ಜನ ಸಂಘದ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಪ್ರತಿಮೆಗೆ ಹಾನಿ

Update: 2018-03-07 06:41 GMT

ಹೊಸದಿಲ್ಲಿ, ಮಾ.7: ತ್ರಿಪುರಾದಲ್ಲಿ ಸೋಮವಾರ ಕಮ್ಯುನಿಸ್ಟ್ ನಾಯಕ ಲೆನಿನ್ ಪ್ರತಿಮೆ ಧ್ವಂಸಗೈದ ಪ್ರಕರಣದ ಬೆನ್ನಲ್ಲೇ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ತಿರುಪತ್ತೂರಿನಲ್ಲಿ ದ್ರಾವಿಡ ನಾಯಕ ಪೆರಿಯಾರ್ ಅವರ ಪ್ರತಿಮೆಗೆ ದುಷ್ಕರ್ಮಿಗಳು ಹಾನಿಗೈದಿದ್ದರು. ಇದೀಗ ಕೊಲ್ಕತ್ತಾದಲ್ಲಿ ಜನ ಸಂಘದ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿಯ ಪ್ರತಿಮೆಗೆ ಹಾನಿಗೈಯಲಾಗಿದೆ. ಈ ಘಟನೆಯ ಸಂಬಂಧ ಏಳು ಮಂದಿಯನ್ನು ಬಂಧಿಸಲಾಗಿದೆ. ತರುವಾಯ ತ್ರಿಪುರಾದಲ್ಲಿ ಲೆನಿನ್ ಅವರ ಇನ್ನೊಂದು ಪ್ರತಿಮೆಗೂ ಹಾನಿ ಉಂಟು ಮಾಡಲಾಗಿದೆ ಎಂದು ಕೆಲ ವರದಿಗಳು ತಿಳಿಸಿವೆ.

ಈ ಪ್ರತಿಮೆ ನಾಶ ಘಟನೆಗಳ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಜಕೀಯ ಹಿಂಸಾಚಾರ ಉದ್ಭವಿಸಬಹುದೆಂಬ ಭಯ ಪೊಲೀಸರನ್ನು ಕಾಡುತ್ತಿದೆ. ಇಂತದ ದಾಂಧಲೆ ಕೃತ್ಯಗಳನ್ನು ತಾನು ಸಹಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಂಗಳವಾರ ಬಿಜೆಪಿ ನಾಯಕ ಎಚ್ ರಾಜಾ ಅವರು ‘ತ್ರಿಪುರಾದಲ್ಲಿ ಲೆನಿನ್ ನಂತರ ತಮಿಳುನಾಡಿನಲ್ಲಿ ಪೆರಿಯಾರ್ ಪ್ರತಿಮೆ’’ ಎಂದು ಫೇಸ್ಬುಕ್ ಪೋಸ್ಟ್ ಮಾಡಿದ್ದರು. ನಂತರ ಅದನ್ನು ಅವರು ಡಿಲೀಟ್ ಮಾಡಿದ್ದರೂ ಅಷ್ಟರೊಳಗಾಗಲೇ ವೆಲ್ಲೂರು ಜಿಲ್ಲೆಯ ತಿರುಪತ್ತೂರು ಮುನ್ಸಿಪಾಲಿಟಿ ಕಚೇರಿ ಪಕ್ಕದಲ್ಲಿದ್ದ ಪೆರಿಯಾರ್ ಪ್ರತಿಮೆಯನ್ನು ಇಬ್ಬರು ದುಷ್ಕರ್ಮಿಗಳು ಸೋಮವಾರ ರಾತ್ರಿಯೇ ಹಾನಿಗೈದಿದ್ದರು.

ತರುವಾಯ ರಾಜಾ ಅವರು ತಾವು ಮಾಡಿದ್ದ ಟ್ವೀಟ್ ಗೆ ಖೇದ ವ್ಯಕ್ತಪಡಿಸಿದ್ದಾರಲ್ಲದೆ, ಆ ಟ್ವೀಟ್ ತಮ್ಮ ಗಮನಕ್ಕೆ ಬರದೆ ಪೋಸ್ಟ್ ಆಗಿತ್ತು ಎಂದು ಸಮಜಾಯಿಷಿ ನೀಡುವ ಪ್ರಯತ್ನ ನಡೆಸಿದ್ದಾರೆ. ಆದರೆ ಪೆರಿಯಾರ್ ಪ್ರತಿಮೆಗೆ ಹಾನಿಗೈದ ಘಟನೆಗೆ ಪ್ರತೀಕಾರವಾಗಿ ಕೆಲ ದುಷ್ಕರ್ಮಿಗಳು ಕೊಯಂಬತ್ತೂರಿನ ಬಿಜೆಪಿ ಜಿಲ್ಲಾ ಕಚೇರಿ ಮೇಲೆ ಇಂದು ಮುಂಜಾನೆ ಎರಡು ಸೀಮೆಎಣ್ಣೆ ಬಾಂಬ್ ಗಳನ್ನು ಎಸೆದಿದ್ದಾರೆ. ಇದರಿಂದಾಗಿ ಕೊಯಂಬತ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉದ್ವಿಗ್ನತೆ ತಲೆದೋರಿದೆ. ವೆಲ್ಲೂರು ಘಟನೆಯ ಸಂಬಂಧ ಸ್ಥಳೀಯ ಬಿಜೆಪಿ ಕಾರ್ಯದರ್ಶಿ ಹಾಗೂ ಆತನ ಸಂಬಂಧಿಗಳನ್ನು ಬಂಧಿಸಲಾಗಿದೆ.

ರಾಜ್ಯಾದ್ಯಂತ ಇರುವ 27 ಪೆರಿಯಾರ್ ಪ್ರತಿಮೆಗಳ ಸುತ್ತ ಇದೀಗ ಪೊಲೀಸ್ ರಕ್ಷಣೆ ಒದಗಿಸಲಾಗಿದೆ. ಬಿಜೆಪಿ ಕಚೇರಿಗಳ ಹೊರಗೂ ಪೊಲೀಸ್ ಕಾವಲು ಏರ್ಪಾಟು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News