ಕ್ರಿಕೆಟಿಗ ಮುಹಮ್ಮದ್ ಶಮಿ ವಿರುದ್ಧ ಪತ್ನಿಯಿಂದ ಕಿರುಕುಳ ಆರೋಪ

Update: 2018-03-07 07:45 GMT

ಹೊಸದಿಲ್ಲಿ, ಮಾ.7: ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಅವರ ಪತ್ನಿ ಹಸಿನ್ ಜಹಾನ್ ತನ್ನ ಪತಿಯ ವಿರುದ್ಧ  ಕಿರುಕುಳ ಆರೋಪ ಹೊರಿಸಿದ್ದಲ್ಲದೆ, ಶಮಿಗೆ ವಿವಾಹೇತರ ಸಂಬಂಧವಿದೆ ಎಂದು ಹೇಳಿದ್ದಾರೆ.

ಶಮಿ ಹಲವು ಮಹಿಳೆಯರೊಂದಿಗೆ ವ್ಯಾಟ್ಸ್‌ಆ್ಯಪ್ ಹಾಗೂ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ನಡೆಸಿರುವ ಸಂಭಾಷಣೆಯ ಸ್ಕ್ರೀನ್‌ಶಾಟ್‌ನ್ನು ಜಹಾನ್ ತನ್ನ ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ. ಶಮಿಯೊಂದಿಗೆ ಸಂಭಾಷಣೆ ನಡೆಸಿರುವ ಮಹಿಳೆಯ ಫೋಟೊಗಳು ಹಾಗೂ ಫೋನ್ ನಂಬರ್‌ಗಳನ್ನು ಬಹಿರಂಗಪಡಿಸಿದ್ದಾರೆ.

ಶಮಿ ಹಾಗೂ ಅವರ ಕುಟುಂಬ ಸದಸ್ಯರು ತನ್ನನ್ನು ಕೊಲ್ಲಲು ಯತ್ನಿಸಿದ್ದಾರೆ. ಅವರ ಮನೆಯಲ್ಲಿರುವವರೆಲ್ಲರೂ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಶಮಿಯ ತಾಯಿ ಹಾಗೂ ಸಹೋದರ ತನ್ನನ್ನು ನಿಂದಿಸುತ್ತಿದ್ದಾರೆ. ಬೆಳಗ್ಗೆ 2-3 ಗಂಟೆಗೆ ಕಿರುಕುಳ ಆರಂಭವಾಗುತ್ತದೆ’’ ಎಂದು ಜಹಾನ್ ಆರೋಪಿಸಿದ್ದಾರೆ.

ತನ್ನ ವಿರುದ್ಧ ಪತ್ನಿ ಮಾಡಿರುವ ಎಲ್ಲ ಆರೋಪವನ್ನು ಫೇಸ್‌ಬುಕ್ ಮೂಲಕವೇ ಶಮಿ ನಿರಾಕರಿಸಿದ್ದಾರೆ. ಇದೊಂದು ನನ್ನ ವಿರುದ್ಧ ನಡೆಸಲಾಗಿರುವ ಪಿತೂರಿ. ಈ ಮೂಲಕ ನನ್ನ ಗೌರವಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ಹೇಳಿದ್ದಾರೆ.

‘‘ಶಮಿ ಕಳೆದ ತಿಂಗಳು ದಕ್ಷಿಣ ಆಫ್ರಿಕ ಕ್ರಿಕೆಟ್ ಪ್ರವಾಸದಿಂದ ಸ್ವದೇಶಕ್ಕೆ ವಾಪಸಾದ ಬಳಿಕ ನನಗೆ ಬೈಯುತ್ತಿದ್ದರು. ಥಳಿಸಿದ್ದರು. ಅವರು ಕಳೆದ ಕೆಲವು ಸಮಯದಿಂದ ಹೀಗೆ ಮಾಡುತ್ತಿದ್ದಾರೆ. ತಪ್ಪನ್ನು ತಿದ್ದಿಕೊಳ್ಳಲು ಶಮಿಗೆ ಸಾಕಷ್ಟು ಸಮಯ ನೀಡಿದ್ದೇನೆ. ಎಲ್ಲ ಕಷ್ಟವನ್ನು ಸಹಿಸಿಕೊಂಡಿದ್ದೆ. ಆದರೆ, ಅವರು ತನ್ನ ತಪ್ಪನ್ನು ಒಪ್ಪಿಕೊಳ್ಳದೇ ನನ್ನ ಮೇಲೆ ರೇಗಾಡುತ್ತಿದ್ದರು’’ ಎಂದು ಜಹಾನ್ ಹೇಳಿದ್ದಾರೆ.

 ‘‘ನನ್ನ ಕುಟುಂಬ ಹಾಗೂ ಪುತ್ರಿಗಾಗಿ ಎಲ್ಲ ಕಷ್ಟವನ್ನು ಸಹಿಸಿಕೊಂಡಿದ್ದೆ. ಆದರೆ, ನನ್ನನ್ನು ಕೆಟ್ಟದಾಗಿ ನಿಂದಿಸುವುದು, ಹಲವು ಮಹಿಳೆಯರೊಂದಿಗೆ ಸಂಭಾಷಣೆ ನಡೆಸುವುದನ್ನು ನೋಡಿದಾಗ ತಾಳ್ಮೆ ಕಳೆದುಕೊಂಡೆ. ಇದನ್ನು ಇನ್ನು ತಾಳಲು ಸಾಧ್ಯವಿಲ್ಲ. ಎಲ್ಲ ಲಭ್ಯವಿರುವ ಸಾಕ್ಷಿಗಳೊಂದಿಗೆ ಶಮಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಯೋಜನೆ ಹಾಕಿಕೊಂಡಿದ್ದೇನೆ’’ ಎಂದು ಜಹಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News