸದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News