ವೆಂಗ್‌ಸರ್ಕಾರ್ ಆರೋಪ ನಿರಾಧಾರ: ಶ್ರೀನಿವಾಸನ್

Update: 2018-03-09 18:41 GMT

ಚೆನ್ನೈ, ಮಾ.9: ಮುಂಬೈನಲ್ಲಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತದ ಮಾಜಿ ನಾಯಕ ದಿಲೀಪ್ ವೆಂಗ್‌ಸರ್ಕಾರ್ ನೀಡಿರುವ ಹೇಳಿಕೆಗೆ ಮಾಜಿ ಐಸಿಸಿ ಚೇರ್ಮನ್ ಹಾಗೂ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 ತಮಿಳುನಾಡಿನ ಎಸ್.ಬದ್ರಿನಾಥ್ ಬದಲಿಗೆ 19ರ ಹರೆಯದ ವಿರಾಟ್ ಕೊಹ್ಲಿಯವರನ್ನು ಟೀಮ್ ಇಂಡಿಯಾಕ್ಕೆ ಸೇರಿಸಿಕೊಂಡ ತನ್ನ ನಿರ್ಧಾರಕ್ಕೆ ಆಕ್ರೋಶಗೊಂಡಿದ್ದ ಆಗಿನ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್‌ರಿಂದಾಗಿಯೇ ತಾನು ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನವನ್ನು ಕಳೆದುಕೊಳ್ಳುವಂತಾಯಿತು ಎಂದು ವೆಂಗ್‌ಸರ್ಕಾರ್ ಆರೋಪಿಸಿದ್ದರು.

 ‘‘ನಾನು ಈ ಆರೋಪವನ್ನು ಸಂಪೂರ್ಣವಾಗಿ ಅಲ್ಲಗಳೆಯುವೆ. ಇದೊಂದು ಸುಳ್ಳು, ಆಧಾರರಹಿತ ಹಾಗೂ ಪ್ರಚೋದನಾಕಾರಿ ಹೇಳಿಕೆಯಾಗಿದೆ. ಮಾಜಿ ಆಯ್ಕೆ ಸಮಿತಿ ಅಧ್ಯಕ್ಷರು ಈ ರೀತಿ ವರ್ತಿಸುವುದು ಸರಿಯಲ್ಲ’’ ಎಂದು ಶ್ರೀನಿವಾಸನ್ ಹೇಳಿದ್ದಾರೆ. ‘‘ನಾವೆಲ್ಲರೂ ವೆಂಗ್‌ಸರ್ಕಾರ್ ಬ್ಯಾಟಿಂಗ್ ತುಂಬಾ ಇಷ್ಟಪಡುತ್ತಿದ್ದೆವು. 1994ರಲ್ಲಿ ನಡೆದ ಸಹಾಯಾರ್ಥ ಪಂದ್ಯದಲ್ಲಿ ಇಂಡಿಯಾ ಸಿಮೆಂಟ್ಸ್ ವತಿಯಿಂದ 1 ಲಕ್ಷ ರೂ. ಕೊಡುಗೆ ನೀಡಲಾಗಿತ್ತು. ವೆಂಗ್‌ಸರ್ಕಾರ್ ಕೋರಿಕೆಯ ಮೇರೆಗೆ ಮುಂಬೈನ ದಾದರ್ ಯೂನಿಯನ್ ಕ್ಲಬ್‌ಗೆ ಇಂಡಿಯಾ ಸಿಮೆಂಟ್ಸ್ 10 ಲಕ್ಷ ರೂ. ನೀಡಿತ್ತು. ನಾನು ಅವರನ್ನು ಓರ್ವ ಕ್ರಿಕೆಟಿಗನಾಗಿ ಸದಾ ಕಾಲ ಗೌರವಿಸುತ್ತೇನೆ. ಆದರೆ, ಅವರು ಈರೀತಿ ಮಾತನಾಡುತ್ತಿರುವುದಕ್ಕೆ ಬೇಸರವಾಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News