ಚುನಾವಣಾ ಗೆಲುವಿಗಾಗಿ ದೇವರು, ಧರ್ಮಗಳ ದುರ್ಬಳಕೆ

Update: 2018-03-02 04:14 GMT

ಚುನಾವಣೆ ಸಮೀಪಿಸಿದಾಗ ನಮ್ಮ ರಾಜಕೀಯ ಪಕ್ಷಗಳ ನಾಯಕರಿಗೆ ಒಮ್ಮಿಂದೊಮ್ಮೆಲೇ ಪರಮಾತ್ಮನ ಮೇಲೆ ಭಕ್ತಿ ಉಕ್ಕೇರುತ್ತದೆ. ಕರ್ನಾಟಕ ವಿಧಾನಸಭೆಯ ಚುನಾವಣೆಗೆ ಕೇವಲ ಮೂರು ತಿಂಗಳು ಬಾಕಿ ಉಳಿದಿರುವಾಗ ರಾಜ್ಯದಲ್ಲಿ ಚುನಾವಣೆಯ ಕಾವು ಏರುತ್ತಿದೆ. ದೇಶದ ಪ್ರಧಾನಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ರಾಜ್ಯವ್ಯಾಪಿ ಸಂಚರಿಸುತ್ತಿದ್ದಾರೆ. ಕರ್ನಾಟಕಕ್ಕೆ ಬರುವ ರಾಷ್ಟ್ರೀಯ ನಾಯಕರು ತಮ್ಮ ಚುನಾವಣಾ ಪ್ರಚಾರದ ಸಂಚಾರದಲ್ಲಿ ತಪ್ಪದೆ ದೇವರ ದರ್ಶನ ಮಾಡುತ್ತಿದ್ದಾರೆ. ದೇವಾಲಯಗಳ ದರ್ಶನದಲ್ಲಿ ಉಳಿದ ಪಕ್ಷಗಳ ನಾಯಕರಿಗಿಂತ ಬಿಜೆಪಿ ನಾಯಕರು ಮುಂದಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಕೂಡಾ ಅಲ್ಲಲ್ಲಿ ಬಿಜೆಪಿಯೊಂದಿಗೆ ಪೈಪೋಟಿ ನಡೆಸುತ್ತಿದ್ದಾರೆ. ಚುನಾವಣೆ ಬಂದಾಗಲೆಲ್ಲ ದೇವರಿಗೆ ಮಾತ್ರವಲ್ಲ ಧರ್ಮಗುರುಗಳಿಗೆ ಮತ್ತು ಮಠಾಧೀಶರಿಗೆ ಭಾರೀ ಬೇಡಿಕೆ ಉಂಟಾಗುತ್ತದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕದಲ್ಲಿ ಈಗಾಗಲೇ ಎರಡು ಸುತ್ತಿನ ಪ್ರಚಾರ ನಡೆಸಿ ವಾಪಸಾಗಿದ್ದಾರೆ. ಅವರು ಪ್ರಚಾರ ನಡೆಸಿದ ಕಡೆಗಳಲ್ಲೆಲ್ಲಾ ತಪ್ಪದೆ ಹಿಂದೂ ದೇವಾಲಯಗಳ ಮತ್ತು ಮಠಾಧೀಶರ ದರ್ಶನ ಮಾಡಿದ್ದಾರೆ.

