ಇಂದು ಅರ್ಜೆಂಟೀನ ವಿರುದ್ಧ ಭಾರತ ಅಭಿಯಾನ ಆರಂಭ

Update: 2018-03-02 18:35 GMT

ಇಪೋ(ಮಲೇಷ್ಯಾ),ಮಾ.2: ಇಪ್ಪತ್ತೇಳನೇಯ ಆವೃತ್ತಿಯ ಸುಲ್ತಾನ್ ಅಝ್ಲಾನ್ ಶಾ ಕಪ್ ಹಾಕಿ ಟೂರ್ನಿಯ ಉದ್ಘಾಟನಾ ಪಂದ್ಯ ಶನಿವಾರ ಇಲ್ಲಿ ನಡೆಯಲಿದ್ದು, ಭಾರತ ವಿಶ್ವದ ನಂ.2ನೇ ತಂಡ ಅರ್ಜೆಂಟೀನವನ್ನು ಎದುರಿಸುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ಸರ್ದಾರ್ ಸಿಂಗ್ ನೇತೃತ್ವದ ಭಾರತ ತಂಡ ಗುರುವಾರ ನಡೆದ ಅಭ್ಯಾಸ ಪಂದ್ಯದಲ್ಲಿ ವಿಶ್ವದ ನಂ.1 ತಂಡ ಆಸ್ಟ್ರೇಲಿಯಕ್ಕೆ ತೀವ್ರ ಪೈಪೋಟಿ ನೀಡಿದ್ದರೂ 1-2 ರಿಂದ ಸೋಲುಂಡಿದೆ. ಈ ಪಂದ್ಯದಲ್ಲಿ ಭಾರತದ ಪರ ಉಪ ನಾಯಕ ರಮಣ್‌ದೀಪ್ ಸಿಂಗ್ ಏಕೈಕ ಗೋಲು ಬಾರಿಸಿದ್ದಾರೆ.

ಭಾರತ ಭುವನೇಶ್ವರದಲ್ಲಿ ನಡೆದ ವಿಶ್ವ ಹಾಕಿ ಲೀಗ್ ಫೈನಲ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ ಕೊನೆಯ ಬಾರಿ ಆಡಿತ್ತು. ಆ ಪಂದ್ಯದಲ್ಲಿ 0-1 ರಿಂದ ಸೋತಿದ್ದ ಆತಿಥೇಯ ಭಾರತ ಫೈನಲ್ ತಲುಪಲು ವಿಫಲವಾಗಿತ್ತು.

ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನ ತಂಡ ಖಾಯಂ ಕೋಚ್ ಕಾರ್ಲೊಸ್ ರೆಟೆಗು ಅನುಪಸ್ಥಿತಿಯಲ್ಲಿ ಇಲ್ಲಿಗೆ ಆಗಮಿಸಿದೆ. ಕಾರ್ಲೊಸ್ ಕೋಚಿಂಗ್‌ನಲ್ಲಿ ಅರ್ಜೆಂಟೀನ ತಂಡ 2008ರಲ್ಲಿ ಸುಲ್ತಾನ್ ಅಝ್ಲಾನ್ ಶಾ ಕಪ್ ಫೈನಲ್‌ನಲ್ಲಿ ಭಾರತವನ್ನು 2-1 ರಿಂದ ಸೋಲಿಸಿ ಪ್ರಶಸ್ತಿ ಜಯಿಸಿತ್ತು. ಅರ್ಜೆಂಟೀನ ತಂಡದಲ್ಲಿ ಗೊಂಝಾಲೊ ಪೆಲ್ಲಟ್, ಲುಕಾಸ್ ರೊಸ್ಸಿ, ಜುಯಾನ್ ಮ್ಯಾನುಯೆಲ್, ಪೆಡ್ರೊ ಇಬಾರ್ರಾ, ಮಥಾಯಸ್ ಪರೆಡಸ್ ಅವರಿದ್ದಾರೆ.

ಕುತೂಹಲಕಾರಿ ಅಂಶವೆಂದರೆ ಭಾರತ ತಂಡ ಸರ್ದಾರ್ ಸಿಂಗ್ ನಾಯಕತ್ವದಲ್ಲಿ ಅಝ್ಲನ್ ಶಾ ಹಾಕಿ ಟೂರ್ನಿಯಲ್ಲಿ ಇದುವರೆಗೆ ಪದಕ ಗೆಲ್ಲದೇ ಬರಿಗೈಯಲ್ಲಿ ತವರಿಗೆ ವಾಪಸಾಗಿಲ್ಲ.

2008ರಲ್ಲಿ ಸರ್ದಾರ್ ನಾಯಕತ್ವದಲ್ಲಿ ಭಾರತ ಬೆಳ್ಳಿ ಪದಕ ಜಯಿಸಿತ್ತು. 2015 ಹಾಗೂ 2016ರಲ್ಲಿ ಸರ್ದಾರ್ ನೇತೃತ್ವದಲ್ಲಿ ಭಾರತ ತಂಡ ಕ್ರಮವಾಗಿ ಕಂಚು ಹಾಗೂ ಬೆಳ್ಳಿ ಪದಕ ಜಯಿಸಿತ್ತು.

 ಕಳೆದ ಆವೃತ್ತಿಯ ಅಝ್ಲಿನ್ ಶಾ ಕಪ್‌ನಲ್ಲಿ ನ್ಯೂಝಿಲೆಂಡ್‌ನ್ನು 4-0 ಅಂತರದಿಂದ ಮಣಿಸಿದ ಭಾರತ ಮೂರನೇ ಸ್ಥಾನ ಪಡೆದಿತ್ತು. ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು ಮಣಿಸಿದ್ದ ಗ್ರೇಟ್ ಬ್ರಿಟನ್ ಚಾಂಪಿಯನ್‌ಪಟ್ಟಕ್ಕೇರಿತ್ತು.

