ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಜತೆ ಮಾತುಕತೆಗೆ ಟ್ರಂಪ್ ಒಪ್ಪಿಗೆ

Update: 2018-03-09 06:39 GMT

ವಾಷಿಂಗ್ಟನ್, ಮಾ.9: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಆಹ್ವಾನದ ಮೇರೆಗೆ ಅವರನ್ನು ಭೇಟಿಯಾಗಲು ಒಪ್ಪಿದ್ದಾರೆ. ಈ ಭೇಟಿಯ ಸಮಯ ಮತ್ತು ದಿನಾಂಕವನ್ನು ಮುಂದೆ ನಿರ್ಧರಿಸಲಾಗುವುದು ಎಂದು ವೈಟ್ ಹೌಸ್ ತಿಳಿಸಿದೆ.

ಪ್ಯೊಂಗ್‍ಯಂಗ್ ನಲ್ಲಿ ಬುಧವಾರ ನಡೆದ ಸಭೆಯಲ್ಲಿನ ನಿರ್ಧಾರದಂತೆ ಕಿಮ್ ಅವರ ಆಹ್ವಾನದೊಂದಿಗೆ ದಕ್ಷಿಣ ಕೊರಿಯಾ ಅಧಿಕಾರಿಗಳು  ಗುರುವಾರ ವಾಷಿಂಗ್ಟನ್ ಗೆ ಆಗಮಿಸಿದ ನಂತರ ಅಮೆರಿಕಾದ ಅಧಿಕಾರಿಗೊಳಡನೆ ನಡೆಸಿದ ಮಾತುಕತೆಗಳಂತೆ ಮೇಲಿನ ಘೋಷಣೆ ಮಾಡಲಾಗಿದೆ.

ಕಿಮ್ ಅವರು ಅಧ್ಯಕ್ಷ ಟ್ರಂಪ್ ಅವರನ್ನು ಆದಷ್ಟು ಬೇಗ ಭೇಟಿಯಾಗಲು ಆಸಕ್ತಿ ತೋರಿಸಿದ್ದಾಗಿ ವೈಟ್ ಹೌಸ್ ನಲ್ಲಿ ಮಾತನಾಡಿದ ದಕ್ಷಿಣ ಕೊರಿಯಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಚುಂಗ್ ಯು-ಯೊಂಗ್ ತಿಳಿಸಿದ್ದಾರಲ್ಲದೆ, ಅಧ್ಯಕ್ಷರು ಕಿಮ್ ಅವರನ್ನು ಮೇ ತಿಂಗಳೊಳಗಾಗಿ ಭೇಟಿಯಾಗುವುದಾಗಿಯೂ ಹೇಳಿದ್ದಾರೆಂದು ಮಾಹಿತಿ ನೀಡಿದ್ದಾರೆ.

ಉತ್ತರ ಕೊರಿಯಾದ ಎಲ್ಲಾ ಪರಮಾಣು ಮತ್ತು ಕ್ಷಿಪಣಿ ಪರೀಕ್ಷೆಗಳನ್ನು ನಿಲ್ಲಿಸುವುದಾಗಿ ಉತ್ತರ ಕೊರಿಯಾದ ನಾಯಕ  ತಮ್ಮ ಜತೆಗಿನ ಸಭೆಯಲ್ಲಿ ಪ್ರಮಾಣ ಮಾಡಿದ್ದಾರೆಂದು  ದಕ್ಷಿಣ ಕೊರಿಯಾ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕೊರಿಯಾದ ನಿಯೋಗ ಹಾಗೂ ಅಧ್ಯಕ್ಷ ಮೂನ್ ಅವರ ಸೌಜನ್ಯಭರಿತ ಮಾತುಗಳನ್ನು ಟ್ರಂಪ್ ಅವರು ಪ್ರಶಂಸಿಸಿದ್ದಾರೆ. ಉತ್ತರ ಕೊರಿಯಾ ಪರಮಾಣುಮುಕ್ತವಾಗಿರುವುದನ್ನು ನಾವು ನೋಡಲು ಬಯಸುತ್ತೇವೆ. ಅಲ್ಲಿಯ ತನಕ ಎಲ್ಲಾ ನಿರ್ಬಂಧಗಳು ಹಾಗೂ ಗರಿಷ್ಠ ಒತ್ತಡ ಮುಂದುವರಿಯುವುದು ಎಂದು ಅವರು ತಿಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಕೊಠಡಿಗೆ ಸ್ವತಃ ಟ್ರಂಪ್ ಅವರೇ ಆಗಮಿಸಿ ದಕ್ಷಿಣ ಕೊರಿಯಾದ ಅಧಿಕಾರಿಗಳೊಡನೆ ಮಾತನಾಡಲು ಸಿದ್ಧರಾಗಿರಿ ಎಂದು ಹೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News