ಅಮಿತ್ ಶಾ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದಾಗ ಶ್ರೀಕೃಷ್ಣ ದೇವಾಲಯಕ್ಕೆ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ದರ್ಶನ ಮಾಡಿ ಬಂದರು. ಉಡುಪಿಗೆ ಹೋದಾಗ ವಿಶ್ವ ಹಿಂದೂ ಪರಿಷತ್‌ನ ಮಾರ್ಗದರ್ಶನ ಮಂಡಳದ ಹಿರಿಯರಾದ ಪೇಜಾವರ ಮಠದ ವಿಶ್ವೇಶ್ವ ತೀರ್ಥರು ಮತ್ತು ಇತರ ಮಠಾಧೀಶರೊಂದಿಗೆ ರಹಸ್ಯ ಸಭೆಯನ್ನೂ ನಡೆಸಿದರು. ಬಿಜೆಪಿ ಅಭ್ಯರ್ಥಿಗಳು ಗೆಲ್ಲುವಂತೆ ಭಕ್ತರಿಗೆ ಆದೇಶ ನೀಡಬೇಕೆಂದು ಅವರು ಮನವಿ ಮಾಡಿದರು. ಇದೇ ಅಮಿತ್ ಶಾ ಹೈದರಾಬಾದ್ ಕರ್ನಾಟಕಕ್ಕೆ ಬಂದಾಗ ಕಲಬುರಗಿಯ ಶರಣ ಬಸವೇಶ್ವರ ದೇವಸ್ಥಾನಕ್ಕೆ, ಬೀದರ್‌ನ ಯಾತ್ರಾಸ್ಥಳ ನರಸಿಂಹ ಜರಕ್ಕೆ ಹೋಗಿ ದರ್ಶನ ಮಾಡಿ ಬಂದರು. ಕಲಬುರಗಿಯಲ್ಲಿ ಶರಣ ಬಸಪ್ಪ ಅಪ್ಪ ಅವರನ್ನು ಭೇಟಿ ಮಾಡಿದರು. ಮಾಳಖೇಡಕ್ಕೆ ಹೋಗಿ ಮಾಧ್ವ ಮಠದ ಕ್ಷೇತ್ರವಾದ ಉತ್ತರಾಧಿ ಮಠಕ್ಕೆ ಭೇಟಿ ನೀಡಿ ಅಮಿತ್ ಶಾ ಮತ್ತು ಯಡಿಯೂರಪ್ಪ ತಮ್ಮ ಅಂಗಿ ಬಿಚ್ಚಿ ಬರಿ ಮೈಯಲ್ಲಿ ದೇವಾಲಯದೊಳಗೆ ಪ್ರವೇಶ ಮಾಡಿ ಬಿಜೆಪಿ ಗೆಲುವಿಗಾಗಿ ದೇವರ ಆಶೀರ್ವಾದ ಕೇಳಿದರು. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಕರ್ನಾಟಕ ಪ್ರವಾಸದ ಸಂದರ್ಭದಲ್ಲಿ ಹೊಸಪೇಟೆಯ ಹುಳಿಗಮ್ಮ ದೇವಿ ಮತ್ತು ಸವದತ್ತಿಯ ಯಲ್ಲಮ್ಮ ದೇವಿಯ ದೇವಸ್ಥಾನಗಳಿಗೆ ಹೋಗಿ ದರ್ಶನ ಪಡೆದು ಬಂದಿದ್ದಾರೆ.

ಜಾತ್ಯತೀತ ಜನತಾದಳದ ನಾಯಕರೂ ಅಲ್ಲಲ್ಲಿ ಹೋಗಿ ದೇವಾಲಯಗಳ ದರ್ಶನ ಮಾಡಿ ಬಂದಿದ್ದಾರೆ. ಇದರಲ್ಲಿ ಬಿಜೆಪಿ ನಾಯಕರು ಅಲ್ಪಸಂಖ್ಯಾತರ ಶ್ರದ್ಧಾಕೇಂದ್ರಗಳಿಗೆ ಎಲ್ಲೂ ಭೇಟಿ ನೀಡಿಲ್ಲ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಅಲ್ಲಲ್ಲಿ ದರ್ಗಾಗಳಿಗೆ ಹೋಗಿ ಭೇಟಿ ನೀಡಿ ಬಂದಿದ್ದಾರೆ. ಕೆಲವು ಕಡೆ ಮಠಾಧಿಪತಿಗಳು ಬಿಜೆಪಿ ಪರವಾಗಿ ನೇರವಾಗಿಯೇ ಪ್ರಚಾರಕ್ಕಿಳಿಯುವ ಆಸಕ್ತಿ ತೋರಿಸುತ್ತಿದ್ದಾರೆ. ಇನ್ನು ಕೆಲವು ಯುವ ಮಠಾಧೀಶರಿಗೆ ತಾವು ಬಿಜೆಪಿಯಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿ ಯೋಗಿ ಆದಿತ್ಯನಾಥರಂತೆ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂಬ ಕನಸು ಕಾಣುತ್ತಿದ್ದಾರೆ. ಅಂತಹವರು ಆರೆಸ್ಸೆಸ್ ನಾಯಕರನ್ನು ಓಲೈಸಲು ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದಾರೆ. ಈ ರೀತಿ ನಿತ್ಯವೂ ದಿಢೀರನೆ ದೇವರ ದರ್ಶನ ಮಾಡುತ್ತಿರುವ ಪ್ರಮುಖ ಪಕ್ಷಗಳ ನಾಯಕರಿಗೆ ತಾವು ಚುನಾವಣಾ ಕಾನೂನನ್ನು ಉಲ್ಲಂಘಿಸುತ್ತಿದ್ದೇವೆ ಎಂಬ ಅರಿವಿಲ್ಲ. ಅಮಿತ್ ಶಾ ಅಂತಹವರಿಗೆ ಸಂವಿಧಾನದ ಬಗ್ಗೆಯಾಗಲಿ, ಕಾನೂನಿನ ಬಗ್ಗೆಯಾಗಲಿ ತಿಳುವಳಿಕೆ ಇರಲು ಸಾಧ್ಯವೂ ಇಲ್ಲ. ಚುನಾವಣಾ ಕಾನೂನಿನ ಪ್ರಕಾರ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಮತ ಯಾಚನೆ ಮಾಡುವುದು ಅಕ್ರಮವಾಗಿದೆ. ಚುನಾವಣಾ ಸಂದರ್ಭದಲ್ಲಿ ದೇವಾಲಯಗಳಿಗೆ ಭೇಟಿ ನೀಡಿ ಮಠಾಧೀಶರಿಗೆ ಮನವಿ ಮಾಡಿಕೊಳ್ಳುವುದು ಕೂಡಾ ಕಾನೂನಿಗೆ ವಿರೋಧವಾಗಿದೆ. ಆ ರೀತಿ ಮನವಿ ಮಾಡಿಕೊಳ್ಳುವವರು ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆಯನ್ನು ಕಳೆದುಕೊಳ್ಳುತ್ತಾರೆ. ಇಂತಹ ಮನವಿ ಮಾಡಿಕೊಂಡು ಜಯಶಾಲಿಯಾದವರು ತಮ್ಮ ಶಾಸನ ಸಭೆಯ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ.

ಕಳೆದ ವರ್ಷ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಅನ್ವಯ ಜನತಾ ಪ್ರಾತಿನಿಧ್ಯ ಕಾಯ್ದೆಯ 123ನೇ ಪರಿಚ್ಛೇದದ ಪ್ರಕಾರ ಚುನಾವಣೆ ಎಂಬುದು ಜಾತ್ಯತೀತ ಪ್ರಕ್ರಿಯೆ. ಪ್ರಚಾರದ ಸಮಯದಲ್ಲಿ ಕೂಡಾ ಜಾತಿ ಮತ್ತು ಧರ್ಮದ ಆಚೆಗೆ ನಿಂತು ಮತದಾರರಿಗೆ ಮನವಿ ಮಾಡಿಕೊಳ್ಳಬೇಕಾಗುತ್ತದೆ. ಯಾವುದೇ ಸಂದರ್ಭದಲ್ಲಿ ದೇವರು ಮತ್ತು ಧರ್ಮವನ್ನು ಬಳಸಿಕೊಳ್ಳಬಾರದು. ಆದರೆ, ಕರ್ನಾಟಕದಲ್ಲಿ ಈಗ ನಡೆದಿರುವ ಚುನಾವಣಾ ಪ್ರಚಾರದ ವೈಖರಿಯನ್ನು ಗಮನಿಸಿದರೆ ಬಿಜೆಪಿ ನಾಯಕರು ರಾಜಾರೋಷವಾಗಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಮಠಾಧೀಶರೊಂದಿಗೆ ಗುಟ್ಟಾಗಿ ಸಭೆ ನಡೆಸುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ದೇವರನ್ನುಮತ್ತು ಧರ್ಮವನ್ನು ಮಿತಿಮೀರಿ ಬಳಸಿಕೊಳ್ಳುತ್ತಾ ಬಂದ ಕುಖ್ಯಾತಿ ಬಿಜೆಪಿಗಿದೆ. ಅದು 90ರ ದಶಕದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿಸುವ ಕಾರ್ಯಸೂಚಿಯನ್ನು ಮುಂದಿಟ್ಟು ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರ ಮೂಲಕ ರಥಯಾತ್ರೆ ನಡೆಸಿತು. ಅದರ ಪರಿಣಾಮವಾಗಿ ದೇಶದಲ್ಲಿ ಅಲ್ಲಲ್ಲಿ ಕೋಮುಗಲಭೆಗಳು ನಡೆದು ಅನೇಕರು ಸಾವಿಗೀಡಾದರು. ಇದರಿಂದ ಬಿಜೆಪಿಗೆ ತಾತ್ಕಾಲಿಕವಾಗಿ ಹಿಂದೂ ವೋಟ್‌ಬ್ಯಾಂಕ್‌ವೊಂದು ನಿರ್ಮಾಣವಾಯಿತು. ಅದರ ಫಲವಾಗಿ ಲೋಕಸಭೆಯಲ್ಲಿ ಅದರ ಸಂಖ್ಯಾಬಲ ಕೇವಲ 2ರಷ್ಟಿದ್ದುದು 200ಕ್ಕೆ ಏರಿತು. ಈಗ ಕೇಂದ್ರದಲ್ಲಿ ಅಧಿಕಾರವನ್ನು ಅದು ವಹಿಸಿಕೊಂಡಿದೆ.

