ಸಾಲ ಮರುಪಾವತಿ ಯಾಕೆ ಇಷ್ಟವಾಗುವುದಿಲ್ಲ?

Update: 2018-03-01 18:46 GMT

ಬ್ಯಾಂಕ್ ಸಾಲ ಮರು ಪಾವತಿಸುವುದೆಂದರೆ ಕೆಲವರಿಗೆ ಇಷ್ಟವಾಗುವುದಿಲ್ಲ; ಸಾಲ ತೀರಿಸುವುದನ್ನು ಅವರು ವಿರೋಧಿಸುತ್ತಾರೆ. ಅವರಿಗೆ ಸಾಲ ತೀರಿಸಲು ಬೇಕಾದಷ್ಟು ಆಸ್ತಿ ಹಾಗೂ ಬಂಡವಾಳ ಇದ್ದರೂ, ಅವರು ಸಾಲ ತೀರಿಸದಿರಲು ಸಾಧ್ಯವಾದ ಎಲ್ಲವನ್ನೂ ಮಾಡುತ್ತಾರೆ. ಹಲವಾರು ಉದ್ಯಮಿಗಳು, ವ್ಯಾಪಾರಿಗಳು ಬರ್ತ್‌ಡೇ ಪಾರ್ಟಿಗೆ ಭಾರೀ ಹಣ ಖರ್ಚುಮಾಡುತ್ತಾರೆ. ಆದರೆ ತಾವು ಮಾಡಿದ ಸಾಲ ತೀರಿಸುವುದಿಲ್ಲ. ಈ ನಿಟ್ಟಿನಲ್ಲಿ ಸಣ್ಣ ಸಣ್ಣ ಗಿರಾಕಿಗಳು ದೊಡ್ಡ ದೊಡ್ಡ ಕುಳಗಳಿಗಿಂತ ಎಷ್ಟೋ ವಾಸಿ ಸಾಲನೀಡುವ ಕ್ರೂರ ಸಾಹುಕಾರ ನಮ್ಮ ಮನಸ್ಸನ್ನು ಆವರಿಸಿಕೊಂಡಿರುವುದೇ ನಾವು ಸಾಲಪಡೆದವರನ್ನು ರಕ್ಷಿಸಲು ಮುಖ್ಯ ಕಾರಣ. ಆದರೆ ಈಗ ಪರಿಸ್ಥಿತಿ ತೀರ ಭಿನ್ನವಾಗಿದೆ. ಈಗ ಭಾರೀ ಮೊತ್ತದ ಸಾಲಮಾಡುವವರು ಅಶಿಕ್ಷಿತ ರೈತರಲ್ಲ; ಹಾಗೆಯೇ ಇವತ್ತು ಸಾಲ ನೀಡುವವ ಬಡ್ಡಿ ಸಾಹುಕಾರನೂ ಅಲ್ಲ. ಹಲವು ಸಂದರ್ಭಗಳಲ್ಲಿ ಅಮೂಲ್ಯವಾದ ಬ್ಯಾಂಕ್ ಬಂಡವಾಳ ಈ ಉದ್ಯಮಿಗಳ ಅದ್ದೂರಿ ಮದುವೆಗಳಿಗೆ ಹಾಗೂ ಅವರ ಶೋಕಿ ಜೀವನ ಶೈಲಿಗಾಗಿ ಬಳಕೆಯಾಗುತ್ತಿದೆ. ಆದರೆ ನಾವು ಬಡ ರೈತರಿಗೆ ಸಾಲ ಮನ್ನಾ ಎಂದಾಗ ಬೊಬ್ಬೆ ಹೊಡೆಯುತ್ತೇವೆ. ನೂರಾರು ಕೋಟಿ ಸಾಲ ಪಡೆದವರು ಸಾಲ ತೀರಿಸದಾಗ ಅದನ್ನು ವಿರೋಧಿಸುವ ಧೈರ್ಯ ನಮಗಿರುವುದಿಲ್ಲ. ಯಾಕೆಂದರೆ ಅವರಿಗೆ ಆಳುವವರ ಭಾರೀ ರಕ್ಷಣೆ, ನಿಕಟ ಸಂಬಂಧ ಇರುತ್ತದೆ.

ಅದ್ದೂರಿ ಜೀವನ ನಡೆಸುವವರು ಸಾಲ ತೀರಿಸಲು ನಿರಾಕರಿಸುತ್ತಿರುವಾಗ ಸಾವಿರಾರು ಬಡವರನ್ನು ಸಾಲ ತೀರಿಸುವಂತೆ ಸಾಲ ನೀಡಿದವರ ಏಜಂಟರು, ಬ್ಯಾಂಕ್ ಸಿಬ್ಬಂದಿ ಬೇಟೆಯಾಡುತ್ತಾರೆ. ಈ ಬಡವರಿಗೆ ಸಾಲ ಪಡೆಯುವ ಅರ್ಹತೆ ಇದೆ, ಆದರೆ ಸರಕಾರದ ಬ್ಯಾಂಕ್‌ಗಳು ಇವರನ್ನು ಅಸ್ಪಶ್ಯರಂತೆ ಕಂಡಿವೆ; ಸಾಲ ಹಂಚಿಕೆಯಲ್ಲಿ ಬ್ಯಾಂಕ್‌ಗಳು ವರ್ಣಭೇದ ನೀತಿ ಅನುಸರಿಸುತ್ತವೆ.

