ಚಂದಿರನ ಅಂಗಳದಲ್ಲೂ ಮೊಬೈಲ್ ಫೋನ್ ನೆಟ್‍ವರ್ಕ್!

Update: 2018-02-28 09:54 GMT

ಬಾರ್ಸಿಲೋನ, ಫೆ.28: ಮುಂದಿನ ವರ್ಷ ಚಂದ್ರಗ್ರಹವು ತನ್ನ ಪ್ರಥಮ ಮೊಬೈಲ್ ಫೋನ್ ನೆಟ್‍ವರ್ಕ್ ಪಡೆಯಲಿದೆ. ಇದರಿಂದಾಗಿ  ಚಂದ್ರನ ಅಂಗಣದಿಂದ ಭೂಮಿಗೆ ಅತ್ಯಂತ ಸ್ಪಷ್ಟ ಚಿತ್ರಣಗಳನ್ನು ಕಳುಹಿಸಬಹುದಾಗಿದ್ದು, ಮೂನ್ ಮಿಷನ್ ಅಂಗವಾಗಿ ಪ್ರಪ್ರಥಮವಾಗಿ ಖಾಸಗಿ ಹಣಕಾಸಿನ ಸಹಾಯದ ಯೋಜನೆ ಇದಾಗಿದೆ.

ವೊಡಾಫೋನ್ ಜರ್ಮನಿ, ನೆಟ್‍ವರ್ಕ್ ಉಪಕರಣ ತಯಾರಿ ಸಂಸ್ಥೆ ನೋಕಿಯಾ ಮತ್ತು ಕಾರು ತಯಾರಿಕಾ ಸಂಸ್ಥೆ ಆಡಿ ಇವುಗಳು ಈ ಯೋಜನೆಗೆ ಜಂಟಿಯಾಗಿ ಹಣಕಾಸು ಸಹಾಯ ಒದಗಿಸಲಿವೆ. ನಾಸಾ  ಗಗನಯಾತ್ರಿಗಳು ಪ್ರಪ್ರಥಮವಾಗಿ ಚಂದ್ರನ ಮೇಲೆ ಕಾಲಿಟ್ಟ 50 ವರ್ಷಗಳ ನಂತರ ಈ ಬೆಳವಣಿಗೆ ನಡೆದಿದೆ.

ಸ್ಪೇಸ್ ಗ್ರೇಡ್ ನೆಟ್‍ವರ್ಕ್ ಅಭಿವೃದ್ಧಿಗಾಗಿ ತಾನು ನೋಕಿಯಾ ಸಂಸ್ಥೆಯನ್ನು ತನ್ನ ತಂತ್ರಜ್ಞಾನ ಪಾಲುದಾರನನ್ನಾಗಿ ನೇಮಿಸಿರುವುದಾಗಿ ವೊಡಾಫೋನ್ ತಿಳಿಸಿದ್ದು, ಒಂದು ಚೀಲ ಸಕ್ಕರೆಗಿಂತ ಕಡಿಮೆ ತೂಕದ ಸಣ್ಣ ಹಾರ್ಡ್ ವೇರ್ ತುಂಡೊಂದು ಇದಕ್ಕೆ ಅಗತ್ಯವಿದೆ ಎಂದಿದೆ.

ಈ ಕಂಪೆನಿಗಳು ಬರ್ಲಿನ್ ಮೂಲದ ಪಿಟಿಸೈಂಟಿಸ್ಟ್ಸ್ ಜತೆ  ಈ ಯೋಜನೆಯಂಗವಾಗಿ ಕೆಲಸ ಮಾಡುತ್ತಿದ್ದು, ಈ  ಹಾರ್ಡ್ ವೇರ್ 2019ರಲ್ಲಿ ಕೇಪ್ ಕೆನವೆರೆಲ್ ನಿಂದ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ಮೂಲಕ  ಚಂದ್ರಗ್ರಹ ತಲುಪಲಿದೆ ಎಂದು ವೊಡಾಫೋನ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಹ್ಯಾನ್ನೆಸ್ ಅಮೆಟ್ರೀಸ್ಟರ್ ತಿಳಿಸಿದ್ದಾರೆ.

5ಜಿ ನೆಟ್‍ವರ್ಕ್ ಇನ್ನೂ ಪ್ರಾಯೋಗಿಕ ಹಂತದಲ್ಲಿರುವುದರಿಂದ ಚಂದ್ರನ ಅಂಗಣದಲ್ಲಿ 4 ಜಿ ನೆಟ್‍ವರ್ಕ್ ಅಭಿವೃದ್ಧಿ ಪಡಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News