ಕಾರು ಅಪಘಾತ: ಮೂವರು ವಿದ್ಯಾರ್ಥಿನಿಯರು ಮೃತ್ಯು
ಬೆಂಗಳೂರು, ಮಾ.9: ಶರವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಮೂವರು ಎಂಬಿಎ ವಿದ್ಯಾರ್ಥಿನಿಯರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿರುವ ಘಟನೆ ಇಲ್ಲಿನ ಹುಲಿಮಾವು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೇರಳ ಮೂಲದ ಶೃತಿ ಗೋಪಿನಾಥ್(23), ಹರ್ಷಿತಾ ಶ್ರೀವಾತ್ಸವ್(24), ಪವಿತ್ರ ಕೊಯ್ಲಿ ಮೃತ ವಿದ್ಯಾರ್ಥಿನಿಯರು ಎಂದು ಪೊಲೀಸರು ಗುರುತಿಸಿದ್ದಾರೆ.
ಶುಕ್ರವಾರ ನಗರದ ನೈಸ್ ರಸ್ತೆಯ ಬನ್ನೇರುಘಟ್ಟ ಜಂಕ್ಷನ್ ಬಳಿ ನಾಲ್ವರು ವಿದ್ಯಾರ್ಥಿಗಳು ಕಾರಿನಲ್ಲಿ ಹೋಗುತ್ತಿದ್ದಾಗ ಬೇಗೂರು ಕೊಪ್ಪಬ್ರಿಡ್ಜ್ ಸಮೀಪ ಅತಿ ವೇಗದಿಂದಾಗಿ ಚಾಲಕನ ನಿಯಂತ್ರಣ ತಪ್ಪಿಕಾರು ಪಲ್ಟಿಯಾಗಿದೆ. ಪರಿಣಾಮವಾಗಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಹುಳಿಮಾವು ಸಂಚಾರ ಠಾಣೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.