ಇನ್ನು ತಾಜ್ ಮಹಲ್ ವೀಕ್ಷಣೆ ಸುಲಭ

Update: 2018-03-05 15:04 GMT

 ಹೊಸದಿಲ್ಲಿ, ಮಾ.5: ತಾಜ್‌ಮಹಲ್ ವೀಕ್ಷಣೆ ಮಾಡಬೇಕಿದ್ದರೆ ಸರತಿಯ ಸಾಲಿನಲ್ಲಿ ನಿಂತು ಟಿಕೆಟ್ ಪಡೆಯುವ ತ್ರಾಸದಾಯಕ ಪ್ರಕ್ರಿಯೆಯನ್ನು ಸರಳಗೊಳಿಸಿರುವ ಕೇಂದ್ರ ಸರಕಾರ, ಸೂರ್ಯೋದಯಕ್ಕೆ 30ನಿಮಿಷದ ಮೊದಲೇ ಟಿಕೆಟ್ ಪಡೆಯುವ ವ್ಯವಸ್ಥೆ ಆರಂಭಿಸಲು ನಿರ್ಧರಿಸಿದೆ ಎಂದು ಲೋಕಸಭೆಗೆ ಮಾಹಿತಿ ನೀಡಲಾಗಿದೆ.

   ತಾಜ್‌ಮಹಲ್‌ಗೆ ಪ್ರವೇಶ ಆರಂಭ ಹಾಗೂ ಮುಕ್ತಾಯದ ವೇಳೆಯನ್ನು ಮಾರ್ಪಾಟು ಮಾಡಲಾಗಿದ್ದು ಪ್ರವಾಸಿಗರಿಗೆ ಸೂರ್ಯೋದಯಕ್ಕೆ ಸಾಕಷ್ಟು ಮುನ್ನವೇ ಟಿಕೆಟ್ ಲಭ್ಯವಾಗಲು ವ್ಯವಸ್ಥೆ ಮಾಡಲಾಗುವುದು . ಸೂರ್ಯೋದಯಕ್ಕೆ 30 ನಿಮಿಷ ಮೊದಲು ಪ್ರವೇಶಾವಕಾಶ ಆರಂಭಗೊಂಡು , ಸೂರ್ಯಾಸ್ತದ 30 ನಿಮಿಷದ ಮೊದಲು ಮುಕ್ತಾಯಗೊಳ್ಳುತ್ತದೆ ಎಂದು ಸಂಸ್ಕೃತಿ ಇಲಾಖೆಯ ಸಹಾಯಕ ಸಚಿವ ಮಹೇಶ್ ಶರ್ಮ ತಿಳಿಸಿದ್ದಾರೆ. ಶುಕ್ರವಾರ ತಾಜ್‌ಮಹಲ್‌ಗೆ ಪ್ರವಾಸಿಗರ ಭೇಟಿಗೆ ಅವಕಾಶವಿಲ್ಲ. ಈ ಮೊದಲು ತಾಜ್‌ಮಹಲ್‌ಗೆ ಪ್ರವೇಶ ಕಲ್ಪಿಸುವ ಎರಡೂ ಗೇಟ್‌ಗಳು ಹಾಗೂ ಟಿಕೆಟ್ ಕೌಂಟರ್ ಸೂರ್ಯೋದಯದಿಂದ ಕಾರ್ಯಆರಂಭಿಸಿ ಸೂರ್ಯಾಸ್ತಕ್ಕೆ ಕಾರ್ಯ ಮುಕ್ತಾಯಗೊಳ್ಳುತ್ತಿತ್ತು.

ತಾಜ್‌ಮಹಲ್ ಪ್ರವೇಶಿಸಿದ ಪ್ರವಾಸಿಗರು ಅದರೊಳಗೆ 3 ಗಂಟೆ ಇರಲು ಸಮಯ ನಿಗದಿಪಡಿಸಿರುವ ಸರಕಾರ, ಪ್ರವೇಶ ಶುಲ್ಕವನ್ನು 40 ರೂ.ನಿಂದ 50 ರೂ.ಗೆ ಹೆಚ್ಚಿಸಿದೆ.ಅಲ್ಲದೆ ಪ್ರವಾಸಿಗರು ಮುಖ್ಯ ಸಮಾಧಿಸ್ಥಳಕ್ಕೆ ಭೇಟಿ ನೀಡಬೇಕಿದ್ದರೆ 200 ರೂ. ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News