ನ್ಯೂಝಿಲೆಂಡ್‌ನಲ್ಲಿ 2 ಹ್ಯಾಟ್ರಿಕ್ ದಾಖಲೆ

Update: 2018-03-03 18:34 GMT

ವೆಲ್ಲಿಂಗ್ಟನ್, ಮಾ.3: ನ್ಯೂಝಿಲೆಂಡ್‌ನಲ್ಲಿ ಇಬ್ಬರು ಬೌಲರ್‌ಗಳು ಒಂದೇ ದಿನ ಎರಡು ಹ್ಯಾಟ್ರಿಕ್ ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ.

   ನ್ಯೂಝಿಲೆಂಡ್‌ನ ನಲ್ಲಿ ನಡೆದ ಪ್ಲಂಕೆಟ್ ಶೀಲ್ಡ್ ಕ್ರಿಕೆಟ್ ಟೂರ್ನಮೆಂಟ್‌ನ ಎರಡು ಪಂದ್ಯಗಳಲ್ಲಿ ಎರಡು ದಾಖಲೆಗಳು ನಿರ್ಮಾಣವಾಗಿದೆ. ಒಂದು ಗಂಟೆಯ ಅಂತರದಲ್ಲಿ ಹ್ಯಾಟ್ರಿಕ್ ದಾಖಲೆ ನಿರ್ಮಾಣವಾಗಿರುವುದು ವಿಶೇಷ. ಪ್ಲಂಕೆಟ್ ಶೀಲ್ಡ್ ಟೂರ್ನಮೆಂಟ್ ಆರಂಭಗೊಂಡ 112 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿ ಡಬಲ್ ಹ್ಯಾಟ್ರಿಕ್ ದಾಖಲೆ ನಿರ್ಮಾಣಗೊಂಡಿದೆ. ಪ್ಲಂಕೆಟ್ ಶೀಲ್ಡ್ ಟೂರ್ನಮೆಂಟ್ 1906-07ರಲ್ಲಿ ಮೊದಲ ಬಾರಿ ಆರಂಭಗೊಂಡಿತ್ತು.

ಕ್ರೈಸ್ಟ್‌ಚರ್ಚ್‌ನಲ್ಲಿ ಲಾಗನ್ ವ್ಯಾನ್ ಬೆಕ್ ಅವರು ಕ್ಯಾಂಟೆರ್‌ಬರಿ ವಿರುದ್ಧದ ಪಂದ್ಯದಲ್ಲಿ ವೆಲ್ಲಿಂಗ್ಟನ್ ಫೈರ್‌ಬರ್ಡ್ಸ್ ಪರ ಮೊದಲ ಹ್ಯಾಟ್ರಿಕ್ ನಿರ್ಮಿಸಿದರು. ಎರಡನೇ ಇನಿಂಗ್ಸ್‌ನಲ್ಲಿ ಬೆಕ್ ಅವರು ಕ್ಯಾಂಟೆರ್‌ಬರಿ ತಂಡದ ಚಾದ್ ಬೊವೆಸ್, ಮೈಕೆಲ್ ಪೊಲಾರ್ಡ್ ಮತ್ತು ಕೆನ್ ಮೆಕ್‌ಕ್ಲುರೆ ವಿಕೆಟ್ ಉಡಾಯಿಸಿ ಹ್ಯಾಟ್ರಿಕ್ ವಿಕೆಟ್‌ಪಡೆದರು. ಬೆಕ್ ದಾಳಿಗೆ ಸಿಲುಕಿದ ಕ್ಯಾಂಟೆರ್‌ಬರಿ 53 ರನ್‌ಗಳಿಗೆ ಆಲೌಟಾಯಿತು. ಮೂಲತಃ ಹಾಲೆಂಡ್‌ನ 27ರ ಹರೆಯದ ಬೌಲರ್ ಬೆಕ್ ಅವರು 22ಕ್ಕೆ 5 ವಿಕೆಟ್ ಪಡೆದು ಮಿಂಚಿದರು. ಮೊದಲ ಇನಿಂಗ್ಸ್ ನಲ್ಲಿ 1 ವಿಕೆಟ್ ಪಡೆದಿದ್ದರು. ವೆಲ್ಟಿಂಗ್ಟನ್ ತಂಡ 10 ವಿಕೆಟ್‌ಗಳ ಜಯ ಗಳಿಸಿತು.

  ಈಡನ್ ಪಾರ್ಕ್‌ನಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಆಕ್ಲೆಂಡ್ ಏಸೆಸ್‌ನ ಮ್ಯಾಟ್ ಮೆಕ್‌ಎವನ್ ಮೊದಲ ಹ್ಯಾಟ್ರಿಕ್ ಪಡೆದರು. ನಾರ್ಥನ್ ಡಿಸ್ಟ್ರಿಕ್ಟ್ ತಂಡದ ಮೊದಲ ಇನಿಂಗ್ಸ್‌ನಲ್ಲಿ ಡೀನ್ ಬ್ರೊವ್ನಲೀ , ಬಿ.ಜೆ. ವಾಟ್ಲಿಂಗ್ ಮತ್ತು ಡಾರ್ಲ್‌ ಮಿಚೆಲ್ ವಿಕೆಟ್ ಉಡಾಯಿಸಿದ ಮೆಕ್‌ಎವನ್ ಹ್ಯಾಟ್ರಿಕ್ ದಾಖಲೆ ಬರೆದರು. ಅವರು ಒಟ್ಟು ಐದು ವಿಕೆಟ್‌ಗಳನ್ನು ತನ್ನ ಖಾತೆಗೆ ಸೇರಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News