×
Ad

ಗೌರಿ ಲಂಕೇಶ್ ಹತ್ಯೆ ಪ್ರಕರಣ : ನವೀನ್ ಮತ್ತೆ 5 ದಿನ ಸಿಟ್ ಕಸ್ಟಡಿಗೆ

Update: 2018-03-09 19:45 IST

ಬೆಂಗಳೂರು, ಮಾ.9: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಶಂಕಿತ ಆರೋಪಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತ ಕೆ.ಟಿ.ನವೀನ್ ಯಾನೆ ಹೊಟ್ಟೆ ಮಂಜನನ್ನು ಮತ್ತೆ ಐದು ದಿನಗಳ ಕಾಲ ವಶಕ್ಕೆ ಪಡೆದಿರುವ ಸಿಟ್ ತನಿಖಾಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಪರು ಪರೀಕ್ಷೆ ನಡೆಸಲು ಅನುಮತಿ ನೀಡುವಂತೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ.

ಶುಕ್ರವಾರ ನವೀನ್ ಕುಮಾರ್‌ನ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಸಿಟ್ ತನಿಖಾಧಿಕಾರಿಗಳು ನಗರದ ಮೂರನೆ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಬೆಳಗಾವಿ, ಕೊಡೈಕೆನಾಲ್, ಗೋವಾ ಸೇರಿದಂತೆ ಹಲವೆಡೆ ಕರೆದುಕೊಂಡು ಹೋಗಬೇಕಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಐದು ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕೆಂಬ ಸಿಟ್ ಮನವಿಯನ್ನು ಒಪ್ಪಿದ ನ್ಯಾಯಾಧೀಶ ವೆಂಕಣ್ಣ ಹೊಸಮನಿ ಅವರು ಐದು ದಿನಗಳ ಕಾಲ ನವೀನ್‌ನನ್ನು ಸಿಟ್ ವಶಕ್ಕೆ ನೀಡಿದರು.

ಐದು ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಸಿಟ್ ಪರ ವಕೀಲೆ ಲತಾ ಮನವಿ ಮಾಡಿದರು. ಆದರೆ, ಈಗಾಗಲೇ ಪೊಲೀಸರು 20 ದಿನಗಳ ಕಾಲ ವಿಚಾರಣೆ ನಡೆಸಿದ್ದಾರೆ. ಬಲವಂತವಾಗಿ ಹೇಳಿಕೆ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ತಮ್ಮ ಕಕ್ಷಿದಾರನನ್ನು ಸಿಲುಕಿಸಲು ಸಿಟ್ ಅಧಿಕಾರಿಗಳು ಯತ್ನಿಸುತ್ತಿದ್ದಾರೆ ಎಂದು ನವೀನ್ ಪರ ವಕೀಲರು ವಾದ ಮಂಡಿಸಿದರು ಎನ್ನಲಾಗಿದೆ.

ಮಂಪರು ಪರೀಕ್ಷೆ ಬಗೆಗಿನ ಆದೇಶವನ್ನು ಮಾ.15ರಂದು ನೀಡುವುದಾಗಿ ನ್ಯಾಯಾಲಯ ಹೇಳಿದೆ. ಈ ಮಧ್ಯೆ ಸಿಟ್ ಅಧಿಕಾರಿಗಳು ಆರೋಪಿಯ ಮಂಪರು ಪರೀಕ್ಷೆಗೆ ಮನವಿ ಮಾಡಿದ್ದರ ಬಗ್ಗೆ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ಆರೋಪಿ ನವೀನ್, ಮಂಪರು ಪರೀಕ್ಷೆಗೆ ಒಳಪಡಲು ನಿರಾಕರಿಸಿದ್ದಾನೆ ಎನ್ನಲಾಗಿದೆ.

ಬಳಿಕ ತನಿಖಾಧಿಕಾರಿಗಳು, ನವೀನ್ ವಿಚಾರಣೆ ವೇಳೆ ನೀಡಿದ ಹೇಳಿಕೆಗಳ ವಿಡಿಯೊ ತೋರಿಸಿ ಆತನೇ ಮಂಪರು ಪರೀಕ್ಷೆಗೆ ಒಪ್ಪಿಕೊಂಡಿದ್ದಾನೆ. ಇದೀಗ ವಿರುದ್ಧವಾಗಿ ಮಾತನಾಡುತ್ತಿದ್ದು, ಮಂಪರು ಪರೀಕ್ಷೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಿದ್ದಾನೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News