×
Ad

12,400 ಕೋಟಿ ಮೌಲ್ಯದ ಆಸ್ತಿಯಿಂದ ಎಲ್ಲಾ ಬಾಕಿ ಚುಕ್ತಾ

Update: 2018-03-09 15:54 IST

ಬೆಂಗಳೂರು,ಮಾ.9 : ತಾನು ಹೊಂದಿರುವ ಒಟ್ಟು  ಆಸ್ತಿ/ಷೇರುಗಳ ಮಾರುಕಟ್ಟೆ ಮೌಲ್ಯ ರೂ 12,400 ಕೋಟಿಗೂ ಅಧಿಕವಾಗಿರುವುದರಿಂದ ಅದರ ಮೂಲಕ ಕಿಂಗ್ ಫಿಶರ್ ಏರ್ ಲೈನ್ಸ್ ಸಂಸ್ಥೆಯ  ರೂ. 6,000 ಕೋಟಿ ಬ್ಯಾಂಕ್ ಸಾಲ, ಅದರ ಮೇಲಿನ ಬಡ್ಡಿ ಹಾಗೂ ಇತರ ಎಲ್ಲಾ ಬಾಕಿಗಳನ್ನೂ ಸುಲಭವಾಗಿ ತೀರಿಸಬಹುದು ಎಂದು ಕರ್ನಾಟಕ ಹೈಕೋರ್ಟಿನ ಮುಂದೆ ಮದ್ಯ ದೊರೆ ವಿಜಯ್ ಮಲ್ಯ ಒಡೆತನದ ಯುನೈಟೆಡ್ ಬ್ರಿವರೀಸ್ ಹೋಲ್ಡಿಂಗ್ಸ್  ಗುರುವಾರ ಹೇಳಿಕೊಂಡಿದೆ. ಈಗ ಸ್ಥಗಿತಗೊಂಡಿರುವ ಕಿಂಗ್ ಫಿಶರ್ ಏರ್ ಲೈನ್ಸ್ ಪಡೆದ ಎಲ್ಲಾ  ಸಾಲಗಳಿಗೆ ಯುನೈಟೆಡ್ ಬ್ರಿವರೀಸ್ ಹೋಲ್ಡಿಂಗ್ಸ್ ಸಂಸ್ಥೆ ಕಾರ್ಪೊರೇಟ್ ಗ್ಯಾರೆಂಟರ್ ಆಗಿದೆ.

ಜಾರಿ ನಿರ್ದೇಶನಾಲಯವು ಕಂಪೆನಿಗೆ ಸೇರಿದ ಆಸ್ತಿಗಳು ಹಾಗೂ ಷೇರುಗಳನ್ನು ಜಫ್ತಿಗೊಳಿಸಿರುವುದರಿಂದ  ಈ ಹಿಂದೆ ನ್ಯಾಯಾಲಯ ಸೂಚಿಸಿದಂತೆ ಹೆಚ್ಚುವರಿ ಠೇವಣಿಯಿಡುವ ಯಾವುದೇ ಪ್ರಸ್ತಾಪ ಮುಂದಿಡಲು ಕಂಪೆನಿ ಅಸಮರ್ಥವಾಗಿದೆ ಎಂದೂ ನ್ಯಾಯಾಲಯಕ್ಕೆ ಅದು ತಿಳಿಸಿದೆ.

ಸಂಸ್ಥೆಯ ಹಿರಿಯ ವಕೀಲ ಸಾಜನ್ ಪೂವಯ್ಯ ಅವರು ನ್ಯಾಯಾಲಯಕ್ಕೆ ನೀಡಿದ ಮಾಹಿತಿಯಂತೆ  ಜನವರಿಯಲ್ಲಿ ಸಂಸ್ಥೆಯ ಆಸ್ತಿಯ ಒಟ್ಟು ಮೌಲ್ಯ ರೂ. 13,400 ಕೋಟಿಯಷ್ಟಾಗಿತ್ತು. ಆದರೆ  ಮಾರುಕಟ್ಟೆಯಲ್ಲಿನ ಏರಿಳಿತದಿಂದಾಗಿ ಈಗ ಅದರ ಮೌಲ್ಯ ರೂ. 12,400 ಕೋಟಿಗೆ ಇಳಿದಿದೆ ಎಂದೂ ತಿಳಿಸಿದ ಅವರು ಬಾಕಿ ಸಾಲ ಮೊತ್ತ ರೂ. 10,000 ಕೋಟಿಗಿಂತ ಅಧಿಕವಾಗದು ಎಂದಿದ್ದಾರೆ.

ಇನ್ನೊಂದು ಅಪೀಲಿನ ಸಂಬಂಧ ತಮ್ಮ ವಾದ ಮಂಡಿಸಿದ ಹಿರಿಯ ವಕೀಲ ಉದಯ್  ಹೊಳ್ಳ,  ಕರ್ನಾಟಕ ಹೈಕೋರ್ಟಿನಲ್ಲಿ ಠೇವಣಿ ರೂಪದಲ್ಲಿರುವ ರೂ 1,280 ಕೋಟಿ ಹಣಕ್ಕೆ ರೂ. 137 ಕೋಟಿ ಬಡ್ಡಿ ಸೇರಿಕೊಂಡು ಒಟ್ಟು ರೂ 1,417 ಕೋಟಿಯಷ್ಟಾಗಿದೆ. ಆದರೆ ಷೇರು ಬೆಲೆ ಮೌಲ್ಯ ಅನಿಶ್ಚಿತತೆಯಿಂದ ಕೂಡಿರುವುದರಿಂದ ಕಂಪೆನಿ ಮಾಡುವ ಯಾವುದೇ ಆಫರ್ ಸಮಾಧಾನಕರವಾಗಿರಬೇಕಿದೆ ಎಂದರು.

ಪ್ರಕರಣದ ಮುಂದಿನ ವಿಚಾರಣೆಯನ್ನು ಎಪ್ರಿಲ್ 2ಕ್ಕೆ ನಿಗದಿ ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News