ಎಫ್‌ಆರ್‌ಡಿಐ ಜಾರಿಯಿಂದ ಬ್ಯಾಂಕ್‌ಗಳಿಗೆ ಅಭದ್ರತೆ: ದಿನೇಶ್ ಗುಂಡೂರಾವ್
ಬೆಂಗಳೂರು, ಫೆ.28: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರವು ಎಫ್‌ಆರ್‌ಡಿಐ ವಿಧೇಯಕವನ್ನು ಜಾರಿಗೆ ತರಲು ಮುಂದಾಗಿದೆ. ಬ್ಯಾಂಕ್‌ಗಳಿಗೆ ಅಭದ್ರತೆ ಉಂಟಾದಾಗ ಆ ಬ್ಯಾಂಕ್ ಅನ್ನು ಹೇಗೆ ರಕ್ಷಿಸಬೇಕು ಎನ್ನುವುದೇ ಈ ಕಾನೂನಿನ ಉದ್ದೇಶ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಹೇಳಿದರು.
ಬುಧವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬ್ಯಾಂಕ್‌ಗಳಿಗೆ ಈಗಾಗಲೆ 10 ಲಕ್ಷ ಕೋಟಿ ರೂ.ನಷ್ಟವಾಗಿದೆ. ಈ ಕಾಯ್ದೆ ಜಾರಿಯಿಂದ ಈ 10 ಲಕ್ಷ ಕೋಟಿ ರೂ.ಬ್ಯಾಂಕ್ ಗೆ ವಾಪಸ್ ಬರುವುದಿಲ್ಲ ಎಂದರು.
ದೇಶದ ಆರ್ಥಿಕ ವ್ಯವಸ್ಥೆ ಮೇಲೆ ಮೋದಿಸರಕಾರ ಕೊಡಲಿ ಪೆಟ್ಟು ನೀಡುತ್ತಲೆ ಬಂದಿದೆ. ಈ ಕಾಯ್ದೆಯಿಂದ ಮತ್ತಷ್ಟು ನಷ್ಟ ಉಂಟಾಗಲಿದೆ. ಈ ವಿಧೇಯಕ ಜಾರಿಯಾದರೆ ಬ್ಯಾಂಕ್‌ನಲ್ಲಿಟ್ಟ ಸಾರ್ವಜನಿಕರ ಹಣಕ್ಕೆ ರಕ್ಷಣೆ ಇಲ್ಲದಂತಾಗುತ್ತದೆ. ಕಂಪೆನಿಗಳು ದಿವಾಳಿಯಾಗುತ್ತಿವೆ, ಬ್ಯಾಂಕ್ ಸಾಲ ಮರು ಪಾವತಿ ಆಗುತ್ತಿಲ್ಲ. ಪರಿಣಾಮ ಬ್ಯಾಂಕುಗಳು ದಿವಾಳಿಯಾಗುತ್ತವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ನರೇಂದ್ರಮೋದಿ ವಿಫಲವಾಗಿದ್ದಾರೆ. ದೇಶದ ಹಣ ಲೂಟಿ ಮಾಡುವವರಿಗೆ ಮೋದಿ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ. ಈ ಉದ್ದೇಶಿತ ಕಾಯ್ದೆಗಾಗಿ ಪ್ರತ್ಯೇಕ ಮಂಡಳಿ ಸ್ಥಾಪಿಸಲು ಕೇಂದ್ರ ಸರಕಾರ ಮುಂದಾಗಿದೆ. ರಿಸರ್ವ್ ಬ್ಯಾಂಕ್‌ನ ಒಬ್ಬ ಸದಸ್ಯರು ಈ ಮಂಡಳಿಯಲ್ಲಿರುತ್ತಾರೆ ಎಂದು ಅವರು ತಿಳಿಸಿದರು.
ದೇಶಕ್ಕೆ ಈ ಕಾಯ್ದೆಯು ದೊಡ್ಡ ಗಂಡಾಂತರ ಆಗಲಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ, ರಾಜ್ಯಕ್ಕೆ ಬಂದು ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಮಾತನಾಡುವ ನರೇಂದ್ರಮೋದಿಯನ್ನು ನೋಡಿದರೆ, ಅವರಿಗೆ ಪ್ರಧಾನಿಯಾಗುವ ಯೋಗ್ಯತೆಯಿಲ್ಲ ಎಂದು ದಿನೇಶ್‌ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಮೋದಿ ಮಾತನಾಡುವುದಿಲ್ಲ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಅನ್ನು ಉದ್ಯಮಿ ನೀರವ್ ಮೋದಿ ಲೂಟಿ ಮಾಡಿದ್ದನ್ನು ನರೇಂದ್ರಮೋದಿ ಹೇಳುವುದಿಲ್ಲ. ಆದರೆ, ಜೈಲಿಗೆ ಹೋಗಿಬಂದ, ಚೆಕ್‌ರೂಪದಲ್ಲಿ ಲಂಚ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರ ಹುಟ್ಟುಹಬ್ಬ ಆಚರಿಸಲು ರಾಜ್ಯಕ್ಕೆ ಬಂದಿದ್ದರು ಎಂದು ಅವರು ವ್ಯಂಗ್ಯವಾಡಿದರು.
ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ಕಾಂಗ್ರೆಸ್ ಶಾಸಕ ಎನ್.ಎ.ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್, ನಗರದ ಉದ್ಯಮಿಯೊಬ್ಬರ ಮೇಲೆ ನಡೆಸಿರುವ ಹಲ್ಲೆ ಪ್ರಕರಣಕ್ಕೂ ಶಾಸಕ ಹಾರಿಸ್‌ಗೆ ಟಿಕೆಟ್ ನೀಡುವುದು ಅಥವಾ ಕೈ ಬಿಡುವ ವಿಚಾರಕ್ಕೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದರು.
ನಮೋ ಎಂದರೆ ನಮಗೆ ಮೋಸ
ನಮೋ ಎಂದರೆ ನರೇಂದ್ರಮೋದಿ ಅಲ್ಲ, ನಮಗೆ ಮೋಸ ಎಂದರ್ಥ. ರಾಜ್ಯಕ್ಕೆ ಬಂದು ಅಷ್ಟು ದುಡ್ಡು ಕೊಟ್ಟಿದ್ದೇವೆ ಅಂತಾ ಮೋದಿ ಮತ್ತು ಅಮಿತ್ ಶಾ ಹೇಳುತ್ತಾರೆ. ಆದರೆ, ಆ ಹಣ ಇನ್ನೂ ರಾಜ್ಯಕ್ಕೆ ಬಂದೇ ಇಲ್ಲ. ಮೋದಿ ಮತ್ತು ಅಮಿತ್ ಶಾ ರಾಜ್ಯಕ್ಕೆ ಬಂದು ಪದೇ ಪದೇ ಸುಳ್ಳು ಹೇಳುತ್ತಿದ್ದಾರೆ. ರಾಜ್ಯದ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ.
-ದಿನೇಶ್‌ಗುಂಡೂರಾವ್ ಕೆಪಿಸಿಸಿ ಕಾರ್ಯಾಧ್ಯಕ್ಷ