ಗ್ರೂಪ್ ಹಂತದಲ್ಲಿ ಭಾರತ ಮಿಶ್ರ ಫಲಿತಾಂಶ ದಾಖಲಿಸಿತ್ತು. ಮೊದಲ ಪಂದ್ಯದಲ್ಲಿ ಬ್ರಿಟನ್ ವಿರುದ್ಧ 2-2 ರಿಂದ ಡ್ರಾ ಸಾಧಿಸಿದ್ದ ಭಾರತ ಎರಡನೇ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ 3-0 ಅಂತರದಿಂದ ಜಯ ಸಾಧಿಸಿತ್ತು. ಆ ನಂತರ ನಡೆದ 2 ಲೀಗ್ ಪಂದ್ಯಗಳಲ್ಲಿ ಸೋತಿತ್ತು. ಆಸ್ಟ್ರೇಲಿಯ ವಿರುದ್ಧ 1-3 ಹಾಗೂ ಜಪಾನ್ ವಿರುದ್ಧ 3-4 ಅಂತರದಿಂದ ಸೋತಿತ್ತು. ಆತಿಥೇಯ ಮಲೇಷ್ಯಾ ವಿರುದ್ಧ 0-1 ಅಂತರದಿಂದ ಸೋತಿದ್ದ ಭಾರತದ ಫೈನಲ್ ಪ್ರವೇಶಿಸುವ ಆಸೆ ಕಮರಿ ಹೋಗಿತ್ತು.

1983ರಲ್ಲಿ ಟೂರ್ನಮೆಂಟ್ ಆರಂಭವಾದ ಬಳಿಕ ಭಾರತೀಯ ಹಾಕಿ ತಂಡ ಐದು ಬಾರಿ(1985,1991,1995,2009) ಟ್ರೋಫಿ ಜಯಿಸಿದೆ. 2010ರಲ್ಲಿ ದಕ್ಷಿಣ ಕೊರಿಯಾ ತಂಡದೊಂದಿಗೆ ಟ್ರೋಫಿ ಹಂಚಿಕೊಂಡಿತ್ತು.

 ಈ ಬಾರಿ ಪ್ರಮುಖ ಆಟಗಾರರಾದ ಆಕಾಶ್‌ದೀಪ್ ಸಿಂಗ್, ಎಸ್.ವಿ. ಸುನೀಲ್, ಮನ್‌ದೀಪ್ ಸಿಂಗ್(ಫಾರ್ವರ್ಡ್‌ಗಳು), ಮನ್‌ಪ್ರೀತ್ ಸಿಂಗ್(ಮಿಡ್ ಫೀಲ್ಟರ್), ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಹಾಗೂ ಡ್ರಾಗ್‌ಫ್ಲಿಕ್ ಸ್ಪೆಷಲಿಸ್ಟ್ ರೂಪಿಂದರ್ ಪಾಲ್ ಸಿಂಗ್ ಹಾಗೂ ಹರ್ಮನ್‌ಪ್ರೀತ್ ಸಿಂಗ್ ಅನುಪಸ್ಥಿತಿಯಿದೆ.

ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಕಿರಿಯ ಆಟಗಾರರು ತಮ್ಮ ಸಾಮರ್ಥ್ಯ ತೋರ್ಪಡಿಸಬೇಕಾಗಿದೆ. ‘‘ಗೆಲುವಿನ ಆರಂಭ ಪಡೆಯಲು ಎದುರು ನೋಡುತ್ತಿದ್ದೇವೆ. ಅರ್ಜೆಂಟೀನದಂತಹ ತಂಡದ ವಿರುದ್ಧ ಆಡುವಾಗ ಯಾವ ಕಾರಣಕ್ಕೂ ತಪ್ಪು ಮಾಡಬಾರದು. ಒಲಿಂಪಿಕ್ಸ್ ಚಾಂಪಿಯನ್ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ನಮಗಿದೆ. ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸುವುದು ಯಾವಾಗಲೂ ಹೆಮ್ಮೆಯ ವಿಷಯ. ಹಿರಿಯ ಆಟಗಾರರು ತಂಡದಲ್ಲಿರುವ ಕಿರಿಯರಿಗೆ ಮಾರ್ಗದರ್ಶನ ಮಾಡಬೇಕಾದ ಹೊಣೆಗಾರಿಕೆಯಿದೆ. ಹಿರಿಯ ಆಟಗಾರರಾದ ರಮಣ್ ದೀಪ್ ಸಿಂಗ್, ಎಸ್.ಕೆ. ಉತ್ತಪ್ಪ, ಸುರೇಂದರ್ ಕುಮಾರ್ ಹಾಗೂ ತಲ್ವಿಂದರ್ ಸಿಂಗ್ ಹಾಗೂ ಪ್ರತಿಭಾವಂತ ಕಿರಿಯ ಆಟಗಾರರು ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ನನಗಿದೆ’’ ಎಂದು 31ರ ಹರೆಯದ ಸರ್ದಾರ್ ಸಿಂಗ್ ತಿಳಿಸಿದ್ದಾರೆ. ಭಾರತ ರವಿವಾರ ಇಂಗ್ಲೆಂಡ್ ವಿರುದ್ಧ ಎರಡನೇ ಪಂದ್ಯ ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News