ಸವಿತಾ ಸಮಾಜಕ್ಕೆ ಪ್ರತ್ಯೇಕ ನಿಗಮ: ಸಚಿವ ಕೃಷ್ಣ ಬೈರೇಗೌಡ ಭರವಸೆ

Update: 2018-03-06 13:09 GMT

ಬೆಂಗಳೂರು, ಮಾ. 6: ಸವಿತಾ ಸಮಾಜಕ್ಕೆ ಪ್ರತ್ಯೇಕ ನಿಗಮ ಸೇರಿದಂತೆ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡುವುದಾಗಿ ಕೃಷಿ ಸಚಿವ ಕೃಷ್ಣಬೈರೇಗೌಡ ಭರವಸೆ ನೀಡಿದ್ದಾರೆ.

ಮಂಗಳವಾರ ನಗರದ ಬ್ಯಾಟರಾಯನಪುರದಲ್ಲಿ ಆಯೋಜಿಸಿದ್ದ ಸವಿತಾ ಸಮಾಜದ ಸಮಾವೇಶ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಮಾಜದ ಶ್ರೇಣೀಕೃತ ವ್ಯವಸ್ಥೆಯಿಂದಾಗಿ ಸವಿತಾ ಸಮಾಜ ಅವಕಾಶ ವಂಚಿತವಾಗುತ್ತಿದೆ. ಸಮುದಾಯದ ಮುಖಂಡರು ತಮ್ಮ ಜನಾಂಗದ ಏಳಿಗೆಗಾಗಿ ಏಳು ಅಂಶಗಳುಳ್ಳ ಮನವಿ ಪತ್ರ ನೀಡಿದ್ದಾರೆ. ಸವಿತಾ ಸಮುದಾಯಕ್ಕೆ ಸರಕಾರದ ಎಲ್ಲ ಸೌಲಭ್ಯಗಳನ್ನು ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡುತ್ತೇನೆ ಎಂದರು.

ಬೇರೆ ದೇಶಗಳಲ್ಲೂ ಅಸ್ಪೃಶ್ಯತೆ ಇದೆ. ಆದರೆ, ಸ್ವಾತಂತ್ರ ನಂತರ ಸಾಕಷ್ಟು ಬದಲಾವಣೆಯಾಗಿದ್ದರೂ ಸಹ ಮನಸ್ಸಿನಿಂದ ಅಸ್ಪೃಶ್ಯತೆ ಹೋಗಿಲ್ಲ. ಸಮಾಜದಲ್ಲಿ ಎಲ್ಲ ವರ್ಗದ ಜನತೆಗೆ ಸಮಾನ ಅವಕಾಶ ಸಿಕ್ಕಾಗ ಮಾತ್ರ ಸಮಾನ ಮನಸ್ಸುಗಳನ್ನು ನಿರ್ಮಿಸಲು ಸಾಧ್ಯ. ಹೀಗಾಗಿ, ಸಣ್ಣ ಪುಟ್ಟ ಸಮುದಾಯಗಳಿಗೆ ಎದುರಾಗುವ ಸವಾಲುಗಳನ್ನು ಮೀರಿ ನಿಲ್ಲಬೇಕಿದೆಎಂದು ಕರೆ ನೀಡಿದರು.

ಸಮುದಾಯದ ಯುವಕರು ಉನ್ನತ ಶಿಕ್ಷಣ ಪಡೆದು ಸಮಾಜದ ಉನ್ನತ ಹುದ್ದೆಗಳನ್ನು ಪಡೆಯಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಎಲ್ಲ ಸೌಲಭ್ಯಗಳು ಸಿಗಬೇಕೆಂಬ ನಿಟ್ಟಿನಲ್ಲಿ ನಮ್ಮ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದ ಅವರು, ಸಣ್ಣ ಹಿಂದುಳಿದ ವರ್ಗಗಳಾದ ಸವಿತಾ ಸಮಾಜ, ಮಡಿವಾಳ ಸಮುದಾಯ ಸೇರಿದಂತೆ ನಾಲ್ಕು ಸಮುದಾಯಗಳಿಗೆ ಸರಕಾರ ಬಜೆಟ್‌ನಲ್ಲಿ 200ಕೋಟಿ.ರೂ ಅನುದಾನ ಮೀಸಲಿಟ್ಟಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೃಷ್ಣಬೈರೇಗೌಡ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಕೆ.ರಮೇಶ್, ಮಾಜಿ ಶಾಸಕ ಗೋಪಾಲ ಪೂಜಾರಿ, ಕರ್ನಾಟಕ ರಾಜ್ಯ ಸವಿತಾ ಸಮಾಜ ಅಧ್ಯಕ್ಷ ಯು.ಕೃಷ್ಣಮೂರ್ತಿ, ರಾಜ್ಯ ಕೃಷಿಕ ಸಮಾಜ ಅಧ್ಯಕ್ಷ ಮಂಜುನಾಥಗೌಡ, ಬ್ಯಾಟರಾಯನಪುರ ಕಾಂಗ್ರೆಸ್ ಮುಖಂಡ ನಾರಾಯಣೌಡ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News