×
Ad

ಪೆಟ್ರೋಲ್ ಸುರಿದು ಆಟೊ ಚಾಲಕನ ಕೊಲೆ ಪ್ರಕರಣ: ದೀನದಯಾಳ್‌ಗೆ ಜೀವಾವಧಿ ಶಿಕ್ಷೆ

Update: 2018-02-28 20:41 IST

ಬೆಂಗಳೂರು, ಫೆ.28: ಹಣದ ವಿಚಾರಕ್ಕಾಗಿ ಆಟೊ ಚಾಲಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದಿದ್ದ ಪ್ರಕರಣ ಸಂಬಂಧ ಆರೋಪಿ ದೀನದಯಾಳ್‌ಗೆ ಜೀವಾವಧಿ ಶಿಕ್ಷೆ ಹಾಗೂ 10ಸಾವಿರ ದಂಡ ವಿಧಿಸಿ ಸಿಸಿಎಚ್ ನ್ಯಾಯಾಲಯ ತೀರ್ಪು ನೀಡಿದೆ.

ನಗರದ ರಾಮಚಂದ್ರಪುರದ ಆರೋಪಿ ದೀನದಯಾಳ್(46), 2012ರಲ್ಲಿ ಎಜಿಎಸ್ ಲೇಔಟ್‌ನ19ನೆ ಮುಖ್ಯರಸ್ತೆ ನಿವಾಸಿ ಕೇಶವ(34) ಎಂಬ ಆಟೋ ಚಾಲಕನನ್ನು ಕೊಲೆಗೈದಿದ್ದ ಆರೋಪ ಪ್ರಕರಣ ಸಂಬಂಧ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ಈ ತೀರ್ಪು ನೀಡಿದ್ದಾರೆ.

ಪ್ರಕರಣದ ವಿವರ: ಕೇಶವ ತನ್ನ ಆರ್ಥಿಕ ಸಂಕಷ್ಟಕ್ಕಾಗಿ ದೀನದಯಾಳ್ ಬಳಿ ಹಣ ಕೇಳುತ್ತಿದ್ದನು. ಇದರಿಂದ ಬೇಸತ್ತಿದ್ದ ದೀನದಯಾಳ್ ಆತನೊಂದಿಗೆ ಜಗಳ ವಾಡಿದ್ದನು. 2012ರ ಆ.21ರ ಸಂಜೆ 4 ಗಂಟೆ ಸುಮಾರಿಗೆ ಪೆಟ್ರೋಲ್ ಖರೀದಿ ಮಾಡಿ ಒಂದು ಪ್ಲಾಸ್ಟಿಕ್ ಬಾಟಲ್‌ನಲ್ಲಿ ತುಂಬಿಸಿಕೊಂಡು ಈತನಿದ್ದ ಸ್ಥಳಕ್ಕೆ ದೀನದಯಾಳ್ ತೆರಳಿದ್ದನು ಎನ್ನಲಾಗಿದೆ.

ಬಳಿಕ ಎಜಿಎಸ್ ಲೇಔಟ್‌ನ ಕಾಂಡಿಮೆಂಟ್ಸ್ ಮುಂಭಾಗಕ್ಕೆ ಕರೆದುಕೊಂಡು ಹೋಗಿ ಕೇಶವನನ್ನು ಕೆಳಕ್ಕೆ ಬೀಳಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದನು. ಇದರಿಂದ ಕೇಶವನಿಗೆ ಸುಟ್ಟುಗಾಯಗಳಾಗಿ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿ ಪೊಲೀಸರು ತನಿಖೆ ಕೈಗೊಂಡಿದ್ದರು.

ಕೇಶವನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆ.23ರವರೆಗೆ ಚಿಕಿತ್ಸೆ ಕೊಡಿಸಿ ನಂತರ ಶಂಕರಪುರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಆ.29ರಂದು ಗಿರಿನಗರದಲ್ಲಿರುವ ಮತ್ತೊಂದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು.

ಆದರೆ, ಕೇಶವ ಚಿಕಿತ್ಸೆ ಫಲಕಾರಿಯಾಗದೆ, ಸೆ.18ರಂದು ಮೃತಪಟ್ಟಿದ್ದನು. ಈ ಬಗ್ಗೆ ಕೇಶವ ಪತ್ನಿ ವೀಣಾ ಆರೋಪಿ ದೀನದಯಾಳ್ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ನ್ಯಾಯಾಲಯದಿಂದ ಆದೇಶ ಪಡೆದುಕೊಂಡು ಎಸ್ಸೈ ಎಸ್.ಕೆ.ಮಾಲತೇಶ್ ತನಿಖೆ ಕೈಗೊಂಡಿದ್ದರು. ಸೆ.27ರಂದು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ತಲೆಮರೆಸಿಕೊಂಡಿದ್ದ ಈ ಪ್ರಕರಣದ ಆರೋಪಿ ದೀನದಯಾಳ್‌ನನ್ನು ತನಿಖಾ ತಂಡ ಪತ್ತೆ ಮಾಡಿ ಕರೆ ತಂದಿದ್ದರು ಎಂದು ತಿಳಿದುಬಂದಿದೆ.

ವಿಚಾರಣೆ ವೇಳೆ ಆರೋಪಿಯು ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದನು. ಈ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿದಾರರನ್ನು ವಿಚಾರಣೆ ಮಾಡಿ ಹೇಳಿಕೆಗಳನ್ನು ಪಡೆದುಕೊಂಡು ನ್ಯಾಯಾಲಯಕ್ಕೆ ಪೊಲೀಸರು ದೋಷಾರೋಪಣ ಪಟ್ಟಿಸಲ್ಲಿಸಿದ್ದರು.

ಈ ಪ್ರಕರಣವು ಸಿಸಿಎಚ್ 70ನೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾದ ಮೇರೆಗೆ ಆರೋಪಿಗೆ ನ್ಯಾಯಾಧೀಶರಾದ ಟಿ.ಪಿ. ರಾಮಲಿಂಗೇಗೌಡ ಜೀವಾವಧಿ ಶಿಕ್ಷೆ ಮತ್ತು 10,000 ರೂ. ದಂಡವನ್ನು ವಿಧಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News