ಮಾನವ ಹಕ್ಕು ಉಲ್ಲಂಘನೆಯಿಂದ ದೇಶ ನಾಶ: ಎಸ್. ಚೌಹಾಣ್
ಬೆಂಗಳೂರು, ಫೆ.28: ಮಾನವ ಹಕ್ಕುಗಳ ಉಲ್ಲಂಘನೆ ಇಡೀ ದೇಶವನ್ನೇ ನಾಶ ಮಾಡುತ್ತಿರುವ ಸಮಸ್ಯೆಗಳಲ್ಲಿ ಅತ್ಯಂತ ಪ್ರಮುಖ ಸಮಸ್ಯೆಯಾಗಿದೆ ಎಂದು ಹೈಕೋರ್ಟ್‌ನ ನ್ಯಾಯಮೂರ್ತಿ ರಾಘವೇಂದ್ರ ಎಸ್.ಚೌಹಾಣ್ ಅಭಿಪ್ರಾಯಿಸಿದ್ದಾರೆ.
ಶೇಷಾದ್ರಿಪುರಂ ಕಾಲೇಜಿನಲ್ಲಿ ಸಮಕಾಲೀನ ಜಗತ್ತಿನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ವಿಷಯ ಕುರಿತು ಮಾತನಾಡಿದ ಅವರು, ವಿವಿಧ ದೇಶಗಳಲ್ಲಿ ಮಾನವ ಹಕ್ಕುಗಳಿಗೆ ಸರಿಯಾದ ಮಾನ್ಯತೆಯಿಲ್ಲದಾಗಿದೆ. ಕಾನೂನಿನ ಅನುಪಸ್ಥಿತಿಯೇ ಇದಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಯೊಬ್ಬ ನಾಗರಿಕನೂ ಮೂಲಭೂತ ಹಕ್ಕುಗಳು ನಮಗಿವೆಯೇ ಎಂದು ಪ್ರಶ್ನೆ ಮಾಡಿಕೊಳ್ಳಬೇಕು ಹಾಗೂ ಉತ್ತರ ಕಂಡುಕೊಳ್ಳಬೇಕಾದ ಅಗತ್ಯವಿದೆ. ಯುವ ಜನಾಂಗ ಮಾನವ ಹಕ್ಕುಗಳ ಕುರಿತು ಅರ್ಥ ಮಾಡಿಕೊಳ್ಳಬೇಕು. ಜೊತೆಗೆ,ಅದನ್ನು ಎಲ್ಲರಿಗೂ ಅರ್ಥ ಮಾಡಿಸಬೇಕು ಎಂದು ಅವರು ತಿಳಿಸಿದರು.
ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ವೂಡೇ ಪಿ.ಕೃಷ್ಣ ಮಾತನಾಡಿ, ಕಾನೂನುಗಳನ್ನು ಮಾನವನ ಅಗತ್ಯಗಳಿಗೆ, ಅನುಕೂಲಗಳಿಗೆ ಹೇಗೆ ಸಕಾರಾತ್ಮಕವಾಗಿ ಬಳಸಿಕೊಂಡು ಜೀವನದ ರೀತಿಯನ್ನು ಉತ್ತಮಪಡಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅದನ್ನು ಅರ್ಥ ಮಾಡಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ಎಸ್.ಜೆ.ಸೆಲ್ಪರಾಜ್, ಲಿಯೋ ಎಫ್.ಸಾಲ್ಡಾನಾ, ಪ್ರಾಂಶುಪಾಲೆ ಡಾ.ಅನುರಾಧ ರಾಯ್, ಡಿ.ಎಸ್.ಮಲ್ಲಿಕಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.