ಮಾಡಿದ ಸಾಲ ತೀರಿಸಬೇಕೆಂಬ ನೈತಿಕತೆ ಭಾರತೀಯ ಸಂಸ್ಕೃತಿಯಲ್ಲೇ ಅಂತರ್ಗತವಾಗಿದೆ. ಉದಾಹರಣೆಗೆ, ಮನುಸ್ಮತಿಯಲ್ಲಿ ಸಾಲ ಮರುಪಾವತಿ ಬಗ್ಗೆ 18 ಮುಖ್ಯ ಕಾನೂನು ವರ್ಗಗಳಿವೆ. ಸಾಲ ನೀಡಿದಾತನು ಸಾಲಗಾರ ಸಾಲ ಮರುಪಾವತಿ ಮಾಡುವಂತೆ ತನ್ನಿಂದ ಸಾಧ್ಯವಾಗುವ ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಬಹುದು ಎನ್ನುತ್ತಾನೆೆ ಮನು.

ಸಾಲ ಮರುಪಾವತಿ ವಿಷಯದಲ್ಲಿ ಏಳುವ 18 ರೀತಿಯ ವಿವಾದಗಳಲ್ಲಿ ತಪ್ಪಿತಸ್ಥನಿಗೆ ನೀಡಬೇಕಾದ ಶಿಕ್ಷೆಗಳನ್ನು ವಿವರಿಸುತ್ತಾನೆ. ತನಗೆ ಬರಬೇಕಾದ್ದನ್ನು ಪಡೆಯಲು ಸಾಲಗಾರನ ಹೆಂಡತಿ ಹಾಗೂ ಮಕ್ಕಳನ್ನು ಕೊಲ್ಲುವುದೂ ಸೇರಿ, ಎಲ್ಲ ವಿಧಾನಗಳನ್ನು ಬಳಸಲು ಮನು ರಾಜನಿಗೆ ಅನುಮತಿ ನೀಡಿದ್ದಾನೆ.

ಮೃತಪಟ್ಟ ವ್ಯಕ್ತಿ ಅಥವಾ ಸಹ-ಸಾಲಗಾರ ಅಥವಾ ಜಾಮೀನು ನೀಡಿದಾಗ ಮೃತ ಪಟ್ಟಲ್ಲಿ ಅವನ ಮಕ್ಕಳು ಬಡ್ಡಿ ಸಹಿತ ಸಾಲ ಪಾವತಿಸಬೇಕೆಂದು ಚಾಣಕ್ಯ ಹೇಳುತ್ತಾನೆ. ದಂಪತಿ ಮಾಡಿದ ಸಾಲಕ್ಕೆ ಪತಿ, ಪತ್ನಿ ಮತ್ತು ಇಬ್ಬರೂ ಜವಾಬ್ದಾರರೇ? ಹೌದು ಮತ್ತು ಅಲ್ಲ. ಗಂಡ ಮಾಡುವ ಸಾಲಕ್ಕೆ ಹೆಂಡತಿ ಒಪ್ಪಿಗೆ ನೀಡದೆ ಇದ್ದಲ್ಲಿ ಗಂಡನ ಸಾಲದ ಹೊರೆಯಿಂದ ಅವಳಿಗೆ ವಿನಾಯಿತಿ ನೀಡಲಾಗಿತ್ತು. ಆದರೆ ಹೆಂಡತಿ ಮಾಡಿದ ಸಾಲ ತೀರಿಸುವುದು ಅವಳ ಗಂಡನ ಜವಾಬ್ದಾರಿ ಎನ್ನುತ್ತಾನೆ ಚಾಣಕ್ಯ. ಆದರೆ ಈ ನಿಯಮಗಳೆಲ್ಲ ಈಗ ಅನ್ವಯವಾಗುತ್ತಿರುವುದು ಯಾರಿಗೆ?