ಚುನಾವಣೆಯ ಸಂದರ್ಭದಲ್ಲಿ ಮುಸ್ಲಿಂ ಗುರುಗಳು ಫತ್ವಾ ಹೊರಡಿಸುತ್ತಾರೆಂದು ಬಿಜೆಪಿ ಆರೋಪ ಮಾಡುತ್ತಾ ಬಂದಿದೆ. ಆದರೆ, ವಾಸ್ತವವಾಗಿ ಬಿಜೆಪಿ ನಾಯಕರೇ ಮಠಾಧೀಶರ ಮೂಲಕ ಭಕ್ತರ ಮೇಲೆ ಪ್ರಭಾವ ಬೀರಿ ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಚುನಾವಣೆ ಸಮೀಪಿಸಿದಾಗ ಗೋಹತ್ಯೆ, ಮತಾಂತರ ಮತ್ತು ಲವ್ ಜಿಹಾದ್‌ನಂತಹ ವಿಷಯಗಳನ್ನು ಮುಂದೆ ಮಾಡಿ ಜನರ ಭಾವನೆಗಳನ್ನು ಕೆರಳಿಸಿ ಅಲ್ಲಲ್ಲಿ ಹಿಂದೂ ಸಮಾಜೋತ್ಸವಗಳನ್ನು ನಡೆಸಿ ಬಿಜೆಪಿ ತನ್ನ ವೋಟ್ ಬ್ಯಾಂಕ್ ಸೃಷ್ಟಿಸುತ್ತಿರುವುದು ಕೂಡಾ ಕಾನೂನಿಗೆ ವಿರುದ್ಧವಾಗಿದೆ. ಹಿಂದೂ ಸಮಾಜೋತ್ಸವಗಳಲ್ಲಿ ಭಾಗವಹಿಸುವ ಕೆಲ ಮಠಾಧೀಶರು ಕೂಡಾ ಅತ್ಯಂತ ಪ್ರಚೋದನಾಕಾರಿಯಾಗಿ ಮಾತನಾಡುತ್ತಾರೆ. ಬಿಜೆಪಿ ಹೀಗೆ ಮಾಡುತ್ತಿರುವುದರಿಂದ ತಾವೇಕೆ ಸುಮ್ಮನಿರಬೇಕೆಂದು ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಕೂಡಾ ಸೋಮನಾಥ ದೇವಾಲಯ ಸೇರಿದಂತೆ ಕೆಲ ದೇವಾಲಯಗಳಿಗೆ ದರ್ಶನ ಮಾಡಿ ಬಂದರು. ಆ ಮೂಲಕ ಕಾಂಗ್ರೆಸ್ ಮೃದು ಹಿಂದುತ್ವ ನೀತಿಯನ್ನು ಅನುಸರಿಸುತ್ತಿದೆ ಎಂಬ ಆರೋಪಕ್ಕೆ ಗುರಿಯಾಯಿತು. ವಾಸ್ತವವಾಗಿ ಈ ಮೃದು ಹಿಂದುತ್ವ ನೀತಿ ಕಾಂಗ್ರೆಸ್‌ಗೆ ಎಂದೂ ಬಲವನ್ನು ತಂದುಕೊಟ್ಟಿಲ್ಲ. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಅಯೋಧ್ಯೆಯ ಬಾಬರಿ ಮಸೀದಿಯ ಬೀಗವನ್ನು ತೆಗೆಸಿದ ಪರಿಣಾಮವಾಗಿ ಕಾಂಗ್ರೆಸ್ ತನ್ನ ಪರಂಪರಾಗತವಾದ ಬೆಂಬಲದ ನೆಲೆಯನ್ನು ಕಳೆದುಕೊಂಡಿತು. ಈ ಮೃದು ಹಿಂದುತ್ವ ನೀತಿಯಿಂದ ಅದಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಇದು ನಮ್ಮ ದೇಶದ ಕಾನೂನಿಗೆ ವಿರೋಧ ಎಂಬುದು ಕೂಡಾ ಕಾಂಗ್ರೆಸ್ ನಾಯಕರಿಗೆ ಅರಿವಿಗೆ ಬರುತ್ತಿಲ್ಲ. ಚುನಾವಣೆಯಲ್ಲಿ ದೇವರು ಮತ್ತು ಧರ್ಮದ ದುರುಪಯೋಗ ಮಾಡಿಕೊಳ್ಳುವುದು ಅಪಾಯಕಾರಿ ವರ್ತನೆಯಾಗಿದೆ. ಇಂತಹ ಪ್ರವೃತ್ತಿಗೆ ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಕಡಿವಾಣ ಹಾಕಬೇಕು. ರಾಜಕೀಯ ಪಕ್ಷಗಳು ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಜನಪರವಾದ ಪ್ರಣಾಳಿಕೆಯೊಂದಿಗೆ ಜನರ ಬಳಿ ಹೋಗಬೇಕು. ಅಧಿಕಾರಕ್ಕೆ ಬಂದರೆ ಜನರಿಗೆ ಉಪಯುಕ್ತವಾಗುವಂತಹ ಯಾವ ಯೋಜನೆಗಳನ್ನು ತಾವು ಜಾರಿಗೆ ತರುತ್ತೇವೆ ಎಂದು ಜನರಲ್ಲಿ ನಂಬಿಕೆ ಬರುವ ರೀತಿಯಲ್ಲಿ ಪ್ರಚಾರ ಕಾರ್ಯ ನಡೆಸಬೇಕು. ಅದನ್ನು ಬಿಟ್ಟು ರಾಜಕೀಯಕ್ಕೆ ಸಂಬಂಧವೇ ಇಲ್ಲದ ದೇವರು ಮತ್ತು ಧರ್ಮಗಳ ವಿಷಯಗಳನ್ನು ಎತ್ತಿಕೊಂಡು ಪ್ರಚಾರಕ್ಕಿಳಿಯುವುದು ತಾತ್ಕಾಲಿಕವಾಗಿ ಲಾಭದಾಯಕ ಎಣಿಸಿದರೂ ಇದರಿಂದ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಕ್ರಮೇಣ ದುರ್ಬಲಗೊಳ್ಳುತ್ತಾ ಹೋಗುತ್ತದೆ.

ಇಂತಹ ಅಪಾಯಕಾರಿ ನೀತಿ ಯನ್ನು ಕಳೆದ ಎರಡು ದಶಕಗಳಿಂದ ಅನುಸರಿಸಿಕೊಂಡು ಬಂದ ಪರಿಣಾಮವಾಗಿ ನಮ್ಮ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಇಂದು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಮ್ಮ ದೇಶದ ಪ್ರಜಾಪ್ರಭುತ್ವ ಬಲಗೊಳ್ಳಬೇಕಾದರೆ ಚುನಾವಣೆಯಲ್ಲಿ ದೇವರು ಮತ್ತು ಧರ್ಮಗಳ ದುರುಪಯೋಗವನ್ನು ತಡೆಯಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕೆ ಜನತಾ ಪ್ರಾತಿನಿಧ್ಯ ಕಾನೂನಿನಲ್ಲಿ ಅವಕಾಶವಿದೆ. ಆದರೆ, ಮೋದಿ ಪ್ರಧಾನಮಂತ್ರಿ ಆದ ನಂತರ ಸ್ವಾಯತ್ತ ಸಂಸ್ಥೆಯಾದ ಚುನಾವಣಾ ಆಯೋಗವನ್ನೇ ಪರೋಕ್ಷವಾಗಿ ನಿಯಂತ್ರಿಸುತ್ತಿದ್ದಾರೇನೋ ಎಂಬ ಸಂದೇಹ ಉಂಟಾಗುತ್ತದೆ. ಇಂತಹ ಸಂದೇಹ ನಿವಾರಣೆಯಾಗಬೇಕಾದರೆ ಜನತೆ ಪ್ರಜಾಪ್ರಭುತ್ವದ ರಕ್ಷಣೆಗೆ ಸಂಕಲ್ಪ ತೊಡಬೇಕು. ಇಂತಹವರಿಗೆ ತಮ್ಮ ಮತ ಶಕ್ತಿಯ ಮೂಲಕ ಪಾಠ ಕಲಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News