×
Ad

ಬೆಂಗಳೂರು: ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತರ ಸ್ಥಾನಮಾನ ಕಲ್ಪಿಸಲು ಒತ್ತಾಯ

Update: 2018-03-10 18:41 IST

ಬೆಂಗಳೂರು, ಮಾ.10: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ನೀಡಿರುವ ವರದಿಯ ಅನ್ವಯ ಲಿಂಗಾಯತ ಧಾರ್ಮಿಕ ಅಲ್ಪಸಂಖ್ಯಾತ ಧರ್ಮ ಎಂದು ಘೋಷಿಸಿ, ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಲಿಂಗಾಯತ ಧರ್ಮ ಮಹಾಸಭಾದ ಗೌರವಾಧ್ಯಕ್ಷೆ ಡಾ.ಮಾತೆ ಮಹಾದೇವಿ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಮೋಹನ್ ದಾಸ್ ಸಮಿತಿಯು ಲಿಂಗಾಯತರು ಹಾಗೂ ವೀರಶೈವರ ದಾಖಲೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಿದೆ. ಈ ವರದಿಯಲ್ಲಿ ಲಿಂಗಾಯತ ಧಾರ್ಮಿಕ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಸ್ವತಂತ್ರ ಧರ್ಮ ಎಂದು ನಿರ್ಣಯಿಸಿದೆ. ಇದು 900 ವರ್ಷಗಳ ನಂತರ ಈ ಐತಿಹಾಸಿಕ ಸತ್ಯ ಘೋಷಣೆಯಾಗಿದೆ. ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿಯ ಸತ್ಯಾಸತ್ಯತೆಯನ್ನು ಗುರುತಿಸಿ ಸಚಿವ ಸಂಪುಟದಲ್ಲಿ ಲಿಂಗಾಯತರು ಧಾರ್ಮಿಕ ಅಲ್ಪಸಂಖ್ಯಾತರ ಧರ್ಮವೆಂದು ನಿರ್ಣಯ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಮನವಿ ಮಾಡಿದರು.

ಹನ್ನೆರಡನೆ ಶತಮಾನಕ್ಕೂ ಮುಂಚೆ ಸ್ಥಾಪನೆಗೊಂಡ ಜೈನ, ಬೌದ್ಧ ಧರ್ಮಗಳಿಗೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಿ ಅಲ್ಪಸಂಖ್ಯಾತರ ಸ್ಥಾನಮಾನ ಕಲ್ಪಿಸಲಾಗಿದೆ. ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿದಾಗ ಕಾಳಮುಖರು, ಪಾಶುಪತರು, ಸೇರಿದಂತೆ ಎಲ್ಲ ಜನಾಂಗದವರು ಲಿಂಗಾಯತ ಧರ್ಮಕ್ಕೆ ಸೇರಿದ್ಧಾರೆ. ಹೀಗಾಗಿ, ಶತಮಾನಗಳಿಂದ ವೀರಶೈವರು ಲಿಂಗಾಯತ ಸಮಾಜದಲ್ಲಿ ಒಂದು ಉಪಪಂಗಡವಾಗಿ ಉಳಿದಿದ್ದಾರೆ. ಇದನ್ನು ಬ್ರಿಟಿಷರ ಕಾಲದ ಗೆಜೆಟಿಯರ್‌ನಿಂದ ಖಚಿತಪಡಿಸಿಕೊಳ್ಳಬಹುದು ಎಂದು ತಿಳಿಸಿದರು.

ನಮ್ಮ ಪ್ರತಿನಿಧಿಯಲ್ಲ: 1904ರಲ್ಲಿ ಸ್ಥಾಪನೆಯಾದ ವೀರಶೈವ ಮಹಾಸಭಾ ವೀರಶೈವರ ಹಿತಾಸಕ್ತಿ ಕಾಪಾಡುವ ಸಂಸ್ಥೆ ಅಷ್ಟೆ. ಅಖಂಡ ಲಿಂಗಾಯತ ಸಮಾಜದ ಪ್ರತಿನಿಧಿಯಲ್ಲ. ಆದ್ದರಿಂದ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಭಿಪ್ರಾಯವನ್ನು ಲಿಂಗಾಯತ ಸಮುದಾಯ ಒಪ್ಪುವುದಿಲ್ಲ ಎಂದ ಅವರು, ರಂಭಾಪುರಿ ಸ್ವಾಮೀಜಿ, ಈಶ್ವರ ಖಂಡ್ರೆಯವರ ಶಾಲಾ ಪ್ರಮಾಣ ಪತ್ರದಲ್ಲಿ ಲಿಂಗಾಯತ ಎಂದೇ ನಮೂದಾಗಿದೆ. ಹೀಗಾಗಿ, ಬಸವಣ್ಣನವರನ್ನು ಧರ್ಮಗುರು ಎಂದು ಸ್ವೀಕರಿಸಿ, ಲಿಂಗಾಯತ ಧರ್ಮವನ್ನು ಒಪ್ಪಿಕೊಳ್ಳಬೇಕೆಂದು ಮಾತೆ ಮಹಾದೇವಿ ನುಡಿದರು.

ಸುದ್ದಿಗೋಷ್ಠಿಯಲ್ಲಿ ಬೀದರ್ ಲಿಂಗಾಯತ ಸಮುದಾಯದ ಮುಖಂಡ ಶ್ರೀಕಾಂತ ಸ್ವಾಮಿ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ಚಂದ್ರವೌಳಿ, ಜಯಶ್ರೀ, ಶರಣ ಸಚ್ಚಿದಾನಂದ ಸೇರಿದಂತೆ ಪ್ರಮುಖರಿದ್ದರು.

ನಾವು ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಬಂಧಿಯಾಗಿಲ್ಲ. ಹೀಗಾಗಿ, ನಮ್ಮನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ.
-ಮಾತೆ ಮಹಾದೇವಿ ಲಿಂಗಾಯತ ಧರ್ಮ ಮಹಾಸಭಾದ ಗೌರವಾಧ್ಯಕ್ಷೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News