ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ : ಠಾಕ್ರೆ

Update: 2018-02-28 03:30 GMT

ಅಹ್ಮದ್‌ನಗರ, ಫೆ. 28: ಮುಂದಿನ ವರ್ಷ ನಡೆಯುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳದೇ ಏಕಾಂಗಿಯಾಗಿ ಹೋರಾಡಲು ಶಿವಸೇನೆ ನಿರ್ಧರಿಸಿದೆ. ಶಿವಸೇನೆ ಅಭ್ಯರ್ಥಿ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಭವಿಷ್ಯ ನುಡಿದಿದ್ದಾರೆ.

ಅಹ್ಮದ್‌ನಗರದ ಪರ್ನೇರ್‌ನಲ್ಲಿ ರೈತ ಸಂವಾದದಲ್ಲಿ ಮಾತನಾಡಿದ ಅವರು, ಜನಸಾಮಾನ್ಯರ ಸಮಸ್ಯೆಗಳನ್ನು ನಿವಾರಿಸುವಲ್ಲಿ ವಿಫಲವಾದ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

2019ರಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಸಂಬಂಧ ಈಗಾಗಲೇ ಶಿವಸೇನೆ ನಿರ್ಣಯ ಆಂಗೀಕರಿಸಿದೆ. ಈ ಮಧ್ಯೆ ಶಿವಸೇನೆ ರಾಜ್ಯ ಸರ್ಕಾರದ ಅಂಗಪಕ್ಷವಾಗಿ ಮತ್ತು ವಿರೋಧ ಪಕ್ಷವಾಗಿ ಎರಡೂ ಪಾತ್ರಗಳನ್ನು ನಿರ್ವಹಿಸುತ್ತಿದೆ. ಕಳೆದ ಮೂರು ವರ್ಷಗಳಿಂದಲೂ ಉಭಯ ಪಕ್ಷಗಳ ವಿರಸ ಬಹಿರಂಗವಾಗಿ ವ್ಯಕ್ತವಾಗುತ್ತಿದೆ.
"ಕೇಂದ್ರ ಸರ್ಕಾರ ಜನರ ಸಮಸ್ಯೆಗಳನ್ನು ಬಗೆಹರಿಸಿಲ್ಲ. ದೇಶದ ರೈತರು ಸಂಕಷ್ಟದಲ್ಲಿದ್ದಾರೆ. ರೈತರು ಕಠಿಣ ಪರಿಶ್ರಮದಿಂದ ಕೂಡಿಟ್ಟ ಹಣವನ್ನು ಠೇವಣಿ ಮಾಡಿರುವ ಜಿಲ್ಲಾ ಸಹಕಾರ ಬ್ಯಾಂಕ್‌ಗಳನ್ನು ಮುಚ್ಚಲು ಸರ್ಕಾರ ಹುನ್ನಾರ ನಡೆಸಿದೆ. ಇಂದು ಅವರು ಬ್ಯಾಂಕುಗಳನ್ನು ಲೂಟಿ ಮಾಡಿ ಪಲಾಯನ ಮಾಡುತ್ತಿದ್ದಾರೆ. ಆದರೆ ಸರ್ಕಾರ ಏನೂ ಮಾಡುತ್ತಿಲ್ಲ. ಈ ಕಾರಣದಿಂದ ಮುಂದಿನ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಕೇಸರಿ ಧ್ವಜ ಮಹಾರಾಷ್ಟ್ರದ ಎಲ್ಲೆಡೆ ಅರಳುವಂತೆ ಮಾಡುತ್ತೇವೆ. ಶಿವಸೇನೆ ಅಭ್ಯರ್ಥಿ  ಮುಂದಿನ ಸಿಎಂ ಆಗುತ್ತಾರೆ" ಎಂದು ಠಾಕ್ರೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News