ಚಲಿಸುತ್ತಿದ್ದ ಬೈಕ್ ಗೆ ತುಳಿದ ಪೊಲೀಸ್: ರಸ್ತೆಗೆ ಬಿದ್ದು ಗರ್ಭಿಣಿ ಮೃತ್ಯು

Update: 2018-03-08 06:28 GMT

ತಿರುಚ್ಚಿ, ಮಾ.8:  ಪೊಲೀಸ್ ದೌರ್ಜನ್ಯದ ಪರಮಾವಧಿ ಎಂದು ಹೇಳಬಹುದಾದ ಘಟನೆಯೊಂದರಲ್ಲಿ  ಪೊಲೀಸ್ ಅಧಿಕಾರಿಯೊಬ್ಬರು ಬೈಕ್ ಗೆ ತುಳಿದ ಪರಿಣಾಮ ಅದರಲ್ಲಿ ತನ್ನ ಪತಿಯ ಜತೆ ಸಾಗುತ್ತಿದ್ದ ಗರ್ಭಿಣಿಯೊಬ್ಬರು ರಸ್ತೆಗುರುಳಿ ಮೃತಪಟ್ಟಿರುವ ಘಟನೆ ನಡೆದಿದೆ. ಘಟನೆ ತಿರುಚ್ಚಿ ಸಮೀಪದ ತುವಕುಡಿ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.

ಮೃತ  ಮಹಿಳೆ ಉಷಾರ ಪತಿ ರಾಜಾ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದಾರೆ. ದಂಪತಿಯ ಬೈಕ್ ನಗರದ ಬಿಎಚ್‍ಇಎಲ್ ಮುಖ್ಯ ಕಾರ್ಯಾಲಯದ ಸಮೀಪ ಹಾದು ಹೋಗುತ್ತಿರುವಾಗ ಅದನ್ನು ನಿಲ್ಲಿಸಲು ಇನ್‍ಸ್ಪೆಕ್ಟರ್ ಕಾಮರಾಜ್ ಸಂಜ್ಞೆ ಮಾಡಿದ್ದರು. ಆದರೆ ಅವರ ಸೂಚನೆಯನ್ನು ಧಿಕ್ಕರಿಸಿ ಬೈಕ್ ಮುಂದೆ ಸಾಗಿದಾಗ ತನ್ನ ದ್ವಿಚಕ್ರ ವಾಹನದಲ್ಲಿ ಅದನ್ನು ಹಿಂಬಾಲಿಸಿದ ಇನ್‍ಸ್ಪೆಕ್ಟರ್ ಆ ಬೈಕನ್ನು ತುಳಿದಿದ್ದು, ಪರಿಣಾಮ ದಂಪತಿ ರಸ್ತೆಗುರುಳಿದ್ದರು. ತಲೆಗುಂಟಾದ ಗಂಭೀರ ಗಾಯದಿಂದ ಮೂರು ತಿಂಗಳ ಗರ್ಭಿಣಿಯಾಗಿದ್ದ ಉಷಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಜನರ ಆಕ್ರೋಶ ತನ್ನತ್ತ ತಿರುಗಬಹುದೆಂಬ ಭಯದಿಂದ ಆರೋಪಿ ಇನ್‍ಸ್ಪೆಕ್ಟರ್ ಅಷ್ಟೊತ್ತಿಗಾಗಲೇ ಸ್ಥಳದಿಂದ ಕಾಲ್ಕಿತ್ತಿದ್ದರು.

ಸ್ಥಳದಲ್ಲಿ ಸೇರಿದ  ಸುಮಾರು 3,000ಕ್ಕೂ ಅಧಿಕ ಆಕ್ರೋಶಿತ ಜನ ಪ್ರತಿಭಟಿಸಲಾರಂಭಿಸಿದ ಕಾರಣ ತಂಜಾವೂರು-ತಿರುಚ್ಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ  ಹಲವು ಗಂಟೆಗಳ ಕಾಲ ಸಾರಿಗೆ ಸಮಸ್ಯೆ ಉಂಟಾಯಿತು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು  ಧಾವಿಸಿ ಉದ್ರಿಕ್ತ ಜನರನ್ನು ಸಮಾಧಾನಿಸಲು ಯತ್ನಿಸಿದಾಗ ಅವರತ್ತ ಹಲವರು ಕಲ್ಲೆಸೆದ ಪರಿಣಾಮ ಪೊಲೀಸರು ಲಾಠಿ ಚಾರ್ಜ್ ನಡೆಸಬೇಕಾಯಿತು. ಆರೋಪಿ ಇನ್‍ಸ್ಪೆಕ್ಟರ್ ಕೂಡ  ಆಸ್ಪತ್ರೆಗೆ ದಾಖಲಾಗಿ ತನಗೆ ಗಾಯಗಳುಂಟಾಗಿವೆ ಎಂದು ಹೇಳಿಕೊಂಡಿದ್ದು, ಆತನನ್ನು ಈಗಾಗಲೇ ಬಂಧಿಸಲಾಗಿದೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ಆಕ್ರೋಶ ಮೂಡಿಸಿದೆ.

ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಕನ್ಯಾಕುಮಾರಿ ಜಿಲ್ಲೆಯ ಕಲ್ಲುಪಾಳಂ ಎಂಬಲ್ಲಿ ಹೆಲ್ಮೆಟ್ ಧರಿಸದೆಯೇ ಬೈಕ್ ಚಲಾಯಿಸುತ್ತಿದ್ದವನೊಬ್ಬ ಪೊಲೀಸರ ಸೂಚನೆಯ ಮೇರೆಗೆ ಬೈಕ್ ನಿಲ್ಲಿಸದೇ ಮುಂದಕ್ಕೆ ಸಾಗಿದಾಗ ಪೊಲೀಸ್ ಸಿಬ್ಬಂದಿಯೊಬ್ಬ ಆತನನ್ನು ಹಿಂಬಾಲಿಸಿ ಆತನತ್ತ ಲಾಠಿ ಬೀಸಿದ ಪರಿಣಾಮ ಆತ ಗಂಭೀರ ಗಾಯಗೊಂಡಿದ್ದ. ಈ ಘಟನೆ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News