ಭಾರತದ ಸುಮಾರು 147 ಬಿಲಿಯನ್ ಡಾಲರ್ ಸಾಲದ ಮೊತ್ತದಲ್ಲಿ ಬಲಿಷ್ಠರಾದ ಹಾಗೂ ರಾಜಕೀಯವಾಗಿ ಪ್ರಭಾವವುಳ್ಳ ಉದ್ಯಮಿಗಳು ನಿಯಮಗಳನ್ನು ತಿರುಚಿ, ಸಾಲ ಪಡೆದು ಬಳಿಕ ಸಾಲ ಹಿಂದಿರುಗಿಸದ ಹಲವಾರು ಉದಾಹರಣೆಗಳಿವೆ. ಸಾಲ ಪಡೆದವರು ದಿವಾಳಿಯಾದಾಗ ಅವರ ಸಾಲಗಳು ಈಗಾಗಲೇ ಇರುವ ಸಾಲದ ಬೆಟ್ಟಕ್ಕೆ ಸೇರಿಕೆಯಾಗುತ್ತವೆ. ಪ್ರತೀ ಬಾರಿ ಹೀಗೆ ಆದಾಗ ಬ್ಯಾಂಕ್‌ಗಳು ಆ ಸಾಲದ ಮೊತ್ತವನ್ನು ಮರಳಿ ಬಾರದ ಸಾಲವೆಂದು ಕಡತದಿಂದ ಹೊಡೆದು ಹಾಕಿ ಕೊಳೆತ ಬಟಾಟೆಗಳಂತೆ ಬದಿಗೆ ಎಸೆದಾಗ ಬ್ಯಾಂಕ್‌ಗಳ ದೊಡ್ಡ ಕುಳಗಳು ದುಬಾರಿ ವಕೀಲರಿಗೆ ದೊಡ್ಡ ಮೊತ್ತ ನೀಡಿ ಕಾನೂನಿನ ಲೋಪದೋಷಗಳನ್ನು ಬಳಸಿಕೊಂಡು ಬಚಾವಾಗುತ್ತಾರೆ. ನಿಮಗೆ ನಷ್ಟವಾಗಿದೆ ಅಥವಾ ಬೆಳೆಗಳು ನಾಶವಾಗಿವೆ ಇತ್ಯಾದಿ ವಾದಗಳನ್ನು ಮಂಡಿಸಿ ನಿಮಗೆ ಸಾಲ ತೀರಿಸುವ ನೈತಿಕ ಜವಾಬ್ದಾರಿ ಇಲ್ಲವೆಂದು ಹೇಳಬಹುದಾಗಿದೆ ಅಥವಾ ಬಡ್ಡಿ ಸಾಹುಕಾರರು ಮೋಸ ಮಾಡಿ ನಿಮ್ಮನ್ನು ಸಾಲದ ಬೋನಿಗೆ ಬೀಳಿಸಿದ್ದಾರೆ ಎಂದೂ ಹೇಳಬಹುದು. ಆದರೆ ಇವು ಎಲ್ಲ ಸಂದರ್ಭಗಳಲ್ಲಿ ಒಪ್ಪಬಹುದಾದ ವಾದಗಳಲ್ಲ.

ಒಂದು ವೇಳೆ ನೀವು ಶೈಕ್ಷಣಿಕ ಸಾಲ ಪಡೆದಿದ್ದರೆ, ನಿಮ್ಮ ಶಿಕ್ಷಣಕ್ಕೆ ದುಬಾರಿ ಶುಲ್ಕ ವಸೂಲಿ ಮಾಡಲಾಗಿದೆ ಅಥವಾ ನಿಮಗೆ ವೌಲ್ಯವಿಲ್ಲದ ಶಿಕ್ಷಣ ನೀಡಲಾಗಿದೆ ಎನ್ನುವುದಾದರೆ, ನೀವು ನಿಮ್ಮ ಶಾಲೆ/ ಕಾಲೇಜಿಗೆ ಬೈಯಬೇಕೆ ಹೊರತು, ಬ್ಯಾಂಕ್‌ಗೆ ಸಾಲ ಮರುಪಾವತಿಸದೆ ಇರುವುದಲ್ಲ. ದುಬಾರಿ ಬಡ್ಡಿ ವಸೂಲು ಮಾಡಲಾಗಿದೆ ಎಂದು ನಾವು ಸಾಲ ತೀರಿಸದೆ ಇರುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಸಾಲ ತೀರಿಸಲು ನೈತಿಕ ಜವಾಬ್ದಾರಿಯೇನೂ ಇಲ್ಲ ಎಂದು ಹೆಚ್ಚಿನ ಜನ ತಿಳಿಯುತ್ತಾರೆ. ಆದರೆ ಇದನ್ನೇ ನಿಮ್ಮ ವೈಯಕ್ತಿಕ ಜೀವನದಲ್ಲಿ ಮಾಡಿದರೆ ಏನಾಗಬಹುದು?

ಇದಕ್ಕೆಲ್ಲ ಉತ್ತರ ಹೀಗಿರಬಹುದೇ? ‘‘ನಾನು ಸಾಲ ಹಿಂದಿರುಗಿಸುವುದಿಲ್ಲ ಮತ್ತು ಎಲ್ಲಿಯವರೆಗೆ ನಾನು ಅಪಕೀರ್ತಿಗೆ ತಲೆಕೆಡಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಯಾರೂ ನನ್ನ ಬಗ್ಗೆ ತೀರ್ಪು ನೀಡಕೂಡದು’’. ಆದರೆ ಹೆಚ್ಚಿನ ಜನ ಹೀಗೆ ಹೇಳುತ್ತಾ ಹೋದರೆ ಉಳಿದವರ ಪಾಡೇನು?

ಕೃಪೆ: counter currents.org

Writer - ಮೊಯಿನ್ ಖಾಜಿ

contributor

Editor - ಮೊಯಿನ್ ಖಾಜಿ

contributor

